ಬಿ.ವಿ.ರಾಧಾ ನಿಧನಕ್ಕೆ ಸಚಿವೆ ಉಮಾಶ್ರೀ ಸಂತಾಪ
Update: 2017-09-10 19:52 IST
ಬೆಂಗಳೂರು, ಸೆ.10: ಕನ್ನಡ ಚಿತ್ರರಂಗದ ಹಿರಿಯ ನಟಿ ಬಿ.ವಿ.ರಾಧಾ ನಿಧನಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ ಸಂತಾಪ ವ್ಯಕ್ತಪಡಿಸಿ, ಕಲಾವಿದೆಯ ಸೇವೆಗೆ ಮುಡುಪಾಗಿದ್ದ ಚೇತನವೊಂದು ಕಣ್ಮರೆಯಾಗಿದೆ ಎಂದು ಶೋಕಿಸಿದ್ದಾರೆ.
ಹಿರಿಯ ನಟರಾಗಿದ್ದ ಡಾ.ರಾಜ್ ಕುಮಾರ್, ಕಲ್ಯಾಣ ಕುಮಾರ್ ಹಾಗೂ ವಿಷ್ಣುವರ್ಧನ್ ಸೇರಿದಂತೆ ಕನ್ನಡದ ದಿಗ್ಗಜರ ಜೊತೆ ಸೇರಿ ನಟಿಸಿದ್ದ ಹಿರಿಯ ನಟಿ ಬಿ.ವಿ.ರಾಧಾ ಚಿತ್ರರಂಗದಲ್ಲಿ ದೇವರು ಕೊಟ್ಟ ತಂಗಿಯೆಂದೇ ಜನಪ್ರಿಯರಾಗಿದ್ದರು.
‘ನವ ಕೋಟಿ ನಾರಾಯಣ’ ಚಿತ್ರದಿಂದ ಚಿತ್ರೋದ್ಯಮಕ್ಕೆ ಪ್ರವೇಶಿಸಿದ ರಾಧಾ ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದರು.
2003ರಲ್ಲಿ ನಟಿ ಬಿ.ವಿ.ರಾಧಾರಿಗೆ ರಾಜ್ಯೋತ್ಸವ ಪ್ರಶಸ್ತಿ ಲಭಿಸಿತ್ತು. ಜಂಬೂ ಸವಾರಿ ಚಿತ್ರಕ್ಕಾಗಿ ಸ್ಪರ್ಣ ಕಮಲ ಪ್ರಶಸ್ತಿ ಪಡೆದರು. ಅವರ ಕಲಾ ಸೇವೆ ಅನನ್ಯವಾದದ್ದು. ಅಂತಹ ಕಲಾವಿದೆಯ ನಿಧನದಿಂದ ಕನ್ನಡ ಚಿತ್ರರಂಗಕ್ಕೆ ಅಪಾರ ನಷ್ಟವಾಗಿದೆ ಎಂದು ಸಚಿವ ಉಮಾಶ್ರೀ ಶೋಕ ವ್ಯಕ್ತಪಡಿಸಿದರು.