ಕಸದ ಸಮಸ್ಯೆ ಸೇರಿ ಹಲವು ಸಮಸ್ಯೆಗಳಿಗೆ ಮಾಧ್ಯಮಗಳು ಸ್ಪಂದಿಸುತ್ತಿಲ್ಲ: ನಾಗೇಶ್ ಹೆಗಡೆ
ಬೆಂಗಳೂರು, ಆ.10: ಕಸದ ಸಮಸ್ಯೆ ಸೇರಿ ಇನ್ನಿತರ ಸಮಸ್ಯೆಗಳನ್ನು ಬಗೆ ಹರಿಸಲು ಹಲವು ಪರಿಹಾರಗಳಿದ್ದರೂ ಟಿವಿ ಚಾನಲ್‌ಗಳು ಈ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ಪತ್ರಕರ್ತ ಹಾಗೂ ವಿಜ್ಞಾನ ಲೇಖಕ ನಾಗೇಶ್ ಹೆಗಡೆ ಹೇಳಿದ್ದಾರೆ.
ರವಿವಾರ ಭಾರತೀಯ ವಿದ್ಯಾಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪ್ರೊ.ವಿ.ಕೃ.ಗೋಕಾಕ್ ಪ್ರಶಸ್ತಿಯನ್ನು ಸ್ವೀಕರಿಸಿ ಅವರು ಮಾತನಾಡಿದರು.
ಮುಂದುವರೆದ ದೇಶಗಳು ಹಸಿ ಕಸ, ಒಣ ಕಸ, ಪ್ಲಾಸ್ಟಿಕ್ ಕಸ ಸೇರಿ ಕಸಗಳ ವಿಂಗಡಣೆಗಾಗಿಯೇ ಐದಾರು ಬುಟ್ಟಿಗಳನ್ನು ಇಟ್ಟಿರುತ್ತಾರೆ. ಆದರೆ, ಭಾರತದಲ್ಲಿ ಹಸಿ ಕಸ, ಒಣಕಸ ಸೇರಿ ಒಂದೇ ಪ್ಲಾಸ್ಟಿಕ್ ಕವರ್‌ನಲ್ಲಿ ತುಂಬಿ ಬೀಗಿಯಾಗಿ ಕಟ್ಟಿ ರಸ್ತೆಯ ಪಕ್ಕದ ಕಸದ ರಾಶಿಯಲ್ಲಿ ಬೀಸಾಡುತ್ತಾರೆ. ಈ ಕಸದ ಕವರ್‌ಗಳನ್ನು ಹಸು ಹಾಗೂ ನಾಯಿಗಳು ತಿಂದು ಸಾಯಿಯುತ್ತವೆ. ಈ ಸಮಸ್ಯೆಗಳನ್ನು ಬಗೆ ಹರಿಸಲು ಮಾಧ್ಯಮಗಳು ಸಹಕಾರಿಯಾಗದೇ ತಮ್ಮದೆ ಆಲೋಚನೆಯಲ್ಲಿ ಕಾರ್ಯಕ್ರಮಗಳನ್ನು ಮಾಡಿಕೊಂಡು ಮುಂದೆ ಸಾಗುತ್ತಿವೆ ಎಂದು ಹೇಳಿದರು.
ಎರಡ್ಮೂರು ದಶಕಗಳ ಹಿಂದೆ ಹಿರಿಯರು ಏನಾದರೂ ಹೇಳಿದರೆ ಅದನ್ನು ಕಿರಿಯರು ಕೇಳುತ್ತಿದ್ದರು. ಹಾಗೂ ಕಲಿಯುತ್ತಿದ್ದರು. ಆದರೆ, ಈಗ ಟೆಕ್ನಾಲಜಿಯಿಂದಾಗಿ ಕಾಲ ಬದಲಾಗಿದ್ದು, ಬಸವಣ್ಣನವರ ನುಡಿಯಂತೆ ಎನಗಿಂತ ಕಿರಿಯರಿಲ್ಲ ಎಂಬಂತೆ ಕಿರಿಯರಿಂದ ಹಿರಿಯರು ಹಾಗೂ ಹಿರಿಯರಿಂದ ಕಿರಿಯರು ಕಲಿತು ಭವಿಷ್ಯ ರೂಪಿಸಿಕೊಳ್ಳಬೇಕಾಗಿದೆ. ಅಲ್ಲದೆ, ವೈಚಾರಿಕ ಮನೋಭಾವದಿಂದ ವಿಜ್ಞಾನವನ್ನು ನೋಡಬೇಕೆಂದು ಹೇಳಿದರು.
ಸುಪ್ರೀಂ ಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಎಂ.ಎನ್. ವೆಂಕಟಾಚಲಯ್ಯ ಮಾತನಾಡಿ, ವಿಜ್ಞಾನದಲ್ಲಿ ಸತ್ಯ ಮತ್ತು ವಾಸ್ತವವಿದ್ದು, ಈ ನಿಜ ಸಂಗತಿಯನ್ನು ವಿಜ್ಞಾನ ಲೇಖಕ ನಾಗೇಶ್ ಹೆಗಡೆ ಅವರು ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡು ತಮ್ಮ ಲೇಖನಗಳ ಮೂಲಕ ತಿಳಿಯಪಡಿಸುತ್ತಿದ್ದಾರೆ ಎಂದು ಹೇಳಿದರು.
ಟಿಬೆಟನ್ ಧರ್ಮಗುರು ದಲೈಲಾಮಾ ಕೂಡ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳುವ ಮೂಲಕವೇ ಎಲ್ಲ ವರ್ಗದವರಿಗೂ ಹತ್ತಿರವಾಗಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಭಾರತೀಯ ವಿದ್ಯಾಭವನ ನಿರ್ದೇಶಕ ಎಚ್.ಎನ್.ಸುರೇಶ್, ಎನ್.ಎಸ್.ಶ್ರೀಧರ್‌ಮೂರ್ತಿ, ಅನಿಲ್ ಗೋಕಾಕ್, ರವಿಕುಮಾರ್, ಎನ್.ಎಸ್.ಶ್ರೀಧರ್‌ಮೂರ್ತಿ ಉಪಸ್ಥಿತರಿದ್ದರು.