ಸಂಪುಟ ದರ್ಜೆಗೆ ಭಡ್ತಿ: ಅಬ್ಬಾಸ್ ನಕ್ವಿ ಈಗ ಬಿಜೆಪಿಯಲ್ಲಿ ಪ್ರಮುಖ ಮುಸ್ಲಿಂ ನಾಯಕ

Update: 2017-09-04 03:58 GMT

ಹೊಸದಿಲ್ಲಿ, ಸೆ.4: ಸಂಸದೀಯ ವ್ಯವಹಾರಗಳ ಖಾತೆ ಸಚಿವ ಮುಖ್ತಾರ್ ಅಬ್ಬಾಸ್ ನಕ್ವಿ, ಮೇಲ್ಮನೆಯಲ್ಲಿ ವಿರೋಧಿಗಳ ಬಾಯಿ ಮುಚ್ಚಿಸುವ ಸಾಮರ್ಥ್ಯ, ರಾಜ್ಯಸಭೆಯಲ್ಲಿ ವಿರೋಧಿ ಸದಸ್ಯರ ಪ್ರಾಬಲ್ಯಕ್ಕ ತಡೆ ಒಡ್ಡುವ ಚಾಕಚಕ್ಯತೆ, ಅಲ್ಪಸಂಖ್ಯಾತ ಸಮುದಾಯವನ್ನು ಸುಶಿಕ್ಷಿತ ವರ್ಗವಾಗಿ ಮಾಡಲು ನಡೆಸಿದ ಪ್ರಯತ್ನ ಫಲಕೊಟ್ಟಿದೆ. ಈ ಎಲ್ಲ ಕಾರಣಗಳಿಂದ ನಕ್ವಿ ಕ್ಯಾಬಿನೆಟ್ ದರ್ಜೆಗೆ ಭಡ್ತಿ ಪಡೆದಿದ್ದು, ಎನ್‌ಡಿಎ ಸರ್ಕಾರದ ಪ್ರಮುಖ ಮುಸ್ಲಿಂ ಮುಖವಾಗಿ ಹೊರಹೊಮ್ಮಿದ್ದಾರೆ.

ತೀರಾ ಇತ್ತೀಚಿನವರೆಗೂ ನಕ್ವಿ ಈ ಪದವಿಗಾಗಿ ಹಿರಿಯ ಮುಖಂಡೆ ನಜ್ಮಾ ಹೆಪ್ತುಲ್ಲಾ ಜತೆ ಹೆಣಗಾಡಬೇಕಾದ ಪರಿಸ್ಥಿತಿ ಇತ್ತು. ಹೆಪ್ತುಲ್ಲಾ ರಾಜಭವನಕ್ಕೆ ವರ್ಗಾವಣೆಯಾದ ಬಳಿಕ ನಕ್ವಿ ಸದ್ದುಗದ್ದಲವಿಲ್ಲದೇ, ಯಾವುದೇ ವಿವಾದಗಳಿಗೆ ಎಡೆಯಾಗದಂತೆ ಕಾರ್ಯನಿರ್ವಹಿಸಿ ಮೋದಿಯವರ ಮೆಚ್ಚುಗೆ ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಪಕ್ಷದ ಚುನಾವಣಾ ಘೋಷವಾಕ್ಯಗಳನ್ನು ರೂಪಿಸುವಲ್ಲಿಂದ ಹಿಡಿದು, ಪಕ್ಷದ ವಕ್ತಾರ ಹುದ್ದೆಯವರೆಗೆ ನಕ್ವಿ ಸುಧೀರ್ಘ ಪ್ರಯಾಣ ಬೆಳೆಸಿದ್ದಾರೆ. ನಕ್ವಿ 1998ರಲ್ಲಿ ಪಕ್ಷದ ಉಪಾಧ್ಯಕ್ಷರಾಗಿದ್ದರು. ಅದೇ ವರ್ಷ ಲೋಕಸಭೆಗೆ ಬಿಜೆಪಿ ಟಿಕೆಟ್‌ನಿಂದ ಆಯ್ಕೆಯಾಗಿದ್ದ ಅವರು ಮಾಹಿತಿ ಮತ್ತು ಪ್ರಸಾರ ಖಾತೆಯ ರಾಜ್ಯ ಸಚಿವರಾಗಿ ವಾಜಪೇಯಿ ಸರ್ಕಾರದಲ್ಲಿ ಕಾರ್ಯನಿರ್ವಹಿಸಿದರು.

ಮೂರು ಬಾರಿ ರಾಜ್ಯಸಭೆ ಸದಸ್ಯರಾಗಿ, ಒಂದು ಬಾರಿ ಲೋಕಸಭಾ ಸದಸ್ಯರಾಗಿ ಕಾರ್ಯನಿರ್ವಹಿಸಿರುವ ನಕ್ವಿ ಅತ್ಯಂತ ಅನುಭವಿ ಸಚಿವರೂ ಹೌದು. ವಿಶೇಷವಾಗಿ ಸಂಸದೀಯ ವ್ಯವಹಾರಗಳಲ್ಲಿ ಪರಿಣತಿ ಗಳಿಸಿರುವ ಹಿನ್ನೆಲೆಯಲ್ಲಿ ಆ ಖಾತೆಗೇ ಅವರನ್ನು ಆಯ್ಕೆ ಮಾಡಲಾಗಿದೆ. ಇದರೊಂದಿಗೆ ಬಿಜೆಪಿಯ ಮತ್ತೊಬ್ಬ ಮುಸ್ಲಿಂ ಮುಖಂಡ ಶಹಾನವಾಝ್ ಹುಸೇನ್ ಹಿನ್ನೆಲೆಗೆ ಸರಿದಂತಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News