ಇರ್ಮಾ ಚಂಡಮಾರುತದ ಭೀತಿಯಲ್ಲಿ ಅಮೆರಿಕ

Update: 2017-09-09 18:19 GMT

ವಾಶಿಂಗ್ಟನ್,ಸೆ.9: ಪ್ರಬಲವಾದ ಇರ್ಮಾ ಚಂಡಮಾರುತವು ಕೆರಿಬಿಯನ್ ದ್ವೀಪಸಮೂಹದಲ್ಲಿ ಹಾಹಾಕಾರವನ್ನು ಎಬ್ಬಿಸಿದ ಬಳಿಕ ಅಮೆರಿಕದ ಫ್ಲೋರಿಡಾ ರಾಜ್ಯದ ಕರಾವಳಿಯ ಭಾಗಗಳಿಗೆ ಅಪ್ಪಳಿಸಲು ಧಾವಿಸುತ್ತಿದ್ದು, ಮುನ್ನೆಚ್ಚರಿಕೆಯಕ್ರಮವಾಗಿ ಸಹಸ್ರಾರು ಭಾರತೀಯ ಮೂಲದವರು ಸೇರಿದಂತೆ ಐವತ್ತು ಲಕ್ಷಕ್ಕೂ ಅಧಿಕ ಮಂದಿಯನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ.

ಇರ್ಮಾ ಚಂಡಮಾರುತವು ರವಿವಾರ ಫ್ಲೋರಿಡಾದ ಕರಾವಳಿಗೆ ಅಪ್ಪಳಿಸುವ ನಿರೀಕ್ಷೆಯಿದೆಯೆಂದು ಹವಾಮಾನ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಇರ್ಮಾ ಚಂಡಮಾರುತವು ಫ್ಲೋರಿಡಾ ಹಾಗೂ ಸುತ್ತಮುತ್ತಲಿನ ಪ್ರದೇಶಗಳಿಗೆ ಭಾರೀ ಹಾನಿಯನ್ನುಂಟು ಮಾಡುವ ಅಪಾಯವಿದೆಯೆಂದು ಅವರು ಹೇಳಿದ್ದಾರೆ.

    ಫ್ಲೋರಿಡಾದ ಆಡಳಿತವು ಈಗಾಗಲೇ 50.60 ಲಕ್ಷ ಮಂದಿಯ ಸ್ಥಳಾಂತರಕ್ಕೆ ಆದೇಶ ನೀಡಿದ್ದು, ಇದು ರಾಜ್ಯದ ಒಟ್ಟು ಜನಸಂಖ್ಯೆಯ ಕಾಲುಭಾಗದಷ್ಟಾಗಿದೆ. ಸ್ಥಳಾಂತರಗೊಳ್ಳದವರಿಗೆ, ಇರ್ಮಾ ಅಪ್ಪಳಿಸಿದ ಆನಂತರ ಯಾವುದೇ ರಕ್ಷಣಾ ಸೇವೆಗಳು ದೊರೆಯುವುದನ್ನು ನಿರೀಕ್ಷಿಸುವ ಹಾಗಿಲ್ಲವೆಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

ಫ್ಲೋರಿಡಾ ರಾಜ್ಯದಲ್ಲಿ ಭಾರತೀಯ ಮೂಲದ ಅಮೆರಿಕನ್ನರು ಸಹಸ್ರಾರು ಸಂಖ್ಯೆಯಲ್ಲಿ ನೆಲೆಸಿದ್ದಾರೆ. ಚಂಡಮಾರುತ ಅಪ್ಫಳಿಸುವ ಹಿನ್ನೆಲೆಯಲ್ಲಿ ರಕ್ಷಣಾ ಹಾಗೂ ಪರಿಹಾರ ಕಾರ್ಯಾಚರಣೆಗಾಗಿ ಈಗಾಗಲೇ ಸಾವಿರಾರು ಸೇನಾ ಸಿಬ್ಬಂದಿಯನ್ನು ಹಾಗೂ ಮೇಲ್ವಿಚಾರಣಾ ಅಧಿಕಾರಿಗಳನ್ನು ನಿಯೋಜಿಸಲಾಗಿದೆ.

 ಶನಿವಾರ ಬೆಳಗ್ಗೆ ಡೊನಾಲ್ಡ್ ಟ್ರಂಪ್ ರಾಷ್ಟ್ರೀಯ ಪ್ರವಾಹ ವಿಮಾ ಕಾರ್ಯಕ್ರಮದಡಿ, ಪ್ರಾಕೃತಿಕ ವಿಪತ್ತು ಪರಿಹಾರ ಕಾರ್ಯಾಚರಣೆಗಳಿಗಾಗಿ 15.25 ಶತಕೋಟಿ ಡಾಲರ್‌ಗಳ ಹೆಚ್ಚುವರಿ ಅನುದಾನವನ್ನು ಪ್ರಕಟಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News