ಗೌರಿ ಲಂಕೇಶ್ ಹತ್ಯೆಯಲ್ಲಿ ನಕ್ಸಲೀಯರ ಪಾತ್ರ ಇರಲಿಕ್ಕಿಲ್ಲ: ವಿ.ಎಸ್.ಉಗ್ರಪ್ಪ
ಬೆಂಗಳೂರು, ಸೆ.8: ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ನಕ್ಸಲೀಯರ ಪಾತ್ರ ಇರಲಿಕ್ಕಿಲ್ಲ. ಬಲಪಂಥೀಯ ಕೋಮುವಾದಿಗಳ ವಿರುದ್ಧ ಗೌರಿ ಅವರ ಹೋರಾಟವಿತ್ತು. ಗೌರಿ ಅವರ ಸಾವು ಅಭಿವ್ಯಕ್ತಿ ಸ್ವಾತಂತ್ರದ ಸಾವು ಎಂದು ಮಹಿಳೆ ಮತ್ತು ಮಕ್ಕಳ ಮೇಲಿನ ದೌರ್ಜನ್ಯ ತಡೆ ಸಮಿತಿ ಅಧ್ಯಕ್ಷ ವಿ.ಎಸ್.ಉಗ್ರಪ್ಪ ಅಭಿಪ್ರಾಯಪಟ್ಟಿದ್ದಾರೆ.
ಶುಕ್ರವಾರ ವಿಧಾನಸೌಧದಲ್ಲಿನ ತನ್ನ ಕೊಠಡಿಯಲ್ಲಿ ಮಾತನಾಡಿದ ಅವರು, ಗೌರಿ ಲಂಕೇಶ್ ಅವರು ಎಂದೂ ನಕ್ಸಲೀಯರಿಂದ ತನಗೆ ಬೆದರಿಕೆ ಇದೆ ಎಂದು ಹೇಳಿಕೊಂಡಿಲ್ಲ. ಗೌರಿ ಕೋಮುವಾದಿಗಳ ವಿರುದ್ಧ ಹೋರಾಟ ಮಾಡುತ್ತಿದ್ದುದು ಎಲ್ಲರಿಗೂ ಗೊತ್ತು ಎಂದು ಎಂದರು.
ಗೌರಿ ಅವರು ಕೋಮುವಾದಿಗಳ ವಿರುದ್ಧ ಹೋರಾಟ ಮಾಡುತ್ತಿದ್ದ ಕಾರಣಕ್ಕೆ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಹೇಳಿಕೆ ಕೊಟ್ಟಿದ್ದಾರೆ. ಅಲ್ಲದೆ, ಹತ್ಯೆಯ ಅನುಮಾನಗಳಿಗೆ ಪೂರಕವಾಗಿ ಬಿಜೆಪಿಯವರು ಹೇಳಿಕೆ ಕೊಡ್ತಿದ್ದಾರೆ ಎಂದು ಉಗ್ರಪ್ಪ ರಾಹುಲ್ ಗಾಂಧಿ ಹೇಳಿಕೆಯನ್ನು ಸಮರ್ಥಿಸಿಕೊಂಡರು.
ಶೃಂಗೇರಿ ಕ್ಷೇತ್ರದ ಬಿಜೆಪಿ ಶಾಸಕ ಡಿ.ಎನ್.ಜೀವರಾಜ್ ಗೌರಿ ಲಂಕೇಶ್ ಹತ್ಯೆ ಪ್ರಕರಣ ಸಂಬಂಧ ಬಾಯಿಗೆ ಬಂದಂತೆ ಮಾತನಾಡಿರುವುದು ಸರಿಯಲ್ಲ ಎಂದು ಆಕ್ಷೇಪಿಸಿದ ಅವರು, ದೇಶದಲ್ಲಿ ವಿಚಾರವಾದಿಗಳಿಗೆ ರಕ್ಷಣೆ ಇಲ್ಲ. ಹೀಗಾಗಿ ದೇಶದಲ್ಲಿ ಕಾನೂನು ಸುವ್ಯವಸ್ಥೆ ಹದಗೆಡುತ್ತಿದೆ. ಕೆಎಫ್‌ಡಿ, ಪಿಎಫ್‌ಐ ಸಂಘಟನೆಗಳ ನಿಷೇಧಕ್ಕೆ ಬಿಜೆಪಿ ಒತ್ತಾಯಿಸುತ್ತಿದೆ. ಆ ಎರಡೂ ಸಂಘಟನೆಗಳು ಬೇರೆ ರಾಜ್ಯಗಳಲ್ಲಿಯೂ ಇವೆ. ಹೀಗಾಗಿ ಕೇಂದ್ರ ಸರಕಾರ ಆ ಸಂಘಟನೆಗಳನ್ನು ನಿಷೇಧ ಮಾಡಲಿ ಎಂದು ಉಗ್ರಪ್ಪ ಇದೇ ವೇಳೆ ಆಗ್ರಹಿಸಿದರು.
‘ಬರದಿಂದ ಸಂಕಷ್ಟಕ್ಕೆ ಸಿಲುಕಿ ಕುಡಿಯುವ ನೀರಿಗೂ ತತ್ವಾರ ಅನುಭವಿಸುತ್ತಿರುವ ಪಾವಗಡ, ಮೊಳಕಾಲ್ಮೂರು, ಚಳ್ಳಕೆರೆ, ಕೂಡ್ಲಿಗಿ, ಹೊಸಪೇಟೆ, ಚಿತ್ರದುರ್ಗ ಜಿಲ್ಲೆಯ ತುರುವನೂರು ತಾಲೂಕಿನ ವಿವಿಧ ಗ್ರಾಮಗಳಿಗೆ ತುಂಗಭದ್ರಾ ಜಲಾಶಯದಂದ ನೀರು ಪೂರೈಸುವ 2,250 ಕೋಟಿ ರೂ.ಯೋಜನೆಗೆ ಸರಕಾರ ಒಪ್ಪಿಗೆ ನೀಡಿದೆ.’
-ವಿ.ಎಸ್.ಉಗ್ರಪ್ಪ, ಮೇಲ್ಮನೆ ಸದಸ್ಯ