ಸೆ.12ರ ಪ್ರತಿರೋಧ ಸಮಾವೇಶಕ್ಕೆ ಸಾಹಿತಿ-ಕಲಾವಿದರ ಬೆಂಬಲ: ಪ್ರೊ.ಜಿ.ಕೆ. ಗೋವಿಂದರಾವ್
ಬೆಂಗಳೂರು, ಸೆ.10: ಪತ್ರಕರ್ತೆ ಹಾಗೂ ವಿಚಾರವಾದಿ ಗೌರಿ ಲಂಕೇಶ್ ಹತ್ಯೆಯನ್ನು ಸಾಂಸ್ಕೃತಿಕ ರಂಗ ತೀವ್ರವಾಗಿ ಖಂಡಿಸುತ್ತೇವೆ. ಅಲ್ಲದೆ, ಗೌರಿ ಲಂಕೇಶ್ ಹತ್ಯೆ ವಿರೋಧಿ ಹೋರಾಟ ವೇದಿಕೆ ನೇತೃತ್ವದಲ್ಲಿ ಸೆ.12ರಂದು ನಡೆಯಲಿರುವ ‘ಪ್ರತಿರೋಧ ಸಮಾವೇಶ’ ಸಾಹಿತಿಗಳು ಮತ್ತು ಕಲಾವಿದರೆಲ್ಲರೂ ಪಾಲ್ಗೊಳ್ಳಲಿದ್ದೇವೆ ಎಂದು ಚಿಂತಕ ಪ್ರೊ.ಜಿ.ಕೆ. ಗೋವಿಂದರಾವ್ ತಿಳಿಸಿದ್ದಾರೆ.
ರವಿವಾರ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗೌರಿ ಲಂಕೇಶ್‌ರ ಹತ್ಯೆ ನಾಗರಿಕ ಸಮಾಜದ ಜೀವ ವೃಕ್ಷಕ್ಕೆ ತಗಲಿರುವ ಮಾರಣಾಂತಿಕ ರೋಗದ ಪ್ರತೀಕ. ಈ ಹತ್ಯೆಯು ನೈಜ, ಪ್ರಜಾಸತ್ತಾತ್ಮಕವಾದ ವ್ಯಕ್ತಿತ್ವವನ್ನು ನಾಶಪಡಿಸಲು ಜನ ವಿರೋಧಿ ಶಕ್ತಿಗಳು ಮುಂದಾಗಿವೆ. ಹೀಗಾಗಿ, ಪ್ರೀತಿ ಮತ್ತು ಶಾಂತಿಯ ಮೂಲಕ ಸಹಬಾಳ್ವೆ, ಸೌಹಾರ್ದತೆಯನ್ನು ಜೀವನದ ಆದರ್ಶವಾಗಿ ಸ್ವೀಕರಿಸಿರುವ ಎಲ್ಲರೂ ಒಂದಾಗಿ ಈ ಹತ್ಯೆಯನ್ನು ವಿರೋಧಿಸಬೇಕಿದೆ ಎಂದರು.
ವಿಚಾರವಾದಿ ಎಂ.ಎಂ.ಕಲಬುರ್ಗಿ, ಗೌರಿ ಲಂಕೇಶ್‌ರನ್ನು ಹತ್ಯೆ ಮಾಡಿದ ತಕ್ಷಣ ನಮ್ಮಲ್ಲಿರುವ ಸ್ಫೂರ್ತಿಯನ್ನು ಅಡಗಿಸಲು ಸಾಧ್ಯವಿಲ್ಲ. ಧೈರ್ಯವಾಗಿ ನಮಗೆ ಅನಿಸಿದ್ದನ್ನು ನೇರವಾಗಿ ಹೇಳುತ್ತೇವೆ. ಎಷ್ಟು ಜನರನ್ನು ಕೊಂದರೂ ನಾವು ಹೆದರುವುದಿಲ್ಲ. ಪ್ರೀತಿ, ಗೌರವ, ಘನತೆಯಿಂದ ಬಾಳುವ ಆರೋಗ್ಯವಂತ ಸಮಾಜ ನಿರ್ಮಾಣ ಮಾಡುವ ಕಡೆ ನಾವು ಹೊಗಬೇಕು ಎಂದು ಹೇಳಿದರು.
ಮತೀಯ ಶಕ್ತಿಗಳ ಕೃತ್ಯ: ವಿಚಾರವಾದಿ ಡಾ.ಡಾಮಿನಿಕ್ ಮಾತನಾಡಿ, ತಲತಲಾಂತರದ ಪಿಡುಗಗಳಾದ ಜಾತಿ, ಮೌಢ್ಯ, ಶೋಷಣೆಯ ಸಂಕೋಲೆಗಳನ್ನು ಬಿಸಾಕಬೇಕು. ಇಂತಹ ಆಶಯಗಳ ಸಲುವಾಗಿ ದೃಢ ನಿಲುವಿನಿಂದ ತನ್ನ ನಿಷ್ಠುರ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ ಗೌರಿಯನ್ನು ವೈಚಾರಿಕವಾಗಿ ಎದುರುಗೊಳ್ಳಲು ಸಾಮರ್ಥ್ಯವಿಲ್ಲದ ಮತೀಯ ಶಕ್ತಿಗಳು ಗುಂಡಿಟ್ಟು ಕೊಂದಿದ್ದಾರೆ. ಅಲ್ಲದೆ, ನಾವು ಗೆದ್ದೆವೆಂದು ಬೀಗುತ್ತಿರುವ ಹಿಂಸಾ ಆರಾಧಕರಿಗೆ ನಾವು ತಕ್ಕ ಉತ್ತರ ನೀಡಬೇಕಿದೆ ಎಂದರು.
ಜೀವ ಕಾರುಣ್ಯ ಹಾಗೂ ಪ್ರಗತಿಪರ ಬದಲಾವಣೆ ಬಯಸುವ ಎಲ್ಲ ವರ್ಗದ ಬರಹಗಾರರು, ಕಲಾವಿದರು, ರಂಗಭೂಮಿ, ಸಿನೆಮಾ ಕಲಾವಿದರು ಗೌರಿ ಲಂಕೇಶ್ ಹತ್ಯೆಯನ್ನು ಖಂಡಿಸಿ ನಡೆಯುತ್ತಿರುವ ಪ್ರತಿರೋಧ ಸಮಾವೇಶದಲ್ಲಿ ಭಾಗವಹಿಸುತ್ತಿದ್ದಾರೆ. ಸಮಾಜದ ಆರೋಗ್ಯವನ್ನು ಕಾಪಾಡುವುದರಲ್ಲಿ ಕಲಾವಿದರ ಪಾತ್ರ ಅಪಾರವಾದುದಾಗಿದೆ ಎಂದು ಅವರು ಹೇಳಿದರು.
ಸೆ.12ರಂದು ನಗರದ ಸಿಟಿ ರೈಲು ನಿಲ್ದಾಣದಿಂದ ಆರಂಭವಾಗುವ ರ್ಯಾಲಿ ಸ್ವಾತಂತ್ರ ಉದ್ಯಾನವನದ ಹಿಂಭಾಗದಲ್ಲಿರುವ ಸೆಂಟ್ರಲ್ ಕಾಲೇಜು ಆಟದ ಮೈದಾನಕ್ಕೆ ತಲುಪುತ್ತದೆ. ಈ ರ್ಯಾಲಿಯಲ್ಲಿ 50 ಸಾವಿರಕ್ಕೂ ಅಧಿಕ ಮಂದಿ ಪಾಲ್ಗೊಳ್ಳುವ ನಿರೀಕ್ಷೆ ಇದೆ. ಪ್ರಗತಿಪರ ಚಿಂತಕರು, ಸಾಹಿತಿಗಳು, ದಲಿತ, ಹಿಂದುಳಿದ ಸಂಘಟನೆಗಳ ಮುಖಂಡರು, ವಿದ್ಯಾರ್ಥಿ, ಯುವಜನರು, ರೈತರು, ಕಾರ್ಮಿಕ ಸಂಘಟನೆಗಳು ಭಾಗವಹಿಸಲಿವೆ ಎಂದು ವಿವರಿಸಿದರು.
ಪ್ರತಿರೋಧ ಸಮಾವೇಶದಲ್ಲಿ ಸಾಮಾಜಿಕ ಹೋರಾಟಗಾರ್ತಿ ತೀಸ್ತಾ ಸೆಟಲ್‌ವಾಡ್, ಹಿರಿಯ ಪತ್ರಕರ್ತ ಪಿ.ಸಾಯಿನಾಥ್, ಸಾಗರಿಕಾ ಘೋಷ್, ನರ್ಮದ ಬಚಾವೋ ಆಂದೋಲನದ ನಾಯಕಿ ಮೇಧಾಪಾಟ್ಕರ್ ಹಾಗೂ ಕವಿತಾ ಕೃಷ್ಣನ್, ದಲಿತ ಹೋರಾಟಗಾರ ಜಿಗ್ನೇಶ್ ಮೇವಾನಿ, ಚಿತ್ರನಟ ಪ್ರಕಾಶ್ ರೈ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ರಂಗಕರ್ಮಿ ಶ್ರೀನಿವಾಸ ಜಿ.ಕಪ್ಪಣ್ಣ, ಲೇಖಕ ಹುಲಿಕುಂಟೆ ಮೂರ್ತಿ, ಕವಿಯತ್ರಿ ಡಾ.ಎಚ್.ಎಲ್.ಪುಷ್ಪ, ಹಿಮಾಂಶು, ನಾಟಕಕಾರ ಶಶಿಧರ್ ಭಾರಿಘಾಟ್, ಸಾಹಿತಿ ಕೆ.ವೈ.ನಾರಾಯಣಸ್ವಾಮಿ, ವಿಜಯ್‌ಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.