ಚೀನಾದಲ್ಲಿ ಜರಗುವ ಪ್ರವಾಸೋದ್ಯಮ ಸಮಾವೇಶದಲ್ಲಿ ಭಾಗವಹಿಸಲು ಕೇರಳ ಸಚಿವರಿಗೆ ಕೇಂದ್ರ ಅನುಮತಿ ನಿರಾಕರಣೆ

Update: 2017-09-09 04:05 GMT

ತಿರುವನಂಪುರ, ಸೆ.9: ಚೀನಾದಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಪ್ರವಾಸೋದ್ಯಮ ಸಮ್ಮೇಳನದಲ್ಲಿ ಭಾಗವಹಿಸಲು ಕೇಂದ್ರ ಸರಕಾರ ವಿನಾಕಾರಣ ಅವಕಾಶ ನಿರಾಕರಿಸಿದೆ ಎಂದು ಕೇರಳದ ಪ್ರವಾಸೋದ್ಯಮ ಸಚಿವ ಕಡಕಂಪಲ್ಲಿ ಸುರೇಂದ್ರನ್ ದೂರಿದ್ದಾರೆ.

ಇದನ್ನು ದುರದೃಷ್ಟಕರ ಎಂದು ಬಣ್ಣಿಸಿರುವ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಈ ವಿಷಯವನ್ನು ಪ್ರಧಾನಿ ಗಮನಕ್ಕೆ ತರುವುದಾಗಿ ಪ್ರಕಟಿಸಿದ್ದಾರೆ. ವಿಶ್ವಸಂಸ್ಥೆಯ ಪ್ರವಾಸೋದ್ಯಮ ಸಂಸ್ಥೆಯ ಸಮಾವೇಶ ಸೆಪ್ಟೆಂಬರ್ 11ರಿಂದ 16ರವರೆಗೆ ಚೀನಾದ ಚೆಂಗ್ಡು ಎಂಬಲ್ಲಿ ನಡೆಯಲಿದ್ದು, ಇದರಲ್ಲಿ ಭಾಗವಹಿಸಲು ಅನುಮತಿ ಕೋರಿ ಸಲ್ಲಿಸಿದ್ದ ಸಚಿವರಿಗೆ ಅನುಮತಿ ನಿರಾಕರಿಸುವ ಪತ್ರ ಸಚಿವರ ಕೈಸೇರಿದೆ. ಯಾವುದೇ ಸಕಾರಣ ನೀಡದೇ, ಸಮಾವೇಶದಲ್ಲಿ ಭಾಗವಹಿಸಲು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಅನುಮತಿ ನಿರಾಕರಿಸಿದೆ ಎಂದು ಸುರೇಂದ್ರನ್ ಹೇಳಿದ್ದಾರೆ.

ಸಚಿವರ ನೇತೃತ್ವದ ನಿಯೋಗಕ್ಕೆ ಈ ಸಮಾವೇಶದಲ್ಲಿ ಪಾಲ್ಗೊಳ್ಳಲು ಅವಕಾಶ ನೀಡದಿರುವುದು ದುರದೃಷ್ಟಕರ. ಈ ಬಗ್ಗೆ ಪ್ರಧಾನಿ ಮಧ್ಯಪ್ರವೇಶಿಸಿ, ವಿದೇಶಾಂಗ ಸಚಿವಾಲಯದ ನಿರ್ಧಾರ ಮರುಪರಿಶೀಲನೆಗೆ ಸೂಚಿಸಬೇಕು ಎಂದು ಸಿಎಂ ಪಿಣರಾಯಿ ವಿಜಯನ್ ಆಗ್ರಹಿಸಿದ್ದಾರೆ. ವಿಶ್ವಸಂಸ್ಥೆಯ ಪ್ರವಾಸೋದ್ಯಮ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಈ ಸಮಾವೇಶಕ್ಕೆ ಸಚಿವರನ್ನು ಆಹ್ವಾನಿಸಿದ್ದರು.

ಅವಕಾಶ ನಿರಾಕರಣೆಗೆ ಸಂಭಾವ್ಯ ಕಾರಣ ಕೇವಲ ಬಿಜೆಪಿಯ ದ್ವೇಷ ರಾಜಕಾರಣ ಎಂದು ಸಚಿವ ಸುರೇಂದ್ರನ್ ಕಿಡಿ ಕಾರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News