ಶೈಕ್ಷಣಿಕ ಸಮಸ್ಯೆ ಬಗೆಹರಿಸಲು ವಿಧಾನಪರಿಷತ್ ಸದಸ್ಯರ ಧರಣಿ
ಬೆಂಗಳೂರು, ಸೆ.6: ರಾಜ್ಯದಲ್ಲಿನ ಶಿಕ್ಷಕರು ಹಾಗೂ ಉಪನ್ಯಾಸಕರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಶಿಕ್ಷಕರ ಕ್ಷೇತ್ರ ಹಾಗೂ ಪದವೀಧರ ಕ್ಷೇತ್ರಗಳನ್ನು ಪ್ರತಿನಿಧಿಸುವ ಬಿಜೆಪಿ ಹಾಗೂ ಜೆಡಿಎಸ್‌ನ ವಿಧಾನಪರಿಷತ್ ಸದಸ್ಯರು ವಿಧಾನಸೌಧ ಹಾಗೂ ವಿಕಾಸಸೌಧದ ಮಧ್ಯೆಯಿರುವ ಮಹಾತ್ಮಗಾಂಧಿ ಪ್ರತಿಮೆ ಬಳಿ ಬುಧವಾರ ಧರಣಿ ಆರಂಭಿಸಿದ್ದಾರೆ.
ಶಿಕ್ಷಕರು, ಉಪನ್ಯಾಸಕರು, ಶಾಲಾ ಆಡಳಿತ ಮಂಡಳಿಗಳು ಹಾಗೂ ವಿದ್ಯಾರ್ಥಿಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ಬಗೆಹರಿಸಬೇಕೆಂದು ಸರಕಾರದ ಮುಂದೆ ಬೇಡಿಕೆ ಇಟ್ಟಿರುವ ವಿಧಾನಪರಿಷತ್ ಸದಸ್ಯರು ಧರಣಿ ಆರಂಭಿಸಿದ್ದಾರೆ. ಇದಕ್ಕೂ ಮುನ್ನ ಪತ್ರಕರ್ತೆ ಗೌರಿ ಲಂಕೇಶ್ ನಿಧನಕ್ಕೆ ಧರಣಿ ಸ್ಥಳದಲ್ಲೇ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಪ್ರಮುಖ ಬೇಡಿಕೆಗಳು: ಪದವಿ ಕಾಲೇಜುಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಬೇಕು. ಸರಕಾರಿ ಶಿಕ್ಷಕ, ಉಪನ್ಯಾಸಕರ ಪದೋನ್ನತಿ ಕಾರ್ಯವನ್ನು ಸರಳೀಕರಣಗೊಳಿಸಬೇಕು. ಭಡ್ತಿ ಶಿಕ್ಷಕರ ಎಲ್ಲ ಸಮಸ್ಯೆಗಳನ್ನು ಬಗೆಹರಿಸಬೇಕು ಎಂದು ಧರಣಿ ನಿರತರು ಆಗ್ರಹಿಸಿದರು.
1995ರ ನಂತರ ಆರಂಭವಾದ ಅನುದಾನ ರಹಿತ ಶಾಲಾ-ಕಾಲೇಜುಗಳನ್ನು ಸರಕಾರ ಅನುದಾನ ವ್ಯಾಪ್ತಿಗೆ ಒಳಪಡಿಸಬೇಕು. ಶಿಕ್ಷಕರು ಹಾಗೂ ಉಪನ್ಯಾಸಕರ ವೇತನ ತಾರತಮ್ಯವನ್ನು ನಿವಾರಿಸಬೇಕು. ವಿಭಜಿತ ಪದವಿ ಹಾಗೂ ಪದವಿ ಪೂರ್ವ ಕಾಲೇಜುಗಳಲ್ಲಿನ ಖಾಲಿ ಹುದ್ದೆಗಳನ್ನು ಭರ್ತಿ ಮಾಡಬೇಕು ಎಂದು ಸರಕಾರವನ್ನು ಅವರು ಒತ್ತಾಯಿಸಿದರು.
ಭಡ್ತಿ ಶಿಕ್ಷಕರ ವೇತನ ಭಡ್ತಿಯನ್ನು ಕಾಲಕಾಲಕ್ಕೆ ನೀಡಬೇಕು. ಶಿಕ್ಷಕರು ಹಾಗೂ ಉಪನ್ಯಾಸಕರ ವರ್ಗಾವಣೆ ಪ್ರಕ್ರಿಯೆಯನ್ನು ಸಕಾಲಕ್ಕೆ ಮಾಡಬೇಕು. 1987ರಿಂದ 1995ರ ಅವಧಿಯಲ್ಲಿನ ಬಾಕಿ ಉಳಿದಿರುವ ಶಾಲಾ ಕಾಲೇಜುಗಳನ್ನು ಆದಷ್ಟು ತ್ವರಿತವಾಗಿ ಅನುದಾನಕ್ಕೆ ಒಳಪಡಿಸಬೇಕು. ಅಲ್ಲದೆ, ಅನುದಾನಿತ ಹಾಗೂ ಅನುದಾನರಹಿತ ಶಾಲಾ ಶಿಕ್ಷಕರಿಗೆ ಆರೋಗ್ಯ ಸೌಲಭ್ಯ ಒದಗಿಸಬೇಕು ಎಂದು ಧರಣಿ ನಿರತರು ಆಗ್ರಹಿಸಿದರು.
ಬೋಧಕೇತರ ಸಿಬ್ಬಂದಿಯನ್ನು ಹೊರಗುತ್ತಿಗೆ ಆಧಾರದಲ್ಲಿ ತೆಗೆದುಕೊಳ್ಳುವ ಪದ್ಧತಿಯನ್ನು ಕೈ ಬಿಡಬೇಕು. ಖಾಸಗಿ ಹಾಗೂ ಸರಕಾರಿ ಶಾಲಾ ಶಿಕ್ಷಕರ ಮಧ್ಯೆ ಇರುವ ತಾರತಮ್ಯವನ್ನು ನಿವಾರಿಸಬೇಕು. ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆ ಒದಗಿಸುವುದಲ್ಲದೆ, ವೇತನವನ್ನು ಹೆಚ್ಚಿಸಬೇಕು ಎಂದು ಸದಸ್ಯರು ಒತ್ತಾಯಿಸಿದರು.
ಧರಣಿಯಲ್ಲಿ ವಿಧಾನಪರಿಷತ್ ಉಪಸಭಾಪತಿ ಮರಿತಿಬ್ಬೇಗೌಡ, ಸದಸ್ಯರಾದ ಬಸವರಾಜ ಹೊರಟ್ಟಿ, ರಮೇಶ್‌ಬಾಬು, ಅರುಣ್‌ಶಹಾಪುರ, ಹನುಮಂತಪ್ಪ ನಿರಾಣಿ, ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಚೌಡಾರೆಡ್ಡಿ ತೂಪಲ್ಲಿ, ರಮೇಶ್‌ಬಾಬು, ಪುಟ್ಟಣ್ಣ, ಟಿ.ಎ.ಶರವಣ, ಶ್ರೀಕಂಠೇಗೌಡ ಪಾಲ್ಗೊಂಡಿದ್ದರು.