ಸೆ.9 ರಿಂದ ‘ಮರ ಉಳಿಸಿ-ನಾಡು ಬೆಳೆಸಿ’ ಜಾಗೃತಿ ಅಭಿಯಾನ
ಬೆಂಗಳೂರು, ಸೆ. 7: ಬ್ರೇನಿ ಸ್ಟಾರ್ಸ್ ಇಂಟರ್ ನ್ಯಾಷನಲ್ ಮಾಂಟೆಸರೇಸಿ ಶಾಲೆಯ ವತಿಯಿಂದ ಸೆ.9 ರಿಂದ ಒಂದು ವರ್ಷದ ವರೆಗೆ ‘ಮರ ಉಳಿಸಿ ನಾಡು ಬೆಳೆಸಿ’ ಎಂಬ ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗಿದೆ.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಭಿಯಾನದ ಆಯೋಜಕಿ ಶರ್ಫುನ್ನೀಸಾ, ನಮ್ಮ ಶಾಲೆಯ ಮಕ್ಕಳು, ಶಿಕ್ಷಕರು ಹಾಗೂ ಶಾಲೆಯ ಆಡಳಿತ ಮಂಡಳಿಯವರು ಮಕ್ಕಳ ಪೋಷಕರ ಹಾಗೂ ಅಕ್ಕಪಕ್ಕದ ಸಹಾಯಕರೊಂದಿಗೆ ಸೇರಿ ಒಂದು ಲಕ್ಷ ಸಸಿಗಳನ್ನು ನೆಡುವ ಗುರಿಯಿಟ್ಟುಕೊಳ್ಳಲಾಗಿದೆ. ಈ ಮೂಲಕ ಮರ-ಗಿಡಗಳ ಪ್ರಾಮುಖ್ಯತೆ ತಿಳಿಸಲಾಗುತ್ತದೆ. ಮರಗಳನ್ನು ಕತ್ತರಿಸುವುದನ್ನು ಕಡಿಮೆ ಮಾಡಿ ಮರಗಳನ್ನು ಉಳಿಸುವುದರ ಬಗ್ಗೆ ತಿಳುವಳಿಕೆ ನೀಡಲಾಗುತ್ತದೆ ಎಂದರು.
ನೈಸರ್ಗಿಕ ವಾತಾವರಣ ಬದಲಾವಣೆಯು ಅರಣ್ಯನಾಶದ ಪ್ರಮುಖ ಮೂಲವಾಗಿದೆ. ವಿಷಯುಕ್ತ ಅನಿಲಗಳಿಂದ ವಾಯು ಮಾಲಿನ್ಯ ಜಾಸ್ತಿಯಾಗುತ್ತಿದೆ ಎಂದು ಸರಕಾರದ ನೀಡಿದ ವರದಿಗಳು ಹೇಳುತ್ತಿವೆ. ಇಂತಹ ಸಂದರ್ಭದಲ್ಲಿ ನೈಸರ್ಗಿಕತೆ ಉಳಿಸಿಕೊಳ್ಳಬೇಕಾದರೆ ಅರಣ್ಯಗಳು ಉಳಿಯಬೇಕು. ಹೀಗಾಗಿ, ಪ್ರತಿಯೊಬ್ಬ ಮನುಷ್ಯ ತಮ್ಮ ಕೊನೆ ಉಸಿರು ಇರುವವರೆಗೂ ಒಂದು ಮರವನ್ನು ಬೆಳೆಸಬೇಕು ಎಂದು ಅವರು ಹೇಳಿದರು.
ಈ ಅಭಿಯಾನದ ಕುರಿತು ಸರಕಾರಿ ಹಾಗೂ ಎನ್‌ಜಿಓ ಸಹಕಾರದೊಂದಿಗೆ ವರ್ಷದ ಕಾರ್ಯಕ್ರಮ ರೂಪಿಸಲಾಗಿದೆ. ಅಲ್ಲದೆ, ಮಕ್ಕಳು, ಶಿಕ್ಷಕರ ಹಾಗೂ ಪೋಷಕರ ಸಹಾಯದಿಂದ ಮರ ಉಳಿಸಿ-ನಾಡು ಬೆಳೆಸಿ ವಿಷಯ ಕುರಿತು ಪ್ರಬಂಧ ಮತ್ತು ಪಿಪಿಟಿ ತಯಾರಿಸಲಾಗುತ್ತದೆ. ಶಾಲೆಯ ವಾರ್ಷಿಕೋತ್ಸವ ದಿನ ಮಕ್ಕಳಿಂದ ನಾಟಕದ ಮೂಲಕ ಮರಗಳ ಪ್ರಾಮುಖ್ಯತೆ ತಿಳಿಸಲಾಗುತ್ತದೆ ಎಂದು ಅವರು ತಿಳಿಸಿದರು.