×
Ad

ಇಂದು ಕಾಂಗ್ರೆಸ್ ಮುಕ್ತ ನಾಳೆ ಸಂವಿಧಾನ ಮುಕ್ತಕ್ಕೆ ಬಿಜೆಪಿ ಸಂಚು: ಚನ್ನಮಲ್ಲ ಸ್ವಾಮೀಜಿ

Update: 2017-09-05 17:59 IST

ಬೆಂಗಳೂರು, ಸೆ.5: ದೇಶದಲ್ಲಿ ಕಾಂಗ್ರೆಸ್ ಮುಕ್ತ ಮಾಡುತ್ತೇವೆಂದು ಹೇಳುವ ಬಿಜೆಪಿ ನಾಳೆ ದಲಿತ ಮುಕ್ತ, ಮುಸ್ಲಿಂ ಮುಕ್ತ ಹಾಗೂ ಸಂವಿಧಾನ ಮುಕ್ತ ಮಾಡುತ್ತೇವೆಂದು ಹೇಳಲಿದ್ದಾರೆ. ಈ ಬಗ್ಗೆ ಪ್ರಗತಿಪರರು ಗಂಭೀರವಾಗಿ ಚಿಂತನೆ ಮಾಡಿ ಕೋಮುವಾದಿಗಳನ್ನು ಕೆಳಗಿಳಿಸಲು ನಿಟ್ಟಿನಲ್ಲಿ ಕಾರ್ಯ ತತ್ಪರರಾಗಬೇಕೆಂದು ನಿಡುಮಾಮಿಡಿ ಮಠದ ಚನ್ನಮಲ್ಲ ಸ್ವಾಮೀಜಿ ತಿಳಿಸಿದ್ದಾರೆ.

ಮಂಗಳವಾರ ಎಡಪಕ್ಷಗಳು, ರಾಜ್ಯ ರೈತ ಸಂಘ ಹಾಗೂ ದಲಿತ ಸಂಘಟನೆಗಳ ಸಮನ್ವಯ ಸಮಿತಿ ನಗರದ ಪುರಭವನದಲ್ಲಿ ಆಯೋಜಿಸಿದ್ದ ‘ಸೌಹಾರ್ದತೆಗಾಗಿ ಕರ್ನಾಟಕ’ ರಾಜ್ಯ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಇಂದು ದೇಶದಲ್ಲಿ ಕೋಮುವಾದಿಗಳು ಅಟ್ಟಹಾಸದಿಂದ ಮೆರೆಯುತ್ತಿದ್ದಾರೆ. ಎಲ್ಲೆಂದರಲ್ಲಿ ದಲಿತರನ್ನು, ಮುಸ್ಲಿಮರನ್ನು ಗೋಹತ್ಯೆಯ ಹೆಸರಿನಲ್ಲಿ ಬರ್ಬರವಾಗಿ ಹತ್ಯೆ ಮಾಡಲಾಗುತ್ತಿದೆ. ಇದೆಲ್ಲವೂ ನಮ್ಮ ಕಣ್ಮುಂದೆ ನಡೆಯುತ್ತಿದ್ದರೂ ಏನೂ ಮಾಡಲಾಗದಂತಹ ಅಸಹಾಯಕತೆ ಬಂದಿರುವುದಕ್ಕೆ ಪ್ರಗತಿಪರರು ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ ಎಂದು ಅವರು ಹೇಳಿದರು.

ಕೋಮುವಾದಿ ಶಕ್ತಿಗಳ ವಿಜೃಂಭಣೆಗೆ ಪ್ರಜಾಪ್ರಭುತ್ವ ಶಕ್ತಿಗಳ ವೈಫಲ್ಯವೇ ಕಾರಣವಾಗಿದೆ. ಪ್ರಜಾಪ್ರಭುತ್ವ ವೌಲ್ಯಗಳನ್ನು ಗೌರವಿಸುವ ರಾಜಕೀಯ ಶಕ್ತಿಗಳು, ಸಂಘಟನೆಗಳು ವಿಘಟನೆಗೊಂಡಿರುವುದರಿಂದ ಕೋಮುವಾದಿಗಳು ಇವತ್ತು ರಾಜಕೀಯ ಅಧಿಕಾರ ಹಿಡಿಯುವಂತಾಗಿದೆ. ಇನ್ನು ಮುಂದಾದರು ಪ್ರಗತಿಪರ ಶಕ್ತಿಗಳು ಒಟ್ಟಾಗಿ ದೇಶವನ್ನು ಉಳಿಸುವ ಹೊಣೆಗಾರಿಕೆಯನ್ನು ಹೊರಬೇಕೆಂದರು.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಜಿ.ಸಿದ್ಧರಾಮಯ್ಯ ಮಾತನಾಡಿ, ಕಳೆದ ಮೂರು ವರ್ಷದ ಬಿಜೆಪಿ ಆಡಳಿತದಲ್ಲಿ ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ನಿರ್ಮಾಣವಾಗಿದೆ. ಘೋಷಿತ ತುರ್ತು ಪರಿಸ್ಥಿತಿಗಿಂತ ಇದು ತುಂಬಾ ಅಪಾಯಕಾರಿಯಾದದ್ದೆಂದು ಆತಂಕ ವ್ಯಕ್ತಪಡಿಸಿದರು.

ಕೇಂದ್ರ ಸರಕಾರ ಏಕ ಭಾಷೆ, ಏಕ ಸಂಸ್ಕೃತಿಯ ಹೆಸರಿನಲ್ಲಿ ಹಿಂದಿ ಹೇರಿಕೆ ಮಾಡಲಾಗುತ್ತಿದೆ. ಇದರಿಂದಾಗಿ ರಾಜ್ಯದ ಯುವಕರು ಉದ್ಯೋಗವನ್ನು ಕಳೆದುಕೊಳ್ಳುತ್ತಿದ್ದಾರೆ. ಈ ಬಗ್ಗೆ ರಾಜ್ಯ ಬಿಜೆಪಿ ನಾಯಕರಿಗೆ ಕಿಂಚಿತ್ತೂ ಬೇಸರವಿಲ್ಲ. ಈ ಬಗ್ಗೆ ಜನತೆಯು ಚಿಂತಿಸದಿರುವುದು ಬೇಸರ ತರಿಸಿದೆ ಎಂದು ಅವರು ವಿಷಾದಿಸಿದರು.

ಎಮ್ಮೆಯೊಂದು ಮುಸ್ಲಿಮ್, ಹಿಂದೂ, ಕ್ರಿಶ್ಚಿಯನ್ ಸೇರಿದಂತೆ ಎಲ್ಲರಿಗೂ ಒಂದೇ ರೀತಿಯ ಹಾಲನ್ನು ಕೊಡುತ್ತದೆ. ಇಷ್ಟು ಕನಿಷ್ಟ ಮಟ್ಟದ ಜ್ಞಾನವಿಲ್ಲದ ನರೇಂದ್ರ ಮೋದಿ ಪ್ರಧಾನಿಯಾಗಿರುವುದರಿಂದ ದೇಶಕ್ಕೆ ಯಾವುದೇ ಪ್ರಯೋಜನವಿಲ್ಲ. ಇವರ ಬದಲು ಎಮ್ಮೆಯೇ ದೇಶದ ಪ್ರಧಾನಿಯಾಗಿದ್ದರೆ ಚೆನ್ನಾಗಿತ್ತು.
-ಕೆ.ಎಸ್.ಪುಟ್ಟಣ್ಣಯ್ಯ ಶಾಸಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News