ವರದಿಗಾರ ಇಮ್ತಿಯಾಝ್‌ರನ್ನು ಬಿಡುಗಡೆಗೊಳಿಸಿ: ಸೈಯದ್ ಮುಝಾಹಿದ್
ಬೆಂಗಳೂರು, ಸೆ. 10: ವಾರ್ತಾಭಾರತಿ ಪತ್ರಿಕೆಯ ಬಂಟ್ವಾಳ ವರದಿಗಾರ ಇಮ್ತಿಯಾಝ್‌ರನ್ನು ಈ ಕೂಡಲೇ ಬಿಡುಗಡೆಗೊಳಿಸಬೇಕೆಂದು ಬಿಬಿಎಂಪಿ ಜೆಡಿಎಸ್ ಪಕ್ಷದ ನಾಮನಿರ್ದೇಶಿತ ಸದಸ್ಯ ಸೈಯದ್ ಮುಝಾಹಿದ್ ಒತ್ತಾಯಿಸಿದ್ದಾರೆ.
ರವಿವಾರ ಇಲ್ಲಿನ ಪುಲಿಕೇಶಿನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರಾವಳಿ ಭಾಗದಲ್ಲಿ ವಾರ್ತಾಭಾರತಿ ಪತ್ರಿಕೆ ಇದೆ. ಈ ಪತ್ರಿಕೆಯೂ ಆ ಭಾಗದಲ್ಲಿ ಸೌಹಾರ್ದತೆ ಕಾಪಾಡಲು ಶ್ರಮಿಸುತ್ತಿದೆ. ಆದರೆ, ಇತ್ತೀಚಿಗೆ ನಡೆದ ಶರತ್ ಮಡಿವಾಳ ಕೊಲೆ ಪ್ರಕರಣ ಸಂಬಂಧ ಆರೋಪಿಯೊಬ್ಬನ ಮನೆಗೆ ನುಗ್ಗಿದ ಪೊಲೀಸರು, ತಪಾಸಣೆ ನೆಪದಲ್ಲಿ ಮನೆಯಲ್ಲಿದ್ದ ಧಾರ್ಮಿಕ ಗ್ರಂಥಗಳನ್ನು ಹರಿದು ಎಸೆದಿದ್ದಾರೆ ಎಂಬ ಆ ಮನೆಯವರ ಆರೋಪದ ಮೇರೆಗೆ ವಾರ್ತಾಭಾರತಿಯ ಬಂಟ್ವಾಳ ತಾಲೂಕಿನ ವರದಿಗಾರ ಇಮ್ತಿಯಾಝ್ ಅವರು ವರದಿ ಮಾಡಿದ್ದ ಹಿನ್ನೆಲೆ ಅವರನ್ನು ಬಂಧಿಸಿರುವುದು ಖಂಡನೀಯ ಎಂದರು.
ಇಮ್ತಿಯಾಝ್‌ರ ಬಂಧನ ಪ್ರಕರಣ ಸಂಬಂಧ ಸ್ವತಂತ್ರ ತನಿಖೆ ನಡೆಸಬೇಕು. ತನಿಖೆ ನಡೆಯುವವರೆಗೆ ಪತ್ರಕರ್ತನ ಮೇಲೆ ಯಾವುದೇ ಆರೋಪಿಗಳಿಲ್ಲದೆ ಬಂಧ ಮುಕ್ತಗೊಳಿಸಬೇಕೆಂದು ಸೈಯದ್ ಮುಝಾಹಿದ್ ಆಗ್ರಹಿಸಿದ್ದಾರೆ.