‘ರಾಷ್ಟ್ರೀಯ ಉದ್ಯೋಗ ನೀತಿ’ ಜಾರಿಗೆ ಬರಗೂರು ಒತ್ತಾಯ
ಬೆಂಗಳೂರು, ಸೆ. 10: ಖಾಸಗಿ ವಲಯದಲ್ಲಿ ಆಯಾ ರಾಜ್ಯದ ಸ್ಥಳೀಯರಿಗೆ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಕೇಂದ್ರ ಸರಕಾರ ರಾಷ್ಟ್ರೀಯ ಉದ್ಯೋಗ ನೀತಿ ಜಾರಿ ಮಾಡಬೇಕೆಂದು ನಾಡೋಜ ಪ್ರೊ.ಬರಗೂರು ರಾಮಚಂದ್ರಪ್ಪ ಒತ್ತಾಯಿಸಿದ್ದಾರೆ.
ರವಿವಾರ ನಾಗನಾಥಪುರ ಮೈಕೊ ಕನ್ನಡ ಬಳಗ ನಗರದ ಪುರಭವನದಲ್ಲಿ ಆಯೋಜಿಸಿದ್ದ ‘ಬೆಳ್ಳಿಹಬ್ಬದ ಸಮಾರಂ’ ಹಾಗೂ ‘ಬೆಳ್ಳಿ ಬೆಳಗು’ ಸ್ಮರಣ ಸಂಚಿಕೆಯನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು, ದೇಶದ ಸಮಗ್ರತೆಯನ್ನು ಕಾಪಾಡಬೇಕಾದರೆ ಆಯಾ ರಾಜ್ಯದ ಸ್ಥಳೀಯರಿಗೆ ಉದ್ಯೋಗ ಕಲ್ಪಿಸುವುದಕ್ಕೆ ಹೆಚ್ಚಿನ ಆದ್ಯತೆ ಕೊಡಬೇಕು ಎಂದು ತಿಳಿಸಿದರು.
ಹಾಗೆಯೇ ನೋಡಿದರೆ ರಾಷ್ಟ್ರೀಯ ಐಕ್ಯತಾ ಪರಿಷತ್ 1968ರಲ್ಲಿಯೇ ರಾಜ್ಯ ಹಾಗೂ ಕೇಂದ್ರ ಸರಕಾರದ ಕಾರ್ಖಾನೆ ಹಾಗೂ ಖಾಸಗಿ ಕಂಪೆನಿಗಳಲ್ಲಿ ಸ್ಥಳೀಯರಿಗೆ ಉದ್ಯೋಗದಲ್ಲಿ ಹೆಚ್ಚಿನ ಆದ್ಯತೆ ಕೊಡಬೇಕು ಎಂದು ಕೇಂದ್ರ ಸರಕಾರಕ್ಕೆ ಶಿಫಾರಸು ಮಾಡಿತು. ಆದರೆ, ಇಲ್ಲಿಯವರೆಗೂ ಅದು ಜಾರಿಗೆ ಬಂದಿಲ್ಲ. ಈಗಲಾದರು ಎಲ್ಲ ರಾಜ್ಯ ಸರಕಾರಗಳು ಕೇಂದ್ರ ಸರಕಾರದ ಮೇಲೆ ಒತ್ತಡ ತಂದು ರಾಷ್ಟ್ರೀಯ ಉದ್ಯೋಗ ನೀತಿಯನ್ನು ಜಾರಿ ಮಾಡಬೇಕು ಎಂದು ಅವರು ಹೇಳಿದರು.
ಕನ್ನಡ ಭಾಷೆ ಅಂದರೆ ಕೇವಲ ಅಕ್ಷರ ಹಾಗೂ ಮಾತುಗಳಲ್ಲ. ಅದು ಉಸಿರು- ಬದುಕು ಎಂಬುದು ಕನ್ನಡದ ಸಾಹಿತ್ಯದ ಪರಂಪರೆ ನಮಗೆ ತಿಳಿಸಿದೆ. ಇಲ್ಲಿ ವಾಸಿಸುವವರ ಬದುಕು ಹಸನುಗೊಂಡರೆ ಮಾತ್ರ ಕನ್ನಡ ಭಾಷೆ ಎಲ್ಲರ ನಾಲಿಗೆಗಳಲ್ಲಿ ನಲಿದಾಡಲು ಸಾಧ್ಯ. ಈ ನಿಟ್ಟಿನಲ್ಲಿ ಕಾರ್ಮಿಕ ಸಂಘಟನೆಗಳು ಹಾಗೂ ಕಾರ್ಖಾನೆಗಳ ಆಡಳಿತ ಮಂಡಳಿ ತಮ್ಮ ಕಾರ್ಖಾನೆಗಳಲ್ಲಿ ಕನ್ನಡಿಗರಿಗೆ ಹೆಚ್ಚಿನ ಆದ್ಯತೆ ಕೊಡಬೇಕು ಎಂದರು.
ಕೂಲಿ ಕಾರ್ಮಿಕರು ಹಾಗೂ ಗ್ರಾಮೀಣ ಜನರಿಂದಾಗಿ ಕನ್ನಡ ಭಾಷೆ ಇನ್ನೂ ಜೀವಂತವಾಗಿದೆ. ಹೀಗಾಗಿ ರಾಜ್ಯದಲ್ಲಿರುವ ಕೂಲಿ ಕಾರ್ಮಿಕರ, ಬಡವರಿಗೆ ಉದ್ಯೋಗ, ಬಡ ಮಕ್ಕಳಿಗೆ ಶಿಕ್ಷಣಕ್ಕೆ ಆದ್ಯತೆ ಸಿಕ್ಕರೆ ಮಾತ್ರ ಕನ್ನಡ ಭಾಷೆ ಮುಂದಿನ ತಲೆಮಾರಿಗು ಉಳಿಸಲು ಸಾಧ್ಯ. ಈ ನಿಟ್ಟಿನಲ್ಲಿ ರಾಜ್ಯ ಸರಕಾರ ಹಾಗೂ ಸಂಘ ಸಂಸ್ಥೆಗಳು ಕಾರ್ಯಮಗ್ನರಾಗಬೇಕೆಂದು ಅವರು ಒತ್ತಾಯಿಸಿದರು.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಡಾ.ಕೆ.ಮುರಳಿಧರ ಮಾತನಾಡಿ, ಹಿಂದಿನ ದಶಕಗಳಲ್ಲಿ ಶೇ.97ರಷ್ಟು ಉದ್ಯೋಗಗಳು ಸರಕಾರಿ ವಲಯದಲ್ಲಿ ಸೃಷ್ಟಿಯಾಗುತ್ತಿತ್ತು. ಆದರೆ, ಈಗ ಅದು ತದ್ವಿರುದ್ದವಾಗಿದೆ. ಶೇ.95ರಷ್ಟು ಉದ್ಯೋಗಗಳು ಖಾಸಗಿ ವಲಯದಲ್ಲಿ ಆಗುತ್ತಿದೆ. ಹೀಗಾಗಿ ಅಂತಾರಾಷ್ಟ್ರೀಯ ಕಂಪೆನಿಗಳು ಸೇರಿ ಎಲ್ಲ ವಿಧದ ಕಂಪೆನಿಗಳಲ್ಲಿ ಸ್ಥಳೀಯರಿಗೆ ಹೆಚ್ಚಿನ ಆದ್ಯತೆ ಕೊಡಬೇಕು. ನಿಟ್ಟಿನಲ್ಲಿ ಕಾರ್ಮಿಕ ಸಂಘಟನೆ ಹಾಗೂ ಆಡಳಿತ ಮಂಡಳಿಯ ಸದಸ್ಯರು ಕಂಪೆನಿಗಳ ಮಾಲಕರಿಗೆ ಮನವರಿಕೆ ಮಾಡಿಕೊಡಬೇಕು ಎಂದು ತಿಳಿಸಿದರು.
ಈ ವೇಳೆ ಹಿರಿಯ ಸಾಹಿತಿ ಡಾ.ಕೋ.ವೆಂ.ರಾಮಕೃಷ್ಣೇಗೌಡ, ಮೈಕೋ ಕನ್ನಡ ಬಳಗದ ಮಾಜಿ ಅಧ್ಯಕ್ಷ ಟಿ.ವಿ.ಶ್ರೀನಿವಾಸಮೂರ್ತಿ, ನರಸಿಂಹ ಶೆಟ್ಟಿ, ಬಿ.ಎಂ. ಶಿವರಾಜ್, ದಯಾನಂದ, ಶಂಕರ್, ಶ್ರೀಧರ್, ಲಕ್ಷ್ಮೀಕಾಂತ್ ಹಾಗೂ ಕೃಷ್ಣಪ್ಪ ರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಬಾಷ್ ಕಂಪೆನಿಯ ಹಿರಿಯ ಪ್ರಧಾನ ವ್ಯವಸ್ಥಾಪಕ ಗಣೇಶ್, ಡಿ.ಎಸ್.ವೀರಬಸಪ್ಪ, ಹಿರಿಯ ಐಪಿಎಸ್ ಅಧಿಕಾರಿ ಕೆ.ವಿ.ಆರ್.ಟಾಗೋರ್, ಕನ್ನಡ ಸಂಘಗಳ ಒಕ್ಕೂಟದ ಅಧ್ಯಕ್ಷ ಎಂ.ತಿಮ್ಮಯ್ಯ, ಮೈಕೊ ಕಾರ್ಮಿಕರ ಸಂಘದ ಅಧ್ಯಕ್ಷ ಉಮೇಶ್, ಕಾರ್ಮಿಕ ಸಂಘದ ಪ್ರಧಾನ ಕಾರ್ಯದರ್ಶಿ ಸತೀಶ್ ಕುಮಾರ್, ಮೈಕೊ ಕನ್ನಡ ಬಳಗದ ಅಧ್ಯಕ್ಷ ರಾಜೇಶ್, ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ್ ಮತ್ತಿತರರಿದ್ದರು.
‘ರಾಜ್ಯ ಸರಕಾರ ವಿಶ್ವ ಕನ್ನಡ ಸಮ್ಮೇಳನ ಮಾಡಲು ಸಿದ್ಧತೆಯಲ್ಲಿ ತೊಡಗಿರುವ ಈ ಸಂದರ್ಭದಲ್ಲಿ, ಉದ್ಯೋಗದಲ್ಲಿ ಕನ್ನಡ ಮಾಧ್ಯಮದಲ್ಲಿ ಓದಿದವರಿಗೆ ಮೊದಲ ಆದ್ಯತೆ ಎಂಬ ಕಾನೂನನ್ನು ಜಾರಿ ಮಾಡಬೇಕು. ಇಂತಹ ಸಕರಾತ್ಮಕ ಕಾನೂನುಗಳು ಹಾಗೂ ಜನಪ್ರತಿನಿಧಿಗಳ, ಸಂಘ-ಸಂಸ್ಥೆಗಳ ನಿಸ್ವಾರ್ಥ ಕಾಳಜಿಯಿಂದ ಮಾತ್ರ ರಾಜ್ಯದಲ್ಲಿ ಹುಟ್ಟಿರುವ ಸಾಮಾನ್ಯ ಜನರ ಬದುಕು ಹಸನುಗೊಳ್ಳಲಿದೆ. ಆ ಮೂಲಕ ಕನ್ನಡ ಭಾಷೆ, ಸಂಸ್ಕೃತಿ ಜನರ ಉಸಿರಾಗಲಿದೆ.’
-ಬರಗೂರು ರಾಮಚಂದ್ರಪ್ಪ ಹಿರಿಯ ಸಾಹಿತಿ
‘ಬದಲಾದ ಕಾಲಗಟ್ಟದಲ್ಲಿ ಉದ್ಯೋಗದ ಸ್ವರೂಪಗಳು ಬದಲಾಗಿದೆ. ಈ ನಿಟ್ಟಿನಲ್ಲಿ ಎಂಎನ್‌ಸಿ ಕಂಪೆನಿಗಳು ರಾಜ್ಯಕ್ಕೆ ಲಗ್ಗೆ ಇಟ್ಟಿವೆ. ಸರಕಾರವೂ ಸ್ಥಳೀಯರಿಗೆ ಉದ್ಯೋಗ ಸೇರಿದಂತೆ ಕೆಲವು ಶರತ್ತುಗಳ ಅನ್ವಯ ಹಲವು ರಿಯಾಯಿತಿ ದರದಲ್ಲಿ ಭೂಮಿ ಮತ್ತು ಮೂಲಭೂತ ಸೌಲಭ್ಯಗಳನ್ನು ನೀಡುತ್ತಿವೆ. ಆದರೆ, ಕಂಪೆನಿಗಳು ಮಾತ್ರ ಸರಕಾರ ಸೂಚಿಸಿರುವ ಯಾವುದೇ ಶರತ್ತುಗಳನ್ನು ಪಾಲಿಸಲು ಮುಂದಾಗದಿರುವುದು ಹಲವಾರು ಪ್ರಕರಣಗಳಲ್ಲಿ ಕಂಡುಬಂದಿದೆ. ಈ ರೀತಿಯಲ್ಲಿ ವಂಚಿಸುವ ಕಂಪೆನಿಗಳ ವಿರುದ್ಧ ದೂರು ಬಂದರೆ ಆ ಕಂಪೆನಿಗಳಿಗೆ ನೀಡಿರುವ ಸವಲತ್ತುಗಳನ್ನು ವಾಪಸ್ ಪಡೆಯಲು ಕನ್ನಡ ಅಭಿವೃದ್ಧಿ ಪ್ರಾಧಿಕಾರದಿಂದ ಸರಕಾರಕ್ಕೆ ಮನವಿ ಮಾಡಲಾಗುವುದು.’-ಮುರಳಿಧರ ಕಾರ್ಯದರ್ಶಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ