ಪ್ರಗತಿಪರ ಪರಂಪರೆಯ ಉಳಿವಿಗೆ ಮೌಢ್ಯಾಚರಣೆ ಪ್ರತಿಬಂಧಕ ಕಾಯ್ದೆ ಜಾರಿ ಅಗತ್ಯ: ಬರಗೂರು ರಾಮಚಂದ್ರಪ್ಪ
ಬೆಂಗಳೂರು, ಸೆ.4: ದೇಶ ಹಾಗೂ ರಾಜ್ಯದಲ್ಲಿ ಸಾವಿರಾರು ವರ್ಷಗಳಿಂದಲೂ ಜಾರಿಯಲ್ಲಿರುವ ಪ್ರಗತಿಪರ ಪರಂಪರೆಯನ್ನು ಉಳಿಸಿ ಜನತೆಯನ್ನು ವೈಜ್ಞಾನಿಕ ಚಿಂತನೆಯತ್ತ ಕೊಂಡೊಯ್ಯಬೇಕಾದರೆ ಮೌಢ್ಯಾಚರಣೆ ಪ್ರತಿಬಂಧಕ ಕಾಯ್ದೆ ಜಾರಿ ಅಗತ್ಯವಿದೆ ಎಂದು ಹಿರಿಯ ಸಾಹಿತಿ ಪ್ರೊ.ಬರಗೂರು ರಾಮಚಂದ್ರಪ್ಪ ಅಭಿಪ್ರಾಯಿಸಿದ್ದಾರೆ.
ಸೋಮವಾರ ಪ್ರಗತಿಪರ ಮಠಾಧೀಶರ ವೇದಿಕೆ ನಗರದ ಸ್ವಾತಂತ್ರ ಉದ್ಯಾನವನದಲ್ಲಿ ವೌಢ್ಯಾಚರಣೆ ಪ್ರತಿಬಂಧಕ ಕಾಯ್ದೆ ಜಾರಿಗೆ ಒತ್ತಾಯಿಸಿ ಆಯೋಜಿಸಿರುವ ಧರಣಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸಾವಿರಾರು ವರ್ಷಗಳಿಂದಲೂ ದೇಶದಲ್ಲಿ ವೈಜ್ಞಾನಿಕವಾಗಿ ಚಿಂತಿಸುವಂತಹ ದೊಡ್ಡ ಪರಂಪರೆಯಿದೆ. ಇದನ್ನು ಜೀವಂತವಾಗಿಟ್ಟು ಮುಂದಿನ ತಲೆಮಾರನ್ನು ಸುಭದ್ರವಾಗಿ ಕಟ್ಟಬೇಕಾದರೆ ವೌಢ್ಯಾಚರಣೆ ಪ್ರತಿಬಂಧಕ ಕಾಯ್ದೆ ಜಾರಿ ಆಗಬೇಕಾಗಿದೆ ಎಂದು ತಿಳಿಸಿದರು.
ಕೆಲವು ಪಟ್ಟಭದ್ರ ಹಿತಾಸಕ್ತಿಗಳು ವೌಢ್ಯಾಚರಣೆ ಪ್ರತಿಬಂಧಕ ಕಾಯ್ದೆಗೆ ವಿರೋಧ ವ್ಯಕ್ತಪಡಿಸುತ್ತಿವೆ ಹಾಗೂ ಕಾಯ್ದೆ ಕುರಿತು ಅಪಪ್ರಚಾರ ಮಾಡುತ್ತಾ ಬರುತ್ತಿವೆ. ಮೌಢ್ಯಾಚರಣೆ ಪ್ರತಿಬಂಧಕ ಕಾಯ್ದೆಯು ಯಾವುದೇ ಧರ್ಮ, ಜಾತಿ ಹಾಗೂ ದೇವರ ವಿರುದ್ಧವಲ್ಲ. ದೇವರ ಹೆಸರಿನಲ್ಲಿ ಕಂದಾಚಾರವನ್ನು ಭಿತ್ತಿ ಜನತೆಯನ್ನು ಶೋಷಿಸುವವರ ವಿರುದ್ಧವೆಂದು ಅವರು ಹೇಳಿದರು.
ರಾಜ್ಯದಲ್ಲಿರುವ ಪ್ರಮುಖ ಮಠಗಳು ಸಾಮಾಜಿಕ ಸರಕಾರವಾಗಿದ್ದು, ಜನರ ಮೇಲೆ ಸಾಕಷ್ಟು ಪ್ರಭಾವ ಬೀರುತ್ತಿವೆ. ಇಂತಹ ಮಠಗಳು ಮೌಢ್ಯಾಚರಣೆ ಪ್ರತಿಬಂಧಕ ಕಾಯ್ದೆ ಜಾರಿ ಕುರಿತು ಧ್ವನಿ ಎತ್ತಿದರೆ ಶೀಘ್ರವಾಗಿ ಕಾಯ್ದೆ ಜಾರಿಗೆ ಬರಲಿದೆ. ಹಾಗೂ ಕಾಯ್ದೆ ಕುರಿತು ಜನಾಭಿಪ್ರಾಯ ಸಂಗ್ರಹಿಸುವುದು ಅಗತ್ಯವಿದೆ ಎಂದು ಅವರು ಹೇಳಿದರು.
ಜನವಾದಿ ಮಹಿಳಾ ಸಂಘಟನೆಯ ಅಧ್ಯಕ್ಷ ಗೀತಾ ಮಾತನಾಡಿ, ವೌಢ್ಯಾಚರಣೆಗೆ ತುತ್ತಾಗಿ ಶೋಷಣೆ ಅನುಭವಿಸುವವರಲ್ಲಿ ಹೆಚ್ಚಿನವರು ಮಹಿಳೆಯರೇ ಆಗಿದ್ದಾರೆ. ಮುಟ್ಟಾದ ಸ್ತ್ರೀಯನ್ನು ಹಾಗೂ ಬಾಣಂತಿಯನ್ನು ಊರಿನ ಆಚೆ ಇಡುವ ಪದ್ಧತಿ ಇನ್ನೂ ಜೀವಂತವಾಗಿದೆ. ಇಂತಹ ವೌಢ್ಯಾಚರಣೆಗೆ ಈಡಾಗುವ ಬಾಣಂತಿಯರು ಅನೇಕ ರೋಗಗಳಿಗೆ ತುತ್ತಾಗಿ ಸಾಯುತ್ತಿದ್ದಾರೆ ಎಂದು ವಿಷಾದಿಸಿದರು.
ಮೌಢ್ಯಾಚರಣೆ ಪ್ರತಿಬಂಧಕ ಕಾಯ್ದೆಗೆ ಜಾರಿಗೆ ಸಚಿವ ಸಂಪುಟದ ಕೆಲವು ಸಚಿವರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸುತ್ತಾರೆ. ಅಂತಹ ವ್ಯಕ್ತಿಗಳು ಯಾರು ಎಂಬ ಪಟ್ಟಿಯನ್ನು ಬಿಡುಗಡೆ ಮಾಡಲಿ. ವೌಢ್ಯಾಚರಣೆ ಪ್ರತಿಬಂಧಕ ಕಾಯ್ದೆಯನ್ನು ವಿರೋಧಿಸುವವರು ಸಂವಿಧಾನದ ಮೂಲಭೂತ ಹಕ್ಕುಗಳನ್ನು ವಿರೋಧಿಸಿದಂತೆಯೇ. ಈ ಬಗ್ಗೆ ಜನಪ್ರತಿನಿಧಿಗಳು ಅರ್ಥಮಾಡಿಕೊಳ್ಳಲಿ.
-ವಿ.ಗೋಪಾಲಗೌಡ, ನಿವೃತ್ತ ನ್ಯಾ. ಸುಪ್ರೀಂ ಕೋರ್ಟ್