×
Ad

ಸೆ.12ರಂದು ರಾಷ್ಟ್ರೀಯ ‘ಪ್ರತಿರೋಧ ಸಮಾವೇಶ’

Update: 2017-09-10 18:43 IST

ಬೆಂಗಳೂರು, ಸೆ. 10: ಹಿರಿಯ ಪತ್ರಕರ್ತೆ, ವಿಚಾರವಾದಿ ಗೌರಿ ಲಂಕೇಶ್ ಅವರ ಹತ್ಯೆ ಖಂಡಿಸಿ ಸೆ.12ರಂದು ರಾಷ್ಟ್ರ ಮಟ್ಟದ ಖಂಡನೆ-ಪ್ರತಿರೋಧ ಸಮಾವೇಶವನ್ನು ಗೌರಿ ಲಂಕೇಶ್ ಹತ್ಯೆ ವಿರೋಧಿ ಹೋರಾಟ ವೇದಿಕೆ ಹಮ್ಮಿಕೊಂಡಿದೆ.

ರವಿವಾರ ನಗರದ ಶಾಸಕರ ಭವನದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ವೇದಿಕೆ ಸಂಚಾಲಕಿ ಹಾಗೂ ಹಿರಿಯ ಲೇಖಕಿ ಕೆ.ನೀಲಾ, ಸೆ.12ರಂದು ನಗರದ ಸೆಂಟ್ರಲ್ ಕಾಲೇಜು ಆಟದ ಮೈದಾನದಲ್ಲಿ 11ಗಂಟೆಗೆ ಪ್ರತಿರೋಧ ಸಮಾವೇಶ ನಡೆಯಲಿದ್ದು, ಇದಕ್ಕೂ ಮೊದಲು 10ಗಂಟೆಗೆ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಿಂದ ಸಮಾವೇಶದ ವೇದಿಕೆವರೆಗೂ ಬೃಹತ್ ಜಾಥಾ ಹಮ್ಮಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

50 ಸಾವಿರ ಮಂದಿ ಭಾಗಿ: ನಾಳೆ ನಡೆಯುವ ರಾಷ್ಟ್ರಮಟ್ಟದ ಪ್ರತಿರೋಧ ಸಮಾವೇಶದಲ್ಲಿ ದೇಶದ ವಿವಿಧ ಭಾಗಗಳ 50ಸಾವಿರಕ್ಕೂ ಹೆಚ್ಚು ಮಂದಿ ಭಾಗಿಯಾಗಲಿದ್ದಾರೆ. ಸಿಪಿಎಂ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ, ಹಿರಿಯ ಪತ್ರಕರ್ತ ಪಿ.ಸಾಯಿನಾಥ್, ಸ್ವರಾಜ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಯೋಗೇಂದ್ರ ಯಾದವ್, ದಲಿತ ಹೋರಾಟಗಾರ ಜಿಗ್ನೇಶ್ ಮೇವಾನಿ ಸೇರಿದಂತೆ ಪ್ರಗತಿಪರ ಚಿಂತಕರು, ವಿಚಾರವಾದಿಗಳು ಹಾಗೂ ಹೋರಾಟಗಾರರು ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.

ಗೌರಿ ಲಂಕೇಶ್ ಹತ್ಯೆ ಮಾತ್ರವಲ್ಲ, ವೈಚಾರಿಕತೆ ಮತ್ತು ಅಭಿವ್ಯಕ್ತಿ ಸ್ವಾತಂತ್ರದ ಕಗ್ಗೊಲೆ. ಸಂವಿಧಾನದಲ್ಲಿ ನಂಬಿಕೆ ಇಲ್ಲದವರು ಈ ಕೃತ್ಯ ನಡೆಸಿದ್ದಾರೆ ಎಂದ ಅವರು, ಗೌರಿ ಲಂಕೇಶ್ ಅವರ ಹತ್ಯೆ ನಡೆದು ಹೋಗಿದೆ, ಇಡೀ ರಾಷ್ಟ್ರವೇ ಬೆಚ್ಚಿ ಬಿದ್ದಿದೆ. ಹತ್ಯೆ ನಡೆಸಿದವರು ಯಾರೇ ಆಗಿರಲಿ, ಎಷ್ಟು ಬಲಿಷ್ಟರೇ ಆಗಿರಲಿ ಬಂಧಿಸುವುದು ಸರಾರದ ಕರ್ತವ್ಯ ಎಂದು ನುಡಿದರು.

ವೇದಿಕೆ ಆಗ್ರಹ:  ಸಿಟ್ ಮೂಲಕ ನಡೆಯುತ್ತಿರುವ ಗೌರಿ ಲಂಕೇಶ್ ಹತ್ಯೆ ತನಿಖೆಯನ್ನು ತೀವ್ರಗೊಳಿಸಿ ಹಂತಕರು ಮತ್ತು ಕೃತ್ಯದ ಹಿಂದಿರುವ ಶಕ್ತಿಗಳನ್ನು ಪತ್ತೆಮಾಡಬೇಕು. ಅದೇ ರೀತಿ, ವಿಚಾರವಾದಿ, ಹಿರಿಯ ಸಂಶೋಧಕ ಡಾ.ಎಂ.ಎಂ. ಕಲಬುರ್ಗಿ ಅವರ ಹತ್ಯೆಯ ತನಿಖೆಯನ್ನೂ ತೀವ್ರಗೊಳಿಸಿ ಹಂತಕರನ್ನು ಬಂಧಿಸುವ ಮೂಲಕ ಹತ್ಯಾ ಸಂಸ್ಕೃತಿ ಮತ್ತು ಅಸಹಿಷ್ಣುತೆಗೆ ಕೊನೆ ಹಾಡುವಲ್ಲಿ ರಾಜ್ಯ ಸರಕಾರ ತನ್ನ ಬದ್ಧತೆಯನ್ನು ಪ್ರದರ್ಶಿಸಬೇಕೆಂದು ಗೌರಿ ಲಂಕೇಶ್ ಹತ್ಯೆ ವಿರೋಧಿ ಹೋರಾಟ ವೇದಿಕೆ ಆಗ್ರಹಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News