ಬೆದರಿಕೆ ಸುಲಿಗೆ ಪ್ರಕರಣ:ಆರೋಪಿಗಳ ಬಂಧನ
ಬೆಂಗಳೂರು, ಸೆ.4: ವೇಶ್ಯಾವಾಟಿಕೆ ನೆಪದಲ್ಲಿ ಯುವಕರನ್ನು ಗುರಿಯಾಗಿಸಿಕೊಂಡು ಸುಲಿಗೆ ಮಾಡುತ್ತಿದ್ದ ಪ್ರಕರಣ ಸಂಬಂಧ ಆರೋಪಿಗಳನ್ನು ಇಲ್ಲಿನ ಬೇಗೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.
ನಗರದ ಚಿಕ್ಕಬೇಗೂರಿನ ಲತಾ(25), ಪವನ್(24), ರೂಪೇನ ಅಗ್ರಹಾರದ ರಾಘವೇಂದ್ರ(20), ವಿರಾಟ್‌ನಗರದ ಕಿರಣ್(19) ಬಂಧಿತ ಆರೋಪಿಗಳೆಂದು ಪೊಲೀಸರು ತಿಳಿಸಿದ್ದಾರೆ.
ವಿವಾಹವಾಗಿ ಪತಿಯಿಂದ ದೂರವಾಗಿದ್ದ ಆರೋಪಿ ಲತಾ, ತನ್ನ ಪ್ರಿಯಕರ ಕಿರಣ್ ಜೊತೆ ಗುಂಪು ಕಟ್ಟಿಕೊಂಡು ರಸ್ತೆ ಬದಿ ನಿಂತು ಡ್ರಾಪ್ ಕೇಳುವ ನೆಪದಲ್ಲಿ ಸಾಫ್ಟ್‌ವೇರ್ ಉದ್ಯೋಗಿಗಳನ್ನು ಮಾತನಾಡಿಸಿ ಪರಿಚಯ ಮಾಡಿಕೊಂಡು, ನಂತರ ಸ್ನೇಹಿತೆಯ ರೂಪದಲ್ಲಿ ಏಕಾಂತಕ್ಕೆ ಆಹ್ವಾನಿಸಿ ತನ್ನ ಮನೆಗೆ ಕರೆಯುತ್ತಿದ್ದಳು ಎಂದು ತಿಳಿದುಬಂದಿದೆ.
ಅಲ್ಲಿಂದ ಲತಾ ಪರಾರಿಯಾಗಿ 10 ನಿಮಿಷದ ಬಳಿಕ ಕಿರಣ್ ಗುಂಪು ಸ್ಥಳಕ್ಕೆ ಬಂದು ಸಾಫ್ಟ್‌ವೇರ್ ಉದ್ಯೋಗಿಯ ಬೆತ್ತಲೆ ಚಿತ್ರಣ ಹಾಗೂ ಹುಡುಗಿಯೊಂದಿಗಿರುವ ವಿಡಿಯೋ ಮಾಡಿ ಬೆದರಿಸಿ ಸುಲಿಗೆ ಮಾಡಿ ಅವರ ಬಳಿ ಮೊಬೈಲ್, ನಗದು, ಚಿನ್ನಾಭರಣ ಕಸಿದು ಪರಾರಿಯಾಗುತ್ತಿದ್ದರು ಎನ್ನುವ ಮಾಹಿತಿ ವಿಚಾರಣೆಯಲ್ಲಿ ತಿಳಿದುಬಂದಿದೆ. ಈ ಸಂಬಂಧ ಮೊಕದ್ದಮೆ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.