ತಹಶೀಲ್ದಾರ್‌ಗೆ 25 ಸಾವಿರ ರೂ.ದಂಡ ವಿಧಿಸಿದ ಹೈಕೋರ್ಟ್
ಬೆಂಗಳೂರು, ಆ.10: ನ್ಯಾಯಾಲಯದ ನಿರ್ದೇಶನದ ಹೊರತಾಗಿಯೂ ಆನೇಕಲ್‌ನಲ್ಲಿ ಖಾಸಗಿ ವ್ಯಕ್ತಿಗಳಿಗೆ ಜಮೀನು ಮಂಜೂರು ಮಾಡುವುದಕ್ಕೆ ಬರೋಬ್ಬರಿ ಎಂಟು ವರ್ಷಗಳಿಂದ ಸತಾಯಿಸುತ್ತಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಪಷ್ಟನೆ ನೀಡಲು ವಿಚಾರಣೆಗೆ ಹಾಜರಾಗದ ಹಿನ್ನೆಲೆಯಲ್ಲಿ ಆನೇಕಲ್ ತಹಶೀಲ್ದಾರ್‌ಗೆ ಹೈಕೋರ್ಟ್ 25 ಸಾವಿರ ರೂ. ದಂಡ ವಿಧಿಸಿದೆ.
ಹೈಕೋರ್ಟ್ ಆದೇಶ ಮಾಡಿದ್ದರೂ ಕಳೆದ ಎಂಟು ವರ್ಷಗಳಿಂದ ರಾಜ್ಯ ಸರಕಾರವು ತಮಗೆ ಭೂಮಿ ಮಂಜೂರು ಮಾಡುತ್ತಿಲ್ಲ ಎಂದು ಆರೋಪಿಸಿ ಆನೇಕಲ್ ನಿವಾಸಿಗಳಾದ ಗೋವಿಂದಯ್ಯ ಸೇರಿ ಮೂವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ವಿನೀತ್ ಕೋಠಾರಿ ಅವರಿದ್ದ ಏಕಸದಸ್ಯ ಪೀಠ ಈ ಆದೇಶ ಮಾಡಿತು.
ಆನೇಕಲ್ ತಾಲೂಕಿನಲ್ಲಿ ಗೋವಿಂದಯ್ಯ, ಗೌರಮ್ಮ ಮತ್ತು ರಾಜಮ್ಮ ಎಂಬುವರಿಗೆ ಸೇರಿದ ಜಮೀನನ್ನು ರಾಜ್ಯ ಸರಕಾರ ಸ್ವಾಧೀನಪಡಿಸಿಕೊಂಡಿತ್ತು. ಇದನ್ನು ಪ್ರಶ್ನಿಸಿ 2008ರಲ್ಲಿ ಗೋವಿಂದಯ್ಯ ಹಾಗೂ ಇತರರು ಹೈಕೋರ್ಟ್‌ಗೆ ತಕರಾರು ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್ 2009ರಲ್ಲಿ ಅರ್ಜಿದಾರರಿಗೆ ಜಮೀನು ಮಂಜೂರು ಮಾಡುವಂತೆ ನಿರ್ದೇಶಿಸಿತ್ತು.
ಆದರೆ, ಆದಾಗಿ ನಾಲ್ಕು ವರ್ಷ ಕಳೆದರೂ ಜಮೀನು ಮಂಜೂರು ಮಾಡದ ಹಿನ್ನೆಲೆಯಲ್ಲಿ 2013ರಲ್ಲಿಯೇ ಗೋವಿಂದಯ್ಯ ಅವರು ಹೈಕೋರ್ಟ್‌ಗೆ ಮತ್ತೆ ತಕರಾರು ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ಸಂಬಂಧ ಸೆ.1ರಂದು ವಿಚಾರಣೆ ನಡೆಸಿದ್ದ ಹೈಕೋರ್ಟ್, ಹಲವು ವರ್ಷಗಳು ಕಳೆದರೂ ಹೈಕೋರ್ಟ್ ಆದೇಶವನ್ನು ರಾಜ್ಯ ಸರಕಾರ ಏಕೆ ಪಾಲಿಸಿಲ್ಲ? ಸರಕಾರದ ನಿರ್ಲಕ್ಷದಿಂದಾಗಿ ಅರ್ಜಿದಾರರು ಎರಡನೆ ಬಾರಿಗೆ ಹೈಕೋರ್ಟ್‌ಗೆ ತಕರಾರು ಅರ್ಜಿ ಸಲ್ಲಿಸಿದ್ದಾರೆ. ಅಲ್ಲದೆ, 2013ರಿಂದಲೂ ಅರ್ಜಿದಾರರಿಗೆ ಜಮೀನು ಮಂಜೂರು ಮಾಡುವ ಕುರಿತು ರಾಜ್ಯ ಸರಕಾರ ಯಾವುದೇ ನಿಲುವು ತೆಗೆದುಕೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿತು.
ಅಲ್ಲದೆ, ಪ್ರಕರಣ ಕುರಿತು ವಿವರಣೆ ನೀಡಲು ವಿಚಾರಣೆಗೆ ಹಾಜರಾಗುವಂತೆ ಆನೇಕಲ್ ತಹಶೀಲ್ದಾರ್‌ಗೆ ಸಮನ್ಸ್ ಜಾರಿ ಮಾಡಿದ್ದರೂ ವಿಚಾರಣೆಗೆ ಹಾಜರಾಗಿರಲಿಲ್ಲ ಎಂದು ಬೇಸರಗೊಂಡಿದ್ದ ಹೈಕೋರ್ಟ್, ಆನೇಕಲ್ ತಹಶೀಲ್ದಾರ್‌ಗೆ ಸೆ.8ರಂದು ವಿಚಾರಣೆಗೆ ತಪ್ಪದೇ ಹಾಜರಾಗಬೇಕು. ಅಲ್ಲದೆ, ಪ್ರಕರಣದಲ್ಲಿ ಸತತವಾಗಿ ವಿಚಾರಣೆಗೆ ಗೈರಾದ ಮತ್ತು ಹಲವು ವರ್ಷ ಕಳೆದರೂ ನ್ಯಾಯಾಲಯದ ಆದೇಶವನ್ನು ಪಾಲಿಸದೇ ಇರುವುದಕ್ಕಾಗಿ ಏಕೆ ನಿಮಗೆ ದಂಡ ವಿಧಿಸಬಾರದು? ಎಂಬುದರ ಕುರಿತು ವಿವರಣೆ ನೀಡಬೇಕು ಎಂದು ನಿರ್ದೇಶಿಸಿತ್ತು.
ಅಷ್ಟಾದರೂ ಶುಕ್ರವಾರ (ಸೆ.8ರಂದು) ವಿಚಾರಣೆಗೆ ಆನೇಕಲ್ ತಹಶೀಲ್ದಾರ್ ವಿಚಾರಣೆಗೆ ಹಾಜರಾಗಲಿಲ್ಲ. ಇದರಿಂದ ಬೇಸರಗೊಂಡ ನ್ಯಾಯಪೀಠವು ಆನೇಕಲ್ ತಾಸೀಲ್ದಾರ್‌ಗೆ 25 ಸಾವಿರ ರೂ.ದಂಡ ವಿಧಿಸಿತು.