×
Ad

ವಿದ್ಯಾರ್ಥಿಗಳಿಗೆ ಬ್ಯಾಗ್ ಹೊರೆ ತಪ್ಪಿಸಿದವರಿಗೆ ಒಲಿಯಿತು ಉತ್ತಮ ಶಿಕ್ಷಕ ಪ್ರಶಸ್ತಿ

Update: 2017-09-05 19:01 IST

ಬೆಂಗಳೂರು, ಸೆ. 5: ಶಾಲಾ ಮಕ್ಕಳಿಗೆ ಮಣಭಾರದ ಬ್ಯಾಗ್‌ಗಳ ಹೊರೆಯನ್ನು ತಪ್ಪಿಸಲು ಕೇಂದ್ರ ಮತ್ತು ರಾಜ್ಯ ಸರಕಾರಗಳು ಹಲವು ಬಾರಿ ಪ್ರಯತ್ನಿಸಿ ಸುಮ್ಮನಾದವು. ಆದರೆ ಸರಕಾರಿ ಶಾಲೆಯ ಸಹ ಶಿಕ್ಷಕರೊಬ್ಬರು ಬ್ಯಾಗ್ ಹೊರೆಯನ್ನು ತಪ್ಪಿಸಲು ಪರಿಹಾರ ಕಂಡುಕೊಂಡ ಕಾರ್ಯಕ್ರಮ ಸರಕಾರದ ಗಮನ ಸೆಳೆದಿದೆ.

ಗದಗ ಜಿಲ್ಲೆಯ ನೀರಲಗಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕ ಪಂಚಾಕ್ಷರಯ್ಯ ಬಿ.ಮುಧೋಳಮಠ ಅವರು ಬ್ಯಾಗ್ ಹೊರೆ ಸಮಸ್ಯೆಗೆ ರೂಪಿಸಿದ್ದ ‘ನೋ ಬ್ಯಾಗ್ ಡೇ’ ಕಾರ್ಯಕ್ರಮ ಉತ್ತಮ ಶಿಕ್ಷಕ ಪ್ರಶಸ್ತಿ ಲಭಿಸುವಂತೆ ಮಾಡಿದೆ.

ಮಂಗಳವಾರ ನಗರದ ಅಂಬೇಡ್ಕರ್ ಭವನದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಆಯೋಜಿಸಿದ್ದ ರಾಜ್ಯಮಟ್ಟದ ಶಿಕ್ಷಕರ ದಿನಾಚರಣೆ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶಿಕ್ಷಕ ಪಂಚಾಕ್ಷರಯ್ಯ ಬಿ.ಮುಧೋಳಮಠ ಅವರಿಗೆ ಪ್ರದಾನಿಸಿದರು.

ಬ್ಯಾಗ್ ಭಾರವನ್ನು ತಪ್ಪಿಸಲು ಪ್ರತಿ ಶನಿವಾರ ನೋ ಬ್ಯಾಗ್ ಡೇ ಕಾರ್ಯಕ್ರಮ ರೂಪಿಸಲಾಯಿತು. ನೋ ಬ್ಯಾಗ್ ಡೇ ದಿನದಂದು ಪಠ್ಯೇತರ ಚಟುವಟಿಕೆಗಳಿಗೆ ಹೆಚ್ಚು ಒತ್ತು ನೀಡಿ ಸಾಂಸ್ಕೃತಿಕ, ಕ್ರೀಡೆ, ಕೌಶಲ್ಯಕ್ಕೆ ಸಂಬಂಧಿಸಿದಂತೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು. ಇದಕ್ಕೆ ವಿದ್ಯಾರ್ಥಿಗಳು ಮತ್ತು ಶಾಲಾ ಶಿಕ್ಷಕರು ಸ್ಪಂದಿಸಿದರು. ಇದರಿಂದ ಮಕ್ಕಳ ಕಲಿಕೆಯ ಗುಣಮಟ್ಟದಲ್ಲಿ ಸುಧಾರಣೆ ಕಂಡುಕೊಳ್ಳಲಾಗಿದೆ ಎಂದು ಪುರಸ್ಕೃತ ಶಿಕ್ಷಕ ಪಂಚಾಕ್ಷರಯ್ಯ ಹೇಳಿದರು.

ನೋ ಬ್ಯಾಗ್ ಡೇ ಕಾರ್ಯಕ್ರಮದ ಯಶಸ್ಸಿಗೆ ಅಕ್ಕಪಕ್ಕದ ಗ್ರಾಮಗಳ ಶಾಲೆಗಳ ಶಿಕ್ಷಕರು, ವಿದ್ಯಾರ್ಥಿಗಳು ಆಕರ್ಷಿತರಾಗಿದ್ದಾರೆ. ಅಲ್ಲದೆ ಮಹಾರಾಷ್ಟ್ರ ಮತ್ತು ಉತ್ತರ ಪ್ರದೇಶದ ರಾಜ್ಯಗಳಿಂದಲೂ ಸರಕಾರಿ ಶಾಲೆಗಳ ಶಿಕ್ಷಕರು ಶಾಲೆಗೆ ಭೇಟಿ ಕೊಟ್ಟ ನೋ ಬ್ಯಾಗ್ ಡೇ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದರು.

ಈ ಕಾರ್ಯಕ್ರಮವನ್ನು ಇಡೀ ರಾಜ್ಯಕ್ಕೆ ವಿಸ್ತರಿಸಲು ಸರಕಾರ ಚಿಂತಿಸಬೇಕು ಎಂದು ಒತ್ತಾಯಿಸಿದ ಅವರು, 19 ವರ್ಷಗಳಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಶ್ರಮಿಸಿದ್ದಕ್ಕೆ ಇಂದು ಪ್ರತಿಫಲ ಸಿಕ್ಕಿದೆ. ಉತ್ತಮ ಶಿಕ್ಷಕ ಪ್ರಶಸ್ತಿ ಲಭಿಸಿರುವುದಕ್ಕೆ ತುಂಬಾ ಖುಷಿಯಾಗುತ್ತಿದೆ ಎಂದು ಸಂತಸ ಹಂಚಿಕೊಂಡರು.

2017-18ನೆ ಸಾಲಿನ ಮಲೆನಾಡ ಗಾಂಧಿ ದಿವಂಗತ ಎಚ್.ಜಿ. ಗೋವಿಂದೇಗೌಡರ ಉತ್ತಮ ಶಾಲಾ ಪ್ರಶಸ್ತಿ ದೇವನಹಳ್ಳಿ ತಾಲೂಕಿನ ಬೈಚಾಪುರ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ತುಮಕೂರು ತಾಲೂಕಿನ ನಾಗವಲ್ಲಿ ಗ್ರಾಮದ ಸರಕಾರಿ ಪ್ರೌಢಶಾಲೆಗೆ ಲಭಿಸಿತು.

ಶಿಕ್ಷಣ ಇಲಾಖೆಯಲ್ಲಿ 29 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕಿ ನೂರಜಹಾಂ ಅವರು ಶಾಲೆಯ ಮಕ್ಕಳ ಬೌದ್ಧಿಕ ಮತ್ತು ಶೈಕ್ಷಣಿಕ ಪ್ರಗತಿಗಾಗಿ ಅವಿರತ ಶ್ರಮಪಟ್ಟಿದ್ದಾರೆ. ಇವರ ಸೇವೆ ಮನಗಂಡ ಶಿಕ್ಷಣ ಇಲಾಖೆ ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ 20 ಮಂದಿ ಪ್ರಾಥಮಿಕ ಮತ್ತು 10 ಮಂದಿ ಪ್ರೌಢಶಾಲಾ ಶಿಕ್ಷಕರಿಗೆ 2017-18 ಸಾಲಿನ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಯನ್ನು ಮುಖ್ಯಮಂತ್ರಿಗಳು ಪ್ರದಾನಿಸಿದರು. ಇದರ ಜತೆಗೆ 10 ಮಂದಿ ಪದವಿ ಪೂರ್ವ ಕಾಲೇಜುಗಳ ಉತ್ತಮ ಪ್ರಾಂಶುಪಾಲ, ಉಪನ್ಯಾಸಕರಿಗೆ ಪ್ರಶಸ್ತಿ ಪ್ರದಾನಿಸಲಾಯಿತು.


ದಾಖಲಾತಿ ಹೆಚ್ಚಿಸಿದ ಧೀರೆಗೆ ಪ್ರಶಸ್ತಿ: 
ವರ್ಷದಿಂದ ವರ್ಷಕ್ಕೆ ಕ್ಷೀಣಿಸುತ್ತಿದ್ದ ವಿದ್ಯಾರ್ಥಿಗಳ ದಾಖಲಾತಿ ಸಂಖ್ಯೆಯಿಂದ ಸೊರಗಿದ್ದ ಸರಕಾರಿ ಉರ್ದು ಶಾಲೆಗೆ ಪುನಃ ವಿದ್ಯಾರ್ಥಿಗಳನ್ನು ಮನವೊಲಿಸಿ ಶಾಲೆಗೆ ಕರೆತಂದ ಭಟ್ಕಳ ತಾಲೂಕಿನ ತೆಂಗಿನಗುಂಡಿ ಸರಕಾರಿ ಹಿರಿಯ ಪ್ರಾಥಮಿಕ ಉರ್ದು ಶಾಲೆಯ ಮುಖ್ಯ ಶಿಕ್ಷಕಿ ನೂರಜಹಾಂ ಎಚ್.ಶೇಖ ಅವರಿಗೆ ಉತ್ತಮ ಶಿಕ್ಷಕ ಪ್ರಶಸ್ತಿ ಲಭಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News