×
Ad

ಹೊಟ್ಟೆ ಉರಿ ಪಡುವವರು ಹೆಚ್ಚಾಗಿದ್ದಾರೆ: ಸಚಿವ ಡಿ.ಕೆ.ಶಿವಕುಮಾರ್

Update: 2017-09-10 20:35 IST

ಬೆಂಗಳೂರು, ಸೆ.10: ರಾಜ್ಯಾದ್ಯಂತ ಕೆಂಪೇಗೌಡರ ಜನ್ಮದಿನಾಚರಣೆಯನ್ನು ರಾಜ್ಯ ಸರಕಾರದಿಂದ ಆಚರಿಸುತ್ತಿರುವುದನ್ನು ಕಂಡು ಹೊಟ್ಟೆ ಉರಿ ಪಡುವವರು ಹೆಚ್ಚಾಗಿದ್ದಾರೆ ಎಂದು ಇಂಧನ ಸಚಿವ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.

ರವಿವಾರ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಜ್ಞಾನಭಾರತಿ ವಾರ್ಡ್‌ನ ಬೆಂಗಳೂರು ವಿಶ್ವವಿದ್ಯಾನಿಲಯದ ಜ್ಞಾನ ಭಾರತಿ ಆವರಣದಲ್ಲಿ ಆಯೋಜಿಸಿದ್ದ ನಾಡಪ್ರಭು ಕೆಂಪೇಗೌಡರ ಅಧ್ಯಯನ ಕೇಂದ್ರದ ಕಟ್ಟಡ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ನಾಡಪ್ರಭು ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡುವ ಮೂಲಕ ಬೆಂಗಳೂರು ನಿರ್ಮಾತೃರನ್ನು ಸ್ಮರಿಸಲಾಗುತ್ತಿದೆ ಎಂದರು.

ರಾಜ್ಯ ಸರಕಾರದ ಈ ಕೆಲಸವನ್ನು ಕಂಡು ಕೆಲವರು ಹೊಟ್ಟೆ ಉರಿ ಪಡುತ್ತಿದ್ದಾರೆ ಎಂದ ಸಚಿವರು, ಪ್ರಾಧಿಕಾರದ ಮೂಲಕ ನಮ್ಮ ಸರಕಾರ ಕೆಂಪೇಗೌಡರನ್ನು ನೆನೆಸಿಕೊಳ್ಳುತ್ತಿದೆ. ಆದರೆ, ಹಿಂದಿನ ಸರಕಾರ ಯಾಕೆ ಪ್ರಾಧಿಕಾರ ರಚನೆ ಹಾಗೂ ಅಧ್ಯಯನ ಕೇಂದ್ರ ನಿರ್ಮಾಣ ಮಾಡಲು ಸಾಧ್ಯವಾಗಿಲ್ಲ ಎಂಬುದರ ಬಗ್ಗೆ ಆತ್ಮವಾಲೋಕನ ಮಾಡಿಕೊಳ್ಳಲಿ ಎಂದು ಟೀಕಿಸಿದರು.

ಶಾಸಕ ಮುನಿರತ್ನ ಮಾತನಾಡಿ, ಹಿಂದಿನ ನಾಡಪ್ರಭುರ ದೂರದೃಷ್ಟಿ ಚಿಂತನೆಗಳನ್ನು ಮುಂದಿನ ಪೀಳಿಗೆಗೆ ತಲುಪಿಸುವಲ್ಲಿ ಈ ಕೇಂದ್ರ ಸಹಕಾರಿಯಾಗಲಿದೆ. ಅಲ್ಲದೆ, ನಗರದ ಬಡಾವಣೆಗಳನ್ನು ಮುಂದಿನ ದಿನಗಳಲ್ಲಿ ಕೆಂಪೇಗೌಡರ ದೂರದೃಷ್ಟಿಯ ರೀತಿಯಲ್ಲಿಯೇ ನಿರ್ಮಾಣ ಮಾಡಲಾಗುತ್ತದೆ ಎಂದರು.

ಬೆಂಗಳೂರು ನಗರ ಮುಂದಿನ ದಿನಗಳಲ್ಲಿ ಯಾವ ರೀತಿಯ ಬೆಳವಣಿಗೆಯನ್ನು ಹೊಂದಲಿದೆ ಎನ್ನುವ ಭವಿಷ್ಯದ ಚಿತ್ರಣವನ್ನು 23 ಎಕರೆ ವ್ಯಾಪ್ತಿ ಪ್ರದೇಶದ ಸ್ಥಳದಲ್ಲಿ ನಿರ್ಮಿಸಿ ಚರಿತ್ರೆಯ ಪ್ರತಿಯೊಂದು ಪುಟಗಳನ್ನು ಪುನರ್ ನಿರ್ಮಾಣ ಮಾಡಿ ಪ್ರವಾಸೋದ್ಯಮ ತಾಣವನ್ನಾಗಿ ಮಾಡುವ ಯೋಜನೆಯನ್ನು ಕೈಗೊಳ್ಳಲು ದೃಢಸಂಕಲ್ಪ ಮಾಡಲಾಗಿದೆ ಎಂದು ಹೇಳಿದರು.

ಆದಿಚುಂಚನಗಿರಿ ಮಠದ ಡಾ.ನಿರ್ಮಲಾನಂದ ಸ್ವಾಮೀಜಿ ಮಾತನಾಡಿ, ಕೇವಲ ಒಂದು ಜಾತಿಗೆ ಸೀಮಿತವಾಗದೇ ಬೆಂಗಳೂರು ನಿರ್ಮಾಣ ಮಾಡಿದ ನಾಡಪ್ರಭು ಕೆಂಪೇಗೌಡರ ದೂರದೃಷ್ಟಿ ಚಿಂತನೆ, ಸಾಮಾಜಿಕ ಧೋರಣೆ ಮತ್ತು ಜಾತ್ಯಾತೀತ ಮನೋಭಾವವನ್ನು ಆದರ್ಶವಾಗಿಟ್ಟುಕೊಂಡು ಮುಂದಿನ ಪೀಳಿಗೆಗೆ ಅವರ ವಿಚಾರಧಾರೆಗಳನ್ನು ಕೊಂಡೊಯ್ಯುವ ಅಗತ್ಯವಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಸಚಿವ ಕೆ.ಜೆ.ಜಾರ್ಜ್, ಮೇಯರ್ ಜಿ.ಪದ್ಮಾವತಿ, ಉಪ ಮೇಯರ್ ಎಂ.ಆನಂದ್, ಸಂಸದ ಡಿ.ಕೆ.ಸುರೇಶ್, ಪಾಲಿಕೆ ಸದಸ್ಯರಾದ ಜಿ.ಡಿ.ತೇಜಸ್ವಿನಿ ಸೀತರಾಮಯ್ಯ, ಜಿ.ಮೋಹನ್‌ಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News