×
Ad

ಬೈಕ್ ರ್ಯಾಲಿಗೆ ಅನುಮತಿ ಕೋರಿ ಗೃಹ ಸಚಿವರಿಗೆ ಬಿಜೆಪಿ ನಿಯೋಗ ಮನವಿ

Update: 2017-09-04 22:21 IST

ಬೆಂಗಳೂರು, ಸೆ.4: ಬಿಜೆಪಿ ಯುವಮೋರ್ಚಾ ವತಿಯಿಂದ ಹಮ್ಮಿಕೊಂಡಿರುವ ಮಂಗಳೂರು ಚಲೋ ಬೈಕ್ ರ್ಯಾಲಿಗೆ ಸರಕಾರ ಅನುಮತಿ ನೀಡಬೇಕೆಂದು ಕೋರಿ ವಿರೋಧ ಪಕ್ಷದ ನಾಯಕ ಜಗದೀಶ್ ಶೆಟ್ಟರ್ ನೇತೃತ್ವದ ನಿಯೋಗವು ಗೃಹ ಸಚಿವ ರಾಮಲಿಂಗಾರೆಡ್ಡಿಯನ್ನು ಭೇಟಿ ಮಾಡಿ ಮನವಿ ಸಲ್ಲಿಸಿದೆ.

ಸೋಮವಾರ ವಿಕಾಸಸೌಧದಲ್ಲಿನ ಗೃಹ ಸಚಿವರ ಕಚೇರಿಯಲ್ಲಿ ರಾಮಲಿಂಗಾರೆಡ್ಡಿಯನ್ನು ಭೇಟಿ ಮಾಡಿದ ನಿಯೋಗವು, ಮೈಸೂರು, ಚಿಕ್ಕಮಗಳೂರು, ಶಿವಮೊಗ್ಗ, ಹುಬ್ಬಳ್ಳಿ-ಧಾರವಾಡ ಹಾಗೂ ಬೆಂಗಳೂರು ಜಿಲ್ಲೆಗಳಿಂದ ಬೈಕ್ ರ್ಯಾಲಿ ನಡೆಯಲಿದೆ. ಪೊಲೀಸ್ ಇಲಾಖೆ ಮೂಲಕ ಇದಕ್ಕೆ ಅನುಮತಿ ಕಲ್ಪಿಸಿಕೊಡಬೇಕು ಎಂದು ಮನವಿ ಸಲ್ಲಿಸಿತು.

ಗೃಹ ಸಚಿವರ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ವಿರೋಧ ಪಕ್ಷದ ನಾಯಕ ಜಗದೀಶ್ ಶೆಟ್ಟರ್, ರಾಜ್ಯದಲ್ಲಿ 18 ಜನ ಹಿಂದೂ ಕಾರ್ಯಕರ್ತರ ಕೊಲೆಯಾಗಿದೆ. ಅವುಗಳ ಪ್ರತಿಭಟನಾರ್ಥವಾಗಿ ಮಂಗಳೂರು ಚಲೋ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ರಾಜ್ಯಾದ್ಯಂತ ಲಕ್ಷಾಂತರ ಕಾರ್ಯಕರ್ತರು ಬೈಕ್ ರ್ಯಾಲಿಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.

ಕಾನೂನು ಚೌಕಟ್ಟಿನಲ್ಲಿ ನಾವು ಹೋರಾಟ ನಡೆಸುತ್ತಿದ್ದೇವೆ. ನಮ್ಮ ರ್ಯಾಲಿಯಲ್ಲಿ ಪಾಲ್ಗೊಳ್ಳುವ ಕಾರ್ಯಕರ್ತರಿಗೆ ರಕ್ಷಣೆ ನೀಡಬೇಕಾದ ಜವಾಬ್ದಾರಿ ರಾಜ್ಯ ಸರಕಾರದ್ದು. ಈ ಹಿಂದೆ ಕಾಂಗ್ರೆಸ್‌ನವರು ಹಮ್ಮಿಕೊಂಡಿದ್ದ ಬಳ್ಳಾರಿವರೆಗಿನ ಪಾದಯಾತ್ರೆಗೆ ನಮ್ಮ ಸರಕಾರವಿದ್ದಾಗ ರಕ್ಷಣೆ ನೀಡಿದೆ ಎಂದು ಅವರು ಹೇಳಿದರು.

ನಮಗೆ ರಕ್ಷಣೆ ನೀಡದಿದ್ದರೆ, ಪೊಲೀಸ್ ಅಧಿಕಾರಿಗಳು ಸರ್ವಾಧಿಕಾರಿ ರೀತಿಯಲ್ಲಿ ರ್ಯಾಲಿ ತಡೆಯುವುದು, ಕಾರ್ಯಕರ್ತರನ್ನು ಬಂಧಿಸುವುದು ಮಾಡಿದರೆ, ಸರಕಾರಕ್ಕೆ ದೊಡ್ಡ ಆತಂಕಕಾರಿ ಕೆಟ್ಟ ಹೆಸರು ಬರುವ ಸಾಧ್ಯತೆಯಿದೆ ಎಂದು ಜಗದೀಶ್ ಶೆಟ್ಟರ್ ಎಚ್ಚರಿಕೆ ನೀಡಿದರು.
ವಿಧಾನಪರಿಷತ್ ವಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಮಾತನಾಡಿ, ಹಿಂದೂ ಕಾರ್ಯಕರ್ತರ ಕಗ್ಗೊಲೆಯ ಸಿಬಿಐ ತನಿಖೆಯಾಗಬೇಕು, ರಾಷ್ಟ್ರದ್ರೋಹಿ ಸಂಘಟನೆಗಳನ್ನು ನಿಷೇಧಿಸಬೇಕು, ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ್ ರೈ ವಜಾಗೊಳಿಸಬೇಕೆಂದು ಆಗ್ರಹಿಸಿ ನಾವು ಹೋರಾಟ ಮಾಡುತ್ತಿದ್ದೇವೆ ಎಂದರು.

ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್ ಮಾತನಾಡಿ, ರಮಾನಾಥ್ ರೈ ನೀಡುತ್ತಿರುವ ಬೇಜವಾಬ್ದಾರಿ ಹೇಳಿಕೆಗಳು, ಕುಮ್ಮಕ್ಕಿನಿಂದ ಮಂಗಳೂರು ಭಾಗದಲ್ಲಿ ಗಲಭೆಗಳು ನಡೆಯುತ್ತಿವೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಡಲು ಕಾಂಗ್ರೆಸ್ ಕಾರಣ. ನಾವು ಪ್ರಜಾಪ್ರಭುತ್ವ ಮಾರ್ಗದಲ್ಲಿ ಹೋರಾಟ ಮಾಡುತ್ತಿದ್ದೇವೆ ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ ಲಿಂಬಾವಳಿ, ಶಾಸಕರಾದ ಎಸ್.ಮುನಿರಾಜು, ಸತೀಶ್‌ರೆಡ್ಡಿ, ಮುಖಂಡ ಸುಬ್ಬಣ್ಣ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News