ಲಂಚ ಕೇಳಿದ್ದಕ್ಕೆ ಯುವಕರಿಬ್ಬರು ಬೆಂಕಿ ಹಚ್ಚಿಕೊಂಡರು!

Update: 2017-09-04 03:46 GMT

ಹೈದರಾಬಾದ್, ಸೆ.4: ಗ್ರಾಮ ಕಂದಾಯ ಅಧಿಕಾರಿ ಲಂಚ ಕೇಳಿದ್ದಕ್ಕೆ ಯುವಕರಿಬ್ಬರು ಮಣಕೊಂದೂರು ಶಾಸಕರ ಕಚೇರಿ ಎದುರೇ ಬೆಂಕಿ ಹಚ್ಚಿಕೊಂಡು ಆತ್ಮಾಹುತಿಗೆ ಯತ್ನಿಸಿದ ಘಟನೆ ತೆಲಂಗಾಣದ ತಿಮ್ಮಾಪುರದಲ್ಲಿ ನಡೆದಿದೆ.

ಉಚಿತವಾಗಿ ಸರ್ಕಾರದಿಂದ ಭೂಮಿ ವಿತರಿಸುವ ಯೋಜನೆಯಡಿ ಫಲಾನುಭವಿಗಳ ಪಟ್ಟಿಗೆ ಈ ಇಬ್ಬರ ಹೆಸರು ಸೇರಿಸಲು ಗ್ರಾಮದ ಕಂದಾಯ ಅಧಿಕಾರಿ ಲಂಚ ಕೇಳಿದ್ದೇ ಈ ಆತ್ಮಾಹುತಿ ಘಟನೆಗೆ ಕಾರಣ ಎನ್ನಲಾಗಿದೆ.

ಅತ್ಮಾಹುತಿಗೆ ಯತ್ನಿಸಿದ ಮಾಂಕಾಳಿ ಶ್ರೀನಿವಾಸ್ (27) ಹಾಗೂ ಯಳಾಲ ಪರಶುರಾಮುಲು (26) ಸಿದ್ದಿಪೇಟೆ ಜಿಲ್ಲೆ ಬೆಜ್ಜೆಂಕಿ ಮಂಡಲದ ಗುಡೇಮ್ ಗ್ರಾಮದವರು. ಅಧಿಕಾರಿ ಲಂಚ ಕೇಳಿದ್ದರಿಂದ ಬೇಸತ್ತ ಯುವಕರು ಮನಕೊಂಡೂರು ಶಾಸಕ ರಾಸಮಾಯಿ ಬಾಲಕೃಷ್ಣನ್ ಅವರನ್ನು ಭೇಟಿ ಮಾಡಲು ಮುಂದಾದರು. ಆದರೆ ಆ ವೇಳೆ ಶಾಸಕರು ಕಚೇರಿಯಲ್ಲಿ ಇರಲಿಲ್ಲ. ಇದರಿಂದ ತಾಳ್ಮೆ ಕಳೆದುಕೊಂಡ ಯುವಕರು ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡರು ಎಂದು ಪೊಲೀಸರು ಹೇಳಿದ್ದಾರೆ.
ಗ್ರಾಮಸ್ಥರು ತಕ್ಷಣ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿದರು. ಶ್ರೀನಿವಾಸ್ ಅವರಿಗೆ ಶೇಕಡ 60 ಹಾಗೂ ಪರಶುರಾಮುಲು ಅವರಿಗೆ ಶೇಕಡ 40ರಷ್ಟು ಸುಟ್ಟ ಗಾಯಗಳಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಯುವಕರನ್ನು ಆಸ್ಪತ್ರೆಯಲ್ಲಿ ಭೇಟಿ ಮಾಡಿದ ತೆಲಂಗಾಣ ಹಣಕಾಸು ಸಚಿವ ಎಟೇಲಾ ರಾಜೇಂದ್ರ ಘಟನೆ ಬಗ್ಗೆ ತನಿಖೆ ನಡೆಸುವಂತೆ ಆದೇಶಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News