ದಲಿತ ವಿದ್ಯಾರ್ಥಿನಿ ಅನಿತಾ ಸಾವು ಖಂಡಿಸಿ ಪ್ರತಿಭಟನೆ
ಬೆಂಗಳೂರು, ಸೆ. 7: ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಹಾಗೂ ‘ನೀಟ್’ಗೆ ದಲಿತ ವಿದ್ಯಾರ್ಥಿನಿ ಅನಿತಾ ಸಾವು ಖಂಡಿಸಿ ಬಿಡುಗಡೆ ಚಿರತೆಗಳು (ವಿಸಿಕೆ) ಕಾರ್ಯಕರ್ತರು ನಗರದ ಆನಂದರಾವ್ ವೃತ್ತದಲ್ಲಿನ ಗಾಂಧಿ ಪುತ್ಥಳಿ ಬಳಿ ಪ್ರತಿಭಟನಾ ಸತ್ಯಾಗ್ರಹ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗೌರಿ ಲಂಕೇಶ್ ಹತ್ಯೆ ಪ್ರಕರಣದ ಹಂತಕರನ್ನು ಕೂಡಲೇ ಬಂಧಿಸಿ, ಕಠಿಣ ಕಾನೂನು ಶಿಕ್ಷೆ ವಿಧಿಸಬೇಕು. ವೈದ್ಯೆ ಆಗಬೇಕೆಂಬ ಕನಸಿಟ್ಟುಕೊಂಡಿದ್ದ ತಮಿಳುನಾಡಿನ ಅರಿಯೂರು ಜಿಲ್ಲೆಯ ಸಾಮಾನ್ಯ ದಿನಗೂಲಿ ನೌಕರನ ಪುತ್ರಿ ಅನಿತಾ ಆತ್ಮಹತ್ಯೆ ಹಿನ್ನೆಲೆಯಲ್ಲಿ ಕೂಡಲೇ ‘ನೀಟ್’ ರದ್ದುಪಡಿಸಬೇಕು ಎಂದು ಆಗ್ರಹಿಸಿದರು.
ಚಳವಳಿಯ ನೇತೃತ್ವ ವಹಿಸಿದ್ದ ವಿಸಿಕೆ ರಾಜ್ಯ ಪ್ರಧಾನ ಕಾರ್ಯದರ್ಶಿ ವಿ.ಮೂರ್ತಿ, ರಾಜ್ಯದಲ್ಲಿ ವಿಚಾರವಾದಿಗಳ ಹತ್ಯೆ ಪ್ರಕರಣ ನಿಜಕ್ಕೂ ಹೇಯ. ಸರಕಾರ ಕೂಡಲೇ ಹಂತಕರನ್ನು ಬಂಧಿಸಲು ಕ್ರಮಕೈಗೊಳ್ಳದಿದ್ದರೆ ಉಗ್ರ ಹೋರಾಟ ಅನಿವಾರ್ಯ ಎಂದು ಎಚ್ಚರಿಸಿದರು.
ಬಿಜೆಪಿ ನೇತೃತ್ವದ ಕೇಂದ್ರದಲ್ಲಿ ಸರಕಾರ ಅಧಿಕಾರಕ್ಕೆ ಬಂದ ಬಳಿಕ ದಲಿತ ವಿದ್ಯಾರ್ಥಿಗಳು ಅಭ್ಯಾಸ ಮಾಡುವುದು ಅತ್ಯಂತ ಕಷ್ಟವಾಗಿದೆ. ನಿನ್ನೆ ರೋಹಿತ್ ವೇಮುಲಾ, ಇಂದು ದಲಿತ ವಿದ್ಯಾರ್ಥಿನಿ ಅನಿತಾ ಬಲಿಯಾಗಿರುವುದು ಬೇಸರದ ಸಂಗತಿ. ವೈದ್ಯಕೀಯ, ದಂತ ವೈದ್ಯಕೀಯ ಕೋರ್ಸ್ ಪ್ರವೇಶಕ್ಕೆ ಜಾರಿಗೆ ತಂದಿರುವ ಅವೈಜ್ಞಾನಿಕ ನೀಟ್ ಪರೀಕ್ಷೆಯನ್ನು ಕೂಡಲೇ ರದ್ದುಗೊಳಿಸಬೇಕೆಂದು ಆಗ್ರಹಿಸಿದರು.
ನೀಟ್‌ಗೆ ಬಲಿಯಾದ ವಿದ್ಯಾರ್ಥಿನಿ ಅನಿತಾಳ ಆತ್ಮಹತ್ಯೆ ಪ್ರಕರಣವನ್ನು ವ್ಯವಸ್ಥೆಯ ಕೊಲೆ ಎಂದು ಪರಿಗಣಿಸಿ, ಕೇಂದ್ರ ಸಚಿವರ ವಿರುದ್ಧ ಪ್ರಕರಣ ದಾಖಲಿಸಬೇಕು. ದಲಿತ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ನೀಡಲು ನೀಟ್ ಬದಲು ಪಿಯುಸಿ ಪರೀಕ್ಷೆ ಅಂಕಗಳನ್ನು ಆಧರಿಸಿ ನೇರ ಪ್ರವೇಶ ಕಲ್ಪಿಸಬೇಕು. ಅನಿತಾಳ ಕುಟುಂಬಕ್ಕೆ ಕನಿಷ್ಠ 1ಕೋಟಿ ರೂ.ಪರಿಹಾರ ನೀಡಬೇಕೆಂದು ಒತ್ತಾಯಿಸಿದರು.
ಧರಣಿಯಲ್ಲಿ ಮುಖಂಡರಾದ ಕೆ.ಸಿ.ನಾಗರಾಜ್, ಎಂ.ಎಸ್.ಶೇಖರ್, ಚಾರ್ಲ್ಸ್, ಅನ್ಸರ್ ಸೇರಿದಂತೆ ಹಲವು ನಾಯಕರು ಪಾಲ್ಗೊಂಡಿದ್ದರು.