×
Ad

‘ ಮಂಗಳೂರು ಚಲೋ’ ನೆಪದಲ್ಲಿ ಮತೀಯ ಗಲಭೆಗೆ ಬಿಜೆಪಿ ಪ್ರಚೋದನೆ: ಗೃಹ ಸಚಿವ ರಾಮಲಿಂಗಾರೆಡ್ಡಿ

Update: 2017-09-05 18:16 IST

ಬೆಂಗಳೂರು, ಸೆ.5: ‘ಮಂಗಳೂರು ಚಲೋ’ ನೆಪದಲ್ಲಿ ಬಿಜೆಪಿ ಮುಖಂಡರು ಮತೀಯ ಗಲಭೆಗೆ ಪ್ರಚೋದಿಸುವ ಮೂಲಕ ಮುಂಬರುವ ಚುನಾವಣೆಯನ್ನು ಗೆಲ್ಲಲು ಹೊರಟಿದ್ದಾರೆ ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ಗಂಭೀರ ಆಪಾದನೆ ಮಾಡಿದ್ದಾರೆ.

ಮಂಗಳವಾರ ವಿಕಾಸಸೌಧದಲ್ಲಿನ ತನ್ನ ಕೊಠಡಿಯಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಭೀಕರ ಸ್ವರೂಪದ ಬರ ಪರಿಸ್ಥಿತಿ ಆವರಿಸಿರುವ ಸಂದರ್ಭದಲ್ಲಿ ಕೇಂದ್ರದ ಮೇಲೆ ಒತ್ತಡ ಹೇರಿ ರಾಜ್ಯದಲ್ಲಿನ ರೈತರ ಸಾಲ ಮನ್ನಾ ಮಾಡಿಸುವ ಬದಲಿಗೆ ಮತೀಯ ಗಲಭೆಗೆ ಪ್ರಚೋದನೆ ನೀಡಲು ಮುಂದಾಗಿದ್ದಾರೆ ಎಂದರು.

ಈವರೆಗೂ ರಾಜ್ಯದ ಜನರ ಪರವಾಗಿ ಯಾವುದೇ ಕೆಲಸ ಮಾಡದೆ ಬಿಜೆಪಿ ಇದೀಗ ಮಂಗಳೂರು ಚಲೋ ಸೇರಿದಂತೆ ಪ್ರಚೋದನಕಾರಿ ಕಾರ್ಯಕ್ರಮಗಳ ಮೂಲಕ ರಾಜ್ಯದಲ್ಲಿ ಅಧಿಕಾರಿ ಹಿಡಿಯಲು ಹೊರಟಿದ್ದು, ಇದರಲ್ಲಿ ಅವರು ಯಶಸ್ವಿಯಾಗಲು ಸಾಧ್ಯವಿಲ್ಲ ಎಂದು ಆಕ್ಷೇಪಿಸಿದರು.

ನಾಲ್ಕು ವರ್ಷಗಳಿಂದ ಸುಮ್ಮನೆ ಇದ್ದ ಬಿಜೆಪಿ ರಾಷ್ಟ್ರೀಯಾಧ್ಯಕ್ಷ ಅಮಿತ್ ಶಾ, ರಾಜ್ಯಕ್ಕೆ ಬಂದು ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆ ಸರಿಯಾಗಿದ್ದರೆ ನಾವು ಗೆಲ್ಲಲು ಸಾಧ್ಯವಿಲ್ಲ. ಇದನ್ನು ಹೇಗಾದರೂ ಮಾಡಿ ಹದಗೆಡಿಸಿ ಎಂಬ ಸೂಚನೆ ನೀಡಿದ್ದಾರೆ. ಹೀಗಾಗಿ ದಿಢೀರ್ ಎಚ್ಚೆತ್ತುಕೊಂಡ ಬಿಜೆಪಿ ಮುಖಂಡರು ಶಾಂತಿ ಕದಡಲು ಮುಂದಾಗಿದ್ದಾರೆಂದು ಟೀಕಿಸಿದರು.

‘ಮಂಗಳೂರು ಚಲೋ’ ರ್ಯಾಲಿ ಸಂಬಂಧ ಪೊಲೀಸರಿಗೆ ಬಿಜೆಪಿ ಮುಖಂಡರು ಅಗತ್ಯ ಮಾಹಿತಿಯನ್ನೆ ನೀಡಿಲ್ಲ. ಹೀಗಾಗಿ ಪೊಲೀಸರು ಅನುಮತಿ ನಿರಾಕರಿಸಿದ್ದಾರೆ. ರಾಜ್ಯದ ಐದು ಭಾಗದಿಂದ ಇವರು ಬೈಕುಗಳಲ್ಲಿ ಹೊರಟರೆ, ಅದರಲ್ಲಿ ಎಷ್ಟು ಜನ ಹೊರಡುತ್ತಾರೆ. ಎಷ್ಟು ಜನ ಬಂದು ಸೇರಿಕೊಳ್ಳುತ್ತಾರೆ. ಎಂಬ ಬಗ್ಗೆ ಮಾಹಿತಿಯನ್ನೆ ನೀಡಿಲ್ಲ. ಹೀಗಾಗಿ ಅನುಮತಿಯನ್ನು ನೀಡಿಲ್ಲ ಎಂದು ಸಮರ್ಥಿಸಿಕೊಂಡರು.

ಕಾನೂನಿಗೆ ಎಲ್ಲರೂ ಒಂದೇ. ಪ್ರತಿಯೊಂದು ಪಕ್ಷವೂ, ವ್ಯಕ್ತಿಯೂ ಕಾನೂನನ್ನು ಗೌರವಿಸಲೇಬೇಕು. ಒಂದು ವೇಳೆ ಕಾನೂನನ್ನು ಉಲ್ಲಂಘಿಸುತ್ತೇವೆ ಎಂದು ಯಾರೇ ಹೊರಟರೂ, ನಿರ್ದಾಕ್ಷಿಣ್ಯ ಕ್ರಮ ಅನಿವಾರ್ಯ ಎಂದು ಸ್ಪಷ್ಟನೆ ನೀಡಿದರು.

ಮಂಗಳೂರು ಚಲೋಗೆ ಅನುಮತಿ ನೀಡಿ ಏನಾದರೂ ಹೆಚ್ಚು ಕಡಿಮೆಯಾದರೆ ಯಾರು ಜವಾಬ್ದಾರಿ. ಹರಿಯಾಣದಲ್ಲಿ ನಡೆದ ಗಲಭೆಗೆ 1.50ಲಕ್ಷ ಮಂದಿ ಸೇರಲು ಅವಕಾಶ ಮಾಡಿಕೊಟ್ಟಿದ್ದೇ ಕಾರಣ. ಹೀಗೆ ಜನ ಸೇರಲು ಅನುಮತಿ ನೀಡಿದ್ದಕ್ಕೇ 37 ಮಂದಿ ಸಾವಿಗೀಡಾದರು. ಅಂತಹ ಸ್ಥಿತಿ ರಾಜ್ಯದಲ್ಲಿ ಸಂಭವಿಸಿದರೆ ಜನತೆ ಪ್ರಶ್ನಿಸಿರುವುದು ಸರಕಾರವನ್ನು. ಇದು 6.5 ಕೋಟಿ ಜನರ ಸರಕಾರ. ಇಲ್ಲಿ ಹಿಂದೂ, ಮುಸ್ಲಿಂ, ಕ್ರೈಸ್ತ, ಬೌದ್ಧ, ಜೈನ ಸೇರಿದಂತೆ ಎಲ್ಲ ವರ್ಗದವರ ಪ್ರಾಣ, ಆಸ್ತಿಯ ರಕ್ಷಣೆ ಬಹಳ ಮುಖ್ಯ ಎಂದು ರಾಮಲಿಂಗಾರೆಡ್ಡಿ ನುಡಿದರು.

ಬಿಜೆಪಿ ಆಡಳಿತಾವಧಿಯಲ್ಲಿ ಕಾಂಗ್ರೆಸ್ ಪಕ್ಷದಿಂದ ಹಮ್ಮಿಕೊಂಡಿದ್ದ ಬಳ್ಳಾರಿಗೆ ಪಾದಯಾತ್ರೆಗೆ ಅನುಮತಿ ನೀಡಿತ್ತು ಎಂಬುದು ನಿಜ. ಆದರೆ, ಆ ಸಂದರ್ಭದಲ್ಲಿ ರಾಜ್ಯಾದ್ಯಂತ ಎಲ್ಲೂ ಕಾನೂನು ಸುವ್ಯವಸ್ಥೆ ಹದಗೆಟ್ಟಿರಲಿಲ್ಲ. ಆದರೆ, ಮಂಗಳೂರಿನಲ್ಲಿ ಇತ್ತೀಚೆಗಷ್ಟೇ ಗಲಭೆ ನಡೆದು ಪರಿಸ್ಥಿತಿ ಹದಗೆಟ್ಟಿತ್ತು. ಇದೀಗ ಪರಿಸ್ಥಿತಿ ಶಾಂತವಾಗಿದೆ. ಹೀಗಿರುವಾಗ ಅದನ್ನು ಕೆಡಿಸಲು ಇವರು ಅಲ್ಲಿಗೆ ಹೋಗುತ್ತೇವೆ ಎಂದರೆ ಅನುಮತಿ ನೀಡಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.

ಸಮೀಕ್ಷೆಯೊಂದರನ್ವಯ ಕಾಂಗ್ರೆಸ್ 132 ಸ್ಥಾನಗಳನ್ನು ಗೆಲ್ಲುತ್ತದೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ಚಿಂತೆಗೀಡಾಗಿರುವ ಬಿಜೆಪಿ, ಮಂಗಳೂರು ಚಲೋ ಹಮ್ಮಿಕೊಂಡಿದೆ ಎಂದ ಅವರು, ಸಾರ್ವಜನಿಕವಾಗಿ ಗಣಪತಿ ಕೂರಿಸಲು ಅನುಮತಿ ಕಡ್ಡಾಯ. ಹೀಗಿರುವಾಗ ಅನುಮತಿ ಇಲ್ಲದೆ ಮಂಗಳೂರು ಚಲೋ ಎಂದರೆ ನಿರ್ದಾಕ್ಷಿಣ್ಯ ಕ್ರಮ ಅನಿವಾರ್ಯ. ಮತೀಯ ಸಂಘರ್ಷ ಸೃಷ್ಟಿಸುವ ಮೂಲಕ ಅಧಿಕಾರ ಹಿಡಿಯಲು ಬಿಜೆಪಿ ಹುನ್ನಾರ ನಡೆಸಿದೆ. ಆದರೆ, ಇದರಿಂದ ಅವರಿಗೆ ಯಾವುದೇ ಪ್ರಯೋಜನ ಆಗದು. ಕಾನೂನು ಕೈಗೆತ್ತಿಕೊಳ್ಳುವವರ ವಿರುದ್ಧ ಮುಲಾಜಿಲ್ಲದೆ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಆದೇಶಿಸಲಾಗಿದೆ ಎಂದರು.

800 ಮಂದಿಯ ಬಂಧನ: ‘ಮಂಗಳೂರು ಚಲೋ’ ಹಿನ್ನೆಲೆಯಲ್ಲಿ ಬಿಜೆಪಿ ಬೆಂಗಳೂರು, ಹುಬ್ಬಳ್ಳಿ, ಕೋಲಾರ ಸೇರಿ ರಾಜ್ಯದ ವಿವಿಧೆಡೆ ಅನುಮತಿ ಇಲ್ಲದೆ ಬೈಕ್ ರ್ಯಾಲಿಗೆ ಮುಂದಾದ 800ಕ್ಕೂ ಹೆಚ್ಚು ಕಾರ್ಯಕರ್ತರನ್ನು ಬಂಧಿಸಲಾಗಿದೆ. ಸಮರ್ಪಕ ಮಾಹಿತಿ ನೀಡಿದ್ದರೆ ಅನುಮತಿ ನೀಡುತ್ತಿದ್ದೇವೆ ಎಂದು ಹೇಳಿದರು.

ಹುಬ್ಬಳ್ಳಿ-ಧಾರವಾಡ ಸೇರಿ ನಾಲ್ಕೈದು ಜಿಲ್ಲೆಗಳಿಗೆ ಕುಡಿಯುವ ನೀರೊದಗಿಸುವ ಕಳಸಾ-ಬಂಡೂರಿ ಯೋಜನೆ ಸಂಬಂಧ ನ್ಯಾಯ ಕೊಡಿಸಲು ಪ್ರಧಾನಿ ಮುಂದೆ ಹೋಗಿ ನಿಲ್ಲಲು ಆಗದು. ರೈತರ ಸಾಲಮನ್ನಾಕ್ಕೂ ತಲೆಕೆಡಿಸಿಕೊಳ್ಳುವುದಿಲ್ಲ. ಸತತ ಬರದಿಂದ ಸಂಕಷ್ಟಕ್ಕೆ ಸಿಲುಕಿರುವ ಕರ್ನಾಟಕಕ್ಕೆ ಹೆಚ್ಚಿನ ಅನುದಾನ ಕೊಡಿಸಲು ಬಿಜೆಪಿ ಮುಖಂಡರಿಗೆ ಆಗುವುದಿಲ್ಲ.
-ರಾಮಲಿಂಗಾರೆಡ್ಡಿ, ಗೃಹ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News