×
Ad

ಪ್ರತ್ಯೇಕವಾದಿಗಳು ಬಸವ ತತ್ವದ ವಿರೋಧಿಗಳು: ಸಚಿವ ಈಶ್ವರ ಖಂಡ್ರೆ

Update: 2017-09-10 18:16 IST

ಬೆಂಗಳೂರು, ಸೆ.10: ವೀರಶೈವ-ಲಿಂಗಾಯತರು ಬೇರೆಯಲ್ಲ. ವೈಯಕ್ತಿಕ ಹಿತಾಸಕ್ತಿಗಳಿಗೆ ಕಟಿಬಿದ್ದು ಸಮುದಾಯವನ್ನು ಒಡೆಯುವ ಕೆಲಸಕ್ಕೆ ಕೈಹಾಕುವವರು ಬಸವ ತತ್ವದ ವಿರೋಧಿಗಳು ಎಂದು ಪೌರಾಡಳಿತ ಸಚಿವ ಈಶ್ವರ ಖಂಡ್ರೆ ಕಿಡಿಕಾರಿದ್ದಾರೆ.

ರವಿವಾರ ನಗರದ ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ ಅಖಿಲಭಾರತ ವೀರಶೈವ ಮಹಾಸಭಾ ಆಯೋಜಿಸದ್ದ ‘ವೀರಶೈವ ಲಿಂಗಾಯತ ನಾವೆಲ್ಲ ಒಂದೇ’ಯುವ ಬಾಂಧವ್ಯ ಎಂಬ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಕೆಲವರ ಲಿಂಗಾಯತ ಸ್ವತಂತ್ರ ಧರ್ಮ ಬೇಡಿಕೆಯಿಂದ ವೀರಶೈವ ಲಿಂಗಾಯತ ಸಮುದಾಯ ಅಂತಂತ್ರ ಸ್ಥಿತಿಗೆ ತಲುಪುತ್ತಿದೆ. ಸಮುದಾಯದಲ್ಲಿ ಹಲವಾರು ಗೊಂದಲಗಳು ಇರುವುದು ನಿಜ. ಆದರೆ ವೀರಶೈವ-ಲಿಂಗಾಯತ ಬೇರೆ ಬೇರೆಯಲ್ಲ. ಹಿಂದಿನ ಹಿರಿಯರ ನಿರ್ಣಯಕ್ಕೆ ನಾವು ಬದ್ಧರಾಗಬೇಕು ಎಂದು ಹೇಳಿದರು.

ಭವ್ಯ ಸಮಾಜ ನಮ್ಮದು. ಆದರೆ ಕೆಲವರು ಬಸವ ತತ್ವಕ್ಕೆ ವಿರುದ್ಧ ಹೋಗುತ್ತಿದ್ದಾರೆ. ಬಸವಣ್ಣ ಇವ ನಮ್ಮವ, ಇವ ನಮ್ಮವ ಎಂದು ಹೇಳಿದ್ದರು. ಈ ಮಾತನ್ನು ನಮ್ಮವರೇ ನಮ್ಮವರನ್ನ ಒಪ್ಪಿಕೊಳ್ಳುತ್ತಿಲ್ಲ. ಇನ್ನು ಬೇರೆಯವರನ್ನ ಇವರು ಒಪ್ಪಿಕೊಳ್ತಾರಾ?ನಾವು ಬೇರೆ ನೀವು ಬೇರೆ ಎನ್ನುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.

ವೀರಶೈವರನ್ನು ಬದಿಗಿಟ್ಟು ಲಿಂಗಾಯತ ಪ್ರತ್ಯೇಕ ಧರ್ಮದ ಬೇಡಿಕೆ ಇಟ್ಟವರು ಸಮಾಜಕ್ಕೆ ಏನು ಮಾಡಲು ಹೊರಟಿದ್ದಾರೆ. ಅಂಗೈನಲ್ಲಿ ಲಿಂಗ ಹಿಡಿದು ಪೂಜಿಸುವವರೆಲ್ಲ ವೀರಶೈವ ಲಿಂಗಾಯತರು. ಹಿಂದೆ ವೀರಶೈವರು ಲಿಂಗಾಯತರು ಒಂದೇ ಎಂದು ಬರೆದು ಕೊಟ್ಟವರು ಈಗ ಬೇರೆ ಬೇರೆ ಅಂತ ವಾದಿಸುತ್ತಿದ್ದಾರೆ. ಈ ಮೂಲಕ ಸಮುದಾಯದವರನ್ನ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.

ಇದನ್ನ ಅರಿಯದೆ ನಮ್ಮ ಸಮುದಾಯದವರು ದುರ್ಬಲರಾಗುತ್ತಿದ್ದಾರೆ. ನಮ್ಮದು ಏಕತೆ, ಐಕ್ಯತೆ ಸಿದ್ಧಾಂತವನ್ನು ಪ್ರತಿಪಾದಿಸುವ ಸಮಾಜ. ಈ ಕುತಂತ್ರಗಳ ವಿರುದ್ಧ ಯುವ ಸಮುದಾಯ ಎಚ್ಚೆತ್ತುಕೊಳ್ಳಬೇಕು ಎಂದು ಕರೆ ನೀಡಿದರು.

ವೀರಶೈವ ಲಿಂಗಾಯತ ಮಹಾಸಭಾ ರಾಜ್ಯಾಧ್ಯಕ್ಷ ತಿಪ್ಪಣ್ಣ ಮಾತನಾಡಿ, ವೀರಶೈವ-ಲಿಂಗಾಯತ ಧರ್ಮ ಅಖಂಡವಾದುದು. ವೀರಶೈವ ಲಿಂಗಾಯತರನ್ನು ಸ್ವತಂತ್ರ ಧರ್ಮ ಎಂದು ಪರಿಗಣಿಸಬೇಕೆಂದು 40 ವರ್ಷಗಳಿಂದ ಹೋರಾಟ ನಡೆಯುತ್ತಿದೆ. ವೀರಶೈವ-ಲಿಂಗಾಯತ ಧರ್ಮವನ್ನು ಹಿಂದುತ್ವದಿಂದ ಬೇರ್ಪಡಿಸಲು ಒಪ್ಪಲಿಲ್ಲ. ಈಗಲೂ ಆ ಪ್ರಸ್ತಾವನೆ ಕೇಂದ್ರದಲ್ಲಿ ಬಾಕಿಯಿದೆ. ವೀರಶೈವ ಲಿಂಗಾಯತ ಮಹನೀಯರೆಲ್ಲರೂ ‘ನಾವು ಒಂದೇ ಸ್ವತಂತ್ರಗೊಳಿಸಿ’ ಎಂದು ಸಹಿ ಮಾಡಿದ್ದಾರೆ. ಅದರ ದಾಖಲೆಗಳೂ ನಮ್ಮ ಬಳಿಯಿವೆ. ಆದರೆ ಈಗ ಏಕೆ ಬೇರೆ ಬೇರೆ ಎಂದು ಕೇಳುವ ರೋಗ ಬಂತು ಎಂದು ಖಾರವಾಗಿ ಪ್ರಶ್ನಿಸಿದರು.

ವೀರಶೈವ-ಲಿಂಗಾಯತ ಬೇರೆ ಎನ್ನುವವರು ಬಸವನನ್ನು ಆರಾಧಿಸುವುಸು ಏಕೆ, ಬಸವಣ್ಣನ ವಿಚಾರಧಾರೆಗಳ ಬಗ್ಗೆ ಗಂಟೆಗಟ್ಟಲೆ ಪ್ರವಚನ ಮಾಡುವುದು ಏಕೆ. ಇದಕ್ಕೆಲ್ಲ ಪ್ರತ್ಯೇಕವಾದಿಗಳು ಉತ್ತರಿಸಬೇಕು. ನಾವೆಲ್ಲಾ ಒಂದಾಗಿದ್ದರೆ ಮಾತ್ರ ಭವಿಷ್ಯವಿದೆ. ಇಲ್ಲದಿದ್ದರೆ ನಾವೆಲ್ಲಾ ಸರ್ವನಾಶ ಆಗಬೇಕಾಗುತ್ತದೆ ಎಂದು ಭವಿಷ್ಯ ನುಡಿದರು.

ನಾಯಕರ ಗೈರು: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ, ಸಚಿವರಾದ ಶರಣ ಪ್ರಕಾಶ್ ಪಾಟೀಲ್, ವಿನಯ್ ಕುಲಕರ್ಣಿ, ಶಾಸಕ ಬಿ.ವೈ.ರಾಘವೇಂದ್ರ ಸೇರಿದಂತೆ ಇತರ ನಾಯಕರ ಗೈರು ಸಭೆಗೆ ಕಾಡುತ್ತಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News