×
Ad

ಕೇಂದ್ರ ಸರಕಾರಕ್ಕೆ ರೈತರ ಬಗ್ಗೆ ಕಾಳಜಿಯಿಲ್ಲ: ಅನಿಲ್

Update: 2017-09-04 22:16 IST

ಬೆಂಗಳೂರು, ಸೆ.4: ಕೇಂದ್ರ ಸರಕಾರ ಉದ್ಯಮಿಗಳ ಮೇಲೆ ತೋರುವ ಕಾಳಜಿ ರೈತರ ಮೇಲೆ ಯಾಕಿಲ್ಲ. ಉದ್ಯಮಿಗಳ ಕೋಟ್ಯಂತರ ರೂ.ಸಾಲವನ್ನು ಮನ್ನಾ ಮಾಡಿರುವ ಕೇಂದ್ರ ಸರಕಾರ, ರೈತರ ಅಲ್ಪಪ್ರಮಾಣದ ಸಾಲವನ್ನು ಮನ್ನಾ ಮಾಡಲು ಮುಂದಾಗುತ್ತಿಲ್ಲ ಎಂದು ಸಮಾಜವಾದಿ ಪಾರ್ಟಿಯ ಜಿಲ್ಲಾಧ್ಯಕ್ಷ ಅನಿಲ್ ಆರೋಪಿಸಿದರು.

ರೈತರ ಸಾಲ ಮನ್ನಾ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಸಮಾಜವಾದಿ ಪಾರ್ಟಿ ಶಿವಮೊಗ್ಗದಿಂದ ಬೆಂಗಳೂರಿನವರೆಗೆ ಪಾದಯಾತ್ರೆ ನಡೆಸಿ ನಗರದ ಟೌನ್‌ಹಾಲ್ ಮುಂಭಾಗ ನಡೆದ ಸಮಾವೇಶದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಸಾಲ ಬಾಧೆಯಿಂದ ತತ್ತರಿಸುತ್ತಿರುವ ರೈತರು ಒಬ್ಬೊಬ್ಬರಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಆದರೂ ಕೇಂದ್ರ ಸರಕಾರಕ್ಕೆ ರೈತರ ಮೇಲೆ ಕಿಂಚಿತ್ತೂ ಕಾಳಜಿ ಇಲ್ಲದಂತೆ ವರ್ತಿಸುತ್ತಿದ್ದಾರೆ. ಜನತೆಯ ತೆರಿಗೆ ಹಣದಿಂದ ಆಡಳಿತ ನಡೆಸುವ ಸರಕಾರಗಳು ಜನತೆಯ ಸಂಕಷ್ಟವನ್ನು ಕೇಳದಿರುವುದು ದುರಂತದ ಪರಮಾವಧಿ ಎಂದು ಅವರು ಕಿಡಿಕಾರಿದರು.

 ರೈತರು ಅಳಲನ್ನು ಕೇಳುವುದು ಸರಕಾರದ ಆದ್ಯ ಕರ್ತವ್ಯ. ಈ ನಿಟ್ಟಿನಲ್ಲಿ ಕೂಡಲೆ ರೈತರ ಸಾಲ ಮನ್ನಾ ಮಾಡಬೇಕು. ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬದ ಸದಸ್ಯರೊಬ್ಬರಿಗೆ ಸರಕಾರಿ ನೌಕರಿ ಕೊಡಬೇಕು. ಹಾಗೂ ಬಗರ್ ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ನೀಡಬೇಕು ಎಂದು ಅವರು ಒತ್ತಾಯಿಸಿದರು.

ಸಮಾವೇಶದಲ್ಲಿ ಸಮಾಜವಾದಿ ಪಾರ್ಟಿಯ ರಾಜ್ಯಾಧ್ಯಕ್ಷ ರೋಬಿನ್‌ ಮ್ಯಾಥ್ಯೂಸ್, ರಾಜ್ಯ ವಿದ್ಯಾರ್ಥಿ ಸಭಾದ ಅಧ್ಯಕ್ಷ ರಾಘವೇಂದ್ರ, ಸಮಾಜವಾದಿ ಪಾರ್ಟಿಯ ಜಿಲ್ಲಾ ಕಾರ್ಯದರ್ಶಿ ಶ್ರೀನಿವಾಸ ಮೂರ್ತಿ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News