×
Ad

ಹೊಸ ವಾರ್ಡ್ ಕಮಿಟಿ ಸದಸ್ಯರನ್ನು ನೇಮಕ: ಮಾಹಿತಿ ನೀಡಲು ಹೈಕೋರ್ಟ್ ಸೂಚನೆ

Update: 2017-09-04 22:41 IST

ಬೆಂಗಳೂರು, ಆ.4: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ವ್ಯಾಪ್ತಿಯ ವಾರ್ಡ್ ಕಮಿಟಿಗಳಲ್ಲಿ ಸದಸ್ಯರನ್ನಾಗಿ ಬಿಬಿಎಂಪಿ ಸದಸ್ಯರುಗಳೇ ನೇಮಕ ಮಾಡಿರುವುದನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಹೊಸ ವಾರ್ಡ್ ಕಮಿಟಿ ಸದಸ್ಯರನ್ನು ನೇಮಕ ಮಾಡಿಕೊಳ್ಳಬೇಕೋ ಬೇಡವೋ ಎಂದು ಸಾಮಾನ್ಯ ಸಭೆಯಲ್ಲಿ ತೀರ್ಮಾನಿಸಿ ಈ ತಿಂಗಳೊಳಗೆ ಮಾಹಿತಿ ನೀಡುವಂತೆ ಬಿಬಿಎಂಪಿಗೆ ಹೈಕೋರ್ಟ್ ಸೂಚಿಸಿದೆ. ಈ ಸಂಬಂಧ ಕವಿತಾ ಶಂಕರ್, ಜಿ.ಆರ್.ಮೋಹನ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜಯಂತ್ ಪಟೇಲ್ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ಸೂಚನೆ ನೀಡಿತು.

              

      ಅರ್ಜಿದಾರರ ಪರ ವಾದಿಸಿದ ವಕೀಲ ಜಿ.ಆರ್.ಮೋಹನ್ ಅವರು, ಬಿಬಿಎಂಪಿ ವಾರ್ಡ್‌ಗಳಿಗೆ ಕಮಿಟಿಗಳನ್ನು ರಚಿಸಿದ ಮೇಲೆ ಆ ಕಮಿಟಿಗಳಿಗೆ ಸದಸ್ಯರನ್ನೂ ಬಿಬಿಎಂಪಿ ಆಯುಕ್ತರೆ ನೇಮಕ ಮಾಡಬೇಕು. ಆದರೆ, ಇಲ್ಲಿ ಆಯುಕ್ತರ ಬದಲಾಗಿ ಬಿಬಿಎಂಪಿ ಸದಸ್ಯರುಗಳೆ ತಮಗೆ ಬೇಕಾದವರನ್ನು ಕಮಿಟಿಗಳಿಗೆ ಸದಸ್ಯರನ್ನಾಗಿ ನೇಮಕ ಮಾಡಿದ್ದಾರೆ. ಹೀಗಾಗಿ, ಕೆಎಂಸಿ ಕಾಯಿದೆ ಉಲ್ಲಂಘನೆಯಾಗಿದೆ ಎಂದು ಪೀಠಕ್ಕೆ ತಿಳಿಸಿದರು. ಅರ್ಜಿದಾರರ ಪರ ವಕೀಲರ ವಾದ ಆಲಿಸಿದ ವಿಭಾಗೀಯ ನ್ಯಾಯಪೀಠವು ವಾರ್ಡ್ ಕಮಿಟಿಗಳಿಗೆ ಸದಸ್ಯರಾಗಿ ನೇಮಕವಾದವರು ಕೋರ್ಟ್‌ಗೆ ಆಕ್ಷೇಪಣೆ ಸಲ್ಲಿಸಬಹುದು. ಹಾಗೂ ಹೊಸ ವಾರ್ಡ್ ಕಮಿಟಿ ಸದಸ್ಯರನ್ನು ನೇಮಕ ಮಾಡಿಕೊಳ್ಳಬೇಕೋ ಬೇಡವೋ ಎಂದು ಸಾಮಾನ್ಯ ಸಭೆಯಲ್ಲಿ ತೀರ್ಮಾನಿಸಬೇಕು. ಹಾಗೂ ಈ ತಿಂಗಳೊಳಗೆ ಪೀಠಕ್ಕೆ ಮಾಹಿತಿ ನೀಡಬೇಕೆಂದು ಬಿಬಿಎಂಪಿಗೆ ಸೂಚಿಸಿ ವಿಚಾರಣೆಯನ್ನು ಅಕ್ಟೋಬರ್ 11ಕ್ಕೆ ಮುಂದೂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News