×
Ad

ಅನಿತಾ ಆತ್ಮಹತ್ಯೆಗೆ ಕೇಂದ್ರ ಸರಕಾರ ಕಾರಣ: ಎನ್‌ಎಸ್‌ಯುಐ

Update: 2017-09-04 18:47 IST

ಬೆಂಗಳೂರು, ಸೆ.4: ವೈದ್ಯಕೀಯ ಸೀಟಿಗಾಗಿ ನೀಟ್ ಪರೀಕ್ಷೆ ಕಡ್ಡಾಯದ ವಿರುದ್ಧ ಹೋರಾಟಕ್ಕೆ ನಾಂದಿ ಹಾಡಿದ್ದ ತಮಿಳುನಾಡಿನ ವಿದ್ಯಾರ್ಥಿನಿ ಅನಿತಾ ಆತ್ಮಹತ್ಯೆಗೆ ಕೇಂದ್ರ ಸರಕಾರವೇ ನೇರ ಕಾರಣ ಎಂದು ಆರೋಪಿಸಿ ಎನ್‌ಎಸ್‌ಯುಐ ಸದಸ್ಯರು ಪ್ರತಿಭಟನೆ ನಡೆಸಿದರು.

ಸೋಮವಾರ ನಗರದ ಆನಂದ್‌ರಾವ್ ವೃತ್ತದ ಗಾಂಧಿ ಪ್ರತಿಮೆ ಎದುರು ಭಾರತ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟದ(ಎನ್‌ಎಸ್‌ಯುಐ) ನೂರಾರು ಸದಸ್ಯರು ಪ್ರತಿಭಟನೆ ನಡೆಸಿ, ವಿದ್ಯಾರ್ಥಿನಿಯೊಬ್ಬಳ ಸಾವಿಗೆ ಕಾರಣವಾದ ನೀಟ್ ಮಾದರಿ ಪರೀಕ್ಷೆಯನ್ನು ಕೂಡಲೇ ಹಿಂಪಡೆಯಬೇಕೆಂದು ಆಗ್ರಹಿಸಿದರು.

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಎನ್‌ಎಸ್‌ಯುಐ ರಾಜ್ಯ ಉಪಾಧ್ಯಕ್ಷ ಜಯೇಂಧರ್, ನೀಟ್ ಪರೀಕ್ಷೆಯಿಂದ ತಮಿಳುನಾಡಿಗೆ ವಿನಾಯ್ತಿ ನೀಡುವಂತೆ ಕೋರಿ ಕೋರ್ಟ್ ಮೆಟ್ಟಿಲೇರಿದ್ದ ವಿದ್ಯಾರ್ಥಿನಿ ಅನಿತಾ ತೀರ್ಪು ತನ್ನ ಪರವಾಗಿ ಬಂದಿಲ್ಲ ಎನ್ನುವ ಕಾರಣಕ್ಕಾಗಿ ಸಾಕಷ್ಟು ನೊಂದಿದ್ದಳು. ವ್ಯವಸ್ಥೆಯ ಬಗ್ಗೆಯೂ ಆಕ್ರೋಶಗೊಂಡಿದ್ದ ಅನಿತಾ ಅಸಹಾಯಕತೆ ಬಗ್ಗೆ ಡೆತ್‌ನೋಟ್‌ನಲ್ಲಿ ಬರೆದಿಟ್ಟು, ನೇಣು ಬಿಗಿದುಕೊಂಡು ಶುಕ್ರವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಿದರು.

  ದಲಿತ ಕುಟುಂಬಕ್ಕೆ ಸೇರಿರುವ ಅನಿತಾ ತಂದೆ ದಿನಗೂಲಿ ಕಾರ್ಮಿಕರು. ವೈದ್ಯೆಯಾಗುವ ಮಹತ್ವಾಕಾಂಕ್ಷೆ ಹೊಂದಿದ್ದ ಅನಿತಾ ಪಿಯು ದ್ವಿತೀಯ ಪರೀಕ್ಷೆಯಲ್ಲಿ 1,200ಕ್ಕೆ 1,176 ಅಂಕಗಳನ್ನು ಗಳಿಸಿದ್ದರು. ಆದರೆ, ನೀಟ್‌ನಲ್ಲಿ ಅನಿತಾ ಕೇವಲ 94 ಅಂಕಗಳನ್ನು ಮಾತ್ರ ಗಳಿಸಿದ್ದರಿಂದ ವೈದ್ಯಕೀಯ ಸೀಟು ದೊರೆಯಲಿಲ್ಲ. ಇಂತಹ ವ್ಯವಸ್ಥೆ ನಿರ್ಮಾಣವಾಗಲು ಕೇಂದ್ರ ಸರಕಾರವೇ ಕಾರಣ. ಹೀಗಾಗಿ, ಕೂಡಲೇ ಕೇಂದ್ರ ಪರೀಕ್ಷಾ ಮಂಡಳಿ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಎನ್‌ಎಸ್‌ಯುಐ ಜಿಲ್ಲಾಧ್ಯಕ್ಷ ಎ.ಮಾರುತಿ, ಕಾರ್ಯದರ್ಶಿ ಶ್ರೀಧರ್ ಸೇರಿ ಪ್ರಮುಖರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News