ಮಳೆ ನಿಂತ ಮೇಲೆ ರಸ್ತೆಗಳ ದುರಸ್ತಿ, ಹೆಚ್ಚುವರಿ 300 ಕೋಟಿಗೆ ಸಿಎಂಗೆ ಮನವಿ: ಸಚಿವ ಕೆ.ಜೆ.ಜಾರ್ಜ್
ಬೆಂಗಳೂರು, ಸೆ.4: ಕಳೆದ ಒಂದು ವಾರದಿಂದ ಸತತವಾಗಿ ಸುರಿಯುತ್ತಿರುವ ಧಾರಾಕಾರ ಮಳೆಗೆ ನಗರದ ಹಲವು ರಸ್ತೆಗಳು ಹಾಳಾಗಿದ್ದು, ಮಳೆ ನಿಂತ ಮೇಲೆ ರಸ್ತೆಗಳ ದುರಸ್ತಿ ಮಾಡಲಾಗುವುದು ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ತಿಳಿಸಿದ್ದಾರೆ.
ಸೋಮವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸತತವಾದ ಮಳೆಯಿಂದಾಗಿ ಹಳೆಯ ರಸ್ತೆಗಳು ಹಾಳಾಗಿವೆ. ಆದರೆ, ಟೆಂಡರ್ ಶೂರ್ ಯೋಜನೆಯಡಿ ನಿರ್ಮಾಣಗೊಂಡ ರಸ್ತೆಗಳಿಗೆ ಹಾನಿಯಾಗಿಲ್ಲ. ಮಳೆನಿಂತ ಬಳಿಕ ಹಾಳಾದ ರಸ್ತೆಗಳ ದುರಸ್ತಿಗೆ ತುರ್ತು ಕಾಮಗಾರಿ ನಡೆಸಲಾಗುವುದು ಎಂದು ತಿಳಿಸಿದರು.
ಸದ್ಯದ ಮಟ್ಟಿಗೆ ಬೆಂಗಳೂರಿನಲ್ಲಿ ಸುರಿಯುತ್ತಿರುವ ಮಳೆ ನಿಲ್ಲುವ ಯಾವ ಲಕ್ಷಣಗಳು ಕಾಣುತ್ತಿಲ್ಲ. ಹೀಗಾಗಿ ಮಳೆಯಿಂದಾಗುವ ಸಂಭವನೀಯ ಸಮಸ್ಯೆಗಳನ್ನು ನಿವಾರಿಸುವುದಕ್ಕೆ ಮೊದಲ ಆದ್ಯತೆ ಕೊಡಲಾಗಿದೆ. ಈಗಾಗಲೆ ರಸ್ತೆ ಕಾಮಗಾರಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ 800ಕೋಟಿ ರೂ.ಮಂಜೂರು ಮಾಡಲಾಗಿದೆ. ಇನ್ನು 300ಕೋಟಿ ರೂ.ಹೆಚ್ಚುವರಿಯಾಗಿ ನೀಡುವಂತೆ ಮನವಿ ಮಾಡಲಾಗಿದೆ ಎಂದು ಅವರು ಹೇಳಿದರು.