×
Ad

ನ.23ರಿಂದ ವ್ಯಾಪಾರ ಅಭಿವೃದ್ಧಿ-ಹೂಡಿಕೆದಾರರ ಸಮಾವೇಶ: ಸಚಿವ ದೇಶಪಾಂಡೆ

Update: 2017-09-07 18:36 IST

ಬೆಂಗಳೂರು, ಸೆ. 7: ರಾಜ್ಯದ ಆರ್ಥಿಕ ಬೆಳವಣಿಗೆ, ಉದ್ಯೋಗ ಸೃಷ್ಟಿ, ಜಿಡಿಪಿ ಹೆಚ್ಚಿಸುವ ದೃಷ್ಟಿಯಿಂದ ನವೆಂಬರ್ 23ರಿಂದ ಎರಡು ದಿನಗಳ ಕಾಲ ಬೆಂಗಳೂರಿನಲ್ಲಿ ‘ವ್ಯಾಪಾರ ಅಭಿವೃದ್ಧಿ-ಹೂಡಿಕೆದಾರರ ಸಮಾವೇಶ’ (ವೆಂಡರ್ ಡೆವಲಪ್‌ಮೆಂಟ್ -ಇನ್‌ವೆಸ್ಟರ್ ಸಮ್ಮಿತ್) ಏರ್ಪಡಿಸಲಾಗಿದೆ ಎಂದು ಬೃಹತ್ ಕೈಗಾರಿಕಾ ಸಚಿವ ಆರ್.ವಿ.ದೇಶಪಾಂಡೆ ತಿಳಿಸಿದ್ದಾರೆ.

ಗುರುವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಹೂಡಿಕೆದಾರರ ಸಮಾವೇಶನದ ಲಾಂಛನ ಮತ್ತು ವೆಬ್‌ಸೈಟ್ ಲೋಕಾರ್ಪಣೆ ಮಾಡಿ ಮಾತನಾಡಿದ ಅವರು, ಸಣ್ಣ ಕೈಗಾರಿಕೆಗಳಿಂದಲೇ ಹೆಚ್ಚಿನ ಉದ್ಯೋಗ ಸೃಷ್ಟಿ ಸಾಧ್ಯ. ಹೀಗಾಗಿ ಸಣ್ಣ ಕೈಗಾರಿಕೆಗಳಿಗೆ ಉತ್ತೇಜನಕ್ಕಾಗಿ ಸಮಾವೇಶ ಆಯೋಜಿಸಲಾಗಿದೆ ಎಂದರು.

ತುಮಕೂರು ರಸ್ತೆಯಲ್ಲಿರುವ ಬೆಂಗಳೂರು ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದಲ್ಲಿ(ಬಿಐಇಸಿ) ಹೂಡಿಕೆದಾರರ ಸಮಾವೇಶ ನಡೆಯಲಿದ್ದು, ದೇಶ-ವಿದೇಶ ಹಾಗೂ ವಿವಿಧ ರಾಜ್ಯಗಳ ಸಣ್ಣ ಕೈಗಾರಿಕೆಗಳ ಮುಖ್ಯಸ್ಥರು ಸಮಾವೇಶದಲ್ಲಿ ಪಾಲ್ಗೊಳ್ಳಲಿವೆ ಎಂದರು.

ದೇಶದಲ್ಲಿ ಉತ್ಪಾದನಾ ವಲಯ ನಿರೀಕ್ಷಿಸಿದ ಪ್ರಮಾಣದಲ್ಲಿ ಬೆಳವಣಿಗೆಯಾಗಿಲ್ಲ. 2022ರ ವೇಳೆಗೆ ಉತ್ಪಾದನಾ ವಲಯದಿಂದ ದೇಶದ ಜಿಡಿಪಿಯ ಶೇ.25ರಷ್ಟು ಕೊಡುಗೆ ಇರಬೇಕೆಂಬ ಗುರಿ ಹೊಂದಲಾಗಿದೆ. ಆದರೆ, ಈಗ ಶೇ.14ರಷ್ಟು ಮಾತ್ರ ಉತ್ಪಾದನಾ ವಲಯದಿಂದ ಜಿಡಿಪಿಗೆ ಕೊಡುಗೆ ಇದೆ ಎಂದು ತಿಳಿಸಿದರು.

ನಾಲ್ಕು ವರ್ಷಗಳಲ್ಲಿ ದೇಶದಲ್ಲಿ ಉದ್ಯೋಗಾವಕಾಶಗಳು ಕಡಿಮೆಯಾಗಿವೆ. ಆದರೆ, ರಾಜ್ಯದಲ್ಲಿ 15 ಲಕ್ಷ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಗುರಿ ಹೊಂದಿದ್ದೆವು. ನಾಲ್ಕು ವರ್ಷಗಳಲ್ಲಿ ಆ ಗುರಿ ಸಾಧನೆಯ ಹತ್ತಿರವಿದ್ದು, ಸಣ್ಣ ಕೈಗಾರಿಕಾ ವಲಯದಲ್ಲಿ 12 ಲಕ್ಷ ಉದ್ಯೋಗ ಸೃಷ್ಟಿಯಾಗಿವೆ ಎಂದು ಮಾಹಿತಿ ನೀಡಿದರು.

ನ.23 ಮತ್ತು 24ರಂದು ನಡೆಯುವ ವ್ಯಾವಾರ ಅಭಿವೃದ್ಧಿ ಮತ್ತು ಹೂಡಿಕೆದಾರರ ಸಮಾವೇಶದಲ್ಲಿ ರಾಜ್ಯದ ಭವಿಷ್ಯದ ಬೆಳವಣಿಗೆ, ಕೈಗಾರಿಕೆಗಳ ಸಮತೋಲನ ಹಾಗೂ ಬೆಳವಣಿಗೆಗಳಿಗೆ ಸೂಕ್ತ ನೀತಿಗಳ ಅನುಷ್ಠಾನದ ಬಗ್ಗೆ ವಿಚಾರ ಸಂಕಿರಣಗಳನ್ನು ಹಮ್ಮಿಕೊಳ್ಳಲಾಗಿದೆ.  ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಉತ್ಪನ್ನಗಳ ವಸ್ತು ಪ್ರದರ್ಶನವನ್ನೂ ಆಯೋಜಿಸಲಾಗಿದೆ. ವಸ್ತು ಪ್ರದರ್ಶನದಲ್ಲಿ ಸಾರ್ವಜನಿಕ ವಲಯ ಘಟಕಗಳು, ಅಂತರಿಕ್ಷಯಾನ, ರಕ್ಷಣಾ ಮತ್ತು ಬಾಹ್ಯಾಕಾಶ ಸಂಸ್ಥೆಗಳು, ಆಟೋ ಮೊಬೈಲ್, ಕೃಷಿ ಮತ್ತು ಆಹಾರ ಸಂಸ್ಥೆ, ಜವಳಿ ಯಂತ್ರೋಪಕರಣ ಸೇರಿ ಹಲವು ಕೈಗಾರಿಕಾ ವಲಯಗಳು ತಮ್ಮ ಉತ್ಪನ್ನಗಳನ್ನು ಪ್ರದರ್ಶಿಸಲಿವೆ ಎಂದರು.

ವ್ಯಾಪಾರ ಅಭಿವೃದ್ಧಿ ಮತ್ತು ಹೂಡಿಕೆದಾರರ ಸಮಾವೇಶದಲ್ಲಿ ಖರೀದಿದಾರರು- ಮಾರಾಟಗಾರರ ಮುಖಾಮುಖಿ ಚರ್ಚೆ, ಸಂವಾದಕ್ಕೂ ಅವಕಾಶ ಕಲ್ಪಿಸಲಾಗಿದೆ ಎಂದ ಅವರು, ಸಮಾವೇಶದ ಹಿನ್ನೆಲೆಯಲ್ಲಿ ಮುಂಬೈ, ದಿಲ್ಲಿ, ಚೆನ್ನೈ, ಹೈದರಾಬಾದ್, ಪುಣೆ, ಅಹಮದಾಬಾದ್ ಸೇರಿ ವಿವಿಧೆಡೆ ರೋಡ್ ಶೋಗಳನ್ನು ನಡೆಸಲಾಗುವುದು ಎಂದರು.

ಸುದ್ದಿಗೋಷ್ಠಿಯಲ್ಲಿ ರಾಜ್ಯ ಸರಕಾರದ ಹೆಚ್ಚುವರಿ ಮುಖ್ಯಕಾರ್ಯದರ್ಶಿ ಡಿ.ವಿ. ಪ್ರಸಾದ್, ಕೈಗಾರಿಕಾ ಇಲಾಖೆ ಆಯುಕ್ತ ದರ್ಪಣ್ ಜೈನ್, ಕೆಐಎಡಿಬಿ ಸಿಇಒ ಜಯರಾಂ, ಸಿಐಐ ಅಧ್ಯಕ್ಷ ಕಮಲ್ ಬಾಲಿ, ಎಫ್‌ಕೆಸಿಸಿಐ ಅಧ್ಯಕ್ಷ ಎಸ್.ರವಿ, ಕಾಸಿಯ ಅಧ್ಯಕ್ಷ ಹನುಮಂತೇಗೌಡ ಸೇರಿದಂತೆ ಹಲವು ಗಣ್ಯರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News