×
Ad

ಸೀಟು ಹಂಚಿಕೆ ಖಂಡಿಸಿ ಎಸ್‌ಎಫ್‌ಐ ಪ್ರತಿಭಟನೆ

Update: 2017-09-04 22:47 IST

ಬೆಂಗಳೂರು, ಸೆ.4: ಶನಿವಾರ ಮತ್ತು ರವಿವಾರ ಬ್ಯಾಂಕ್‌ಗಳು ರಜೆ ಇದ್ದರೂ ಕರ್ನಾಟಕ ಪರೀಕ್ಷಾ ಪ್ರಾಧಿಕಾರ(ಕೆಇಎ) ಉಳಿಕೆಯಾಗಿದ್ದ ವೈದ್ಯಕೀಯ ಕೋರ್ಸ್‌ನ ಸೀಟುಗಳ ಹಂಚಿಕೆ ಮಾಡಲು ಮುಂದಾಗಿದ್ದು, ಡಿಡಿ ತರಲು ಸಾಧ್ಯವಾಗದ ಅರ್ಹ ವಿದ್ಯಾರ್ಥಿಗಳಿಗೆ ಸೀಟು ನೀಡದೇ ವಂಚಿಸಿದ್ದನ್ನು ಭಾರತ ವಿದ್ಯಾರ್ಥಿ ಫೆಡರೇಷನ್‌ನ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ನಗರದ ಮಲ್ಲೇಶ್ವರಂನಲ್ಲಿರುವ ಕೆಇಎ ಪ್ರಧಾನ ಕಚೇರಿ ಎದುರು ನೂರಾರು ಎಸ್‌ಎಫ್‌ಐ ಕಾರ್ಯಕರ್ತರು ಪ್ರತಿಭಟನೆ ನಡೆಸಿ, ಡಿಡಿ ನೀಡಲು ಸಾಧ್ಯವಾಗದ ಅಭ್ಯರ್ಥಿಗಳಿಗೆ ಸೀಟು ನೀಡಬೇಕು ಎಂದು ಆಗ್ರಹಿಸಿದರು.

ಈ ವೇಳೆ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಎಸ್‌ಎಫ್‌ಐ ರಾಜ್ಯ ಕಾರ್ಯದರ್ಶಿ ಗುರುರಾಜ ದೇಸಾಯಿ, ಕೆಇಎ ತಪ್ಪುನಿರ್ಧಾರದಿಂದಾಗಿ ಸಿಕ್ಕ ವೈದ್ಯಕೀಯ ಸೀಟುಗಳನ್ನು ಕಳೆದುಕೊಳ್ಳುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಕೊನೆ ಕ್ಷಣದಲ್ಲಿ ವೈದ್ಯ ಮತ್ತು ದಂತ ವೈದ್ಯ ಕೋರ್ಸ್‌ನ ಸೀಟುಗಳನ್ನು ಪ್ರಕಟಿಸುವ ಸಂಪ್ರದಾಯವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಮುಂದುವರಿಸಿರುವುದು ಖಂಡನೀಯ ಎಂದರು.

ಸಾಲು ಸಾಲು ರಜೆಗಳೂ ಆಗಮಿಸಿದ್ದರಿಂದ ಸಾವಿರಾರು ವಿದ್ಯಾರ್ಥಿಗಳು ಸಕಾಲದಲ್ಲಿ ಶುಲ್ಕ ಪಾವತಿಸಿ, ಡಿಡಿ ಪಡೆಯಲಾಗದೆ ತೀವ್ರ ತೊಂದರೆ ಅನುಭವಿಸುವಂತಾಗಿದೆ. ಆ.22ರಂದು ತಡರಾತ್ರಿ ಉಳಿಕೆ ಸೀಟುಗಳ ಸಂಖ್ಯೆಯನ್ನು ಪ್ರಕಟಿಸಿದ ಕೆಇಎ, ಆ.26 ರಿಂದ 28ರವರೆಗೆ ಈ ಸೀಟುಗಳಿಗೆ ಆಫ್‌ಲೈನ್ ಮೂಲಕ ಪ್ರವೇಶಾವಕಾಶ ಕಲ್ಪಿಸಲಾಗುವುದು ಎಂದು ಪ್ರಕಟಣೆ ನೀಡಿದೆ.

ಆದರೆ, ಶುಕ್ರವಾರದಿಂದ ರವಿವಾರದವರೆಗೆ ರಜೆ ಇದ್ದರಿಂದ ವಿದ್ಯಾರ್ಥಿಗಳಿಗೆ ಪ್ರವೇಶಕ್ಕೆ ಡಿಡಿ ತರಲು ಸಮಯಾವಕಾಶ ಇರಲಿಲ್ಲ. ಹೀಗಾಗಿ ವಿದ್ಯಾರ್ಥಿ ಮತ್ತು ಪೋಷಕರು ಪರದಾಡಿದರು. ಅದರಲ್ಲೂ ಕೆಇಎ ವೆಬ್‌ಸೈಟ್ ನೋಡಲು ಅವಕಾಶವಾಗದ ಗ್ರಾಮೀಣ ಭಾಗದ ವಿದ್ಯಾರ್ಥಿಗಳೂ ಹೆಚ್ಚು ತೊಂದರೆಯಾಗಿದೆ. ಮತ್ತೊಂದೆಡೆ ಆ.26ರಂದು ಎಂದಿನಂತೆ ಕೌನ್ಸೆಲಿಂಗ್‌ಗೆ ಬಂದ ವಿದ್ಯಾರ್ಥಿಗಳಿಗೆ ಡಿಡಿ ಇದ್ದರೆ ಮಾತ್ರ ಕೌನ್ಸೆಲಿಂಗ್‌ಗೆ ಪ್ರವೇಶ ಎಂದ ಕೂಡಲೇ ಆತಂಕಕ್ಕೆ ಒಳಗಾಗಿದ್ದಾರೆ ಎಂದು ದೂರಿದರು.

ಪ್ರತಿ ವರ್ಷವೂ ಅಂತಿಮ ಕ್ಷಣದಲ್ಲಿ ಉಳಿಕೆ ಸೀಟುಗಳನ್ನು ಪ್ರಕಟಿಸಿ ಅವಾಂತರ ಸೃಷ್ಟಿಸುವುದೇ ರಾಜ್ಯ ಸರಕಾರದ ಕೆಲಸವಾಗಿದೆ. ಕನಿಷ್ಠ ಪಕ್ಷ ಚೆಕ್ ಪಡೆದಿದ್ದರೆ ವಿದ್ಯಾರ್ಥಿಗಳಿಗೆ ಸೀಟು ಸಿಗುತ್ತಿತ್ತು. ಕೇರಳ ಸರಕಾರ ರಜೆಯಿದ್ದ ಕಾರಣ ದಿನಾಂಕವನ್ನು ವಿಸ್ತರಿಸಿತ್ತು. ಆದರೆ, ಕರ್ನಾಟಕ ಸರಕಾರ ಈ ಮಾದರಿಯನ್ನು ಅನುಸರಿಸದಿರುವುದು ವಿದ್ಯಾರ್ಥಿಗಳಿಗೆ ಎಸಗಿದ ದ್ರೋಹವಾಗಿದೆ ಎಂದು ಕಿಡಿಕಾರಿದರು.

ಅಭ್ಯರ್ಥಿಗಳಿಗೆ ದೊರೆತಿರುವ ಸೀಟುಗಳನ್ನು ರದ್ದು ಮಾಡಿರುವುದು ಸರಿಯಲ್ಲ. ಹಾಗಾಗಿ ಸೀಟು ಹಂಚಿಕೆಯನ್ನು ಮಾಡಬೇಕು. ಇಲ್ಲದಿದ್ದಲ್ಲಿ, ಹೋರಾಟ ತೀವ್ರಗೊಳಿಸಲಾಗುವುದೆಂದು ಎಚ್ಚರಿಕೆ ನೀಡಿದರು. ಪ್ರತಿಭಟನೆಯಲ್ಲಿ ವಕೀಲ ಸುಲ್ತಾನ್‌ಬ್ಯಾರಿ, ಎಸ್‌ಎಫ್‌ಐ ಜಿಲ್ಲಾಧ್ಯಕ್ಷ ವೇಗಾನಂದ, ರಾಜ್ಯ ಉಪಾಧ್ಯಕ್ಷ ಸಿ.ಅಮರೇಶ್, ದಿಲೀಪ್‌ಶೆಟ್ಟಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News