ಸಚಿವ ಜಾರ್ಜ್ ರಾಜೀನಾಮೆಗೆ ರಾಜ್ಯಾದ್ಯಂತ ಹೋರಾಟ: ಯಡಿಯೂರಪ್ಪ
ಬೆಂಗಳೂರು, ಸೆ. 11: ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣವನ್ನು ಸುಪ್ರೀಂ ಕೋರ್ಟ್ ತನಿಖೆಗೆ ವಹಿಸುವಂತೆ ಆದೇಶಿಸಿರುವ ಹಿನ್ನೆಲೆಯಲ್ಲಿ ಸಚಿವ ಕೆ.ಜೆ.ಜಾರ್ಜ್ ಅವರ ರಾಜೀನಾಮೆಗೆ ಆಗ್ರಹಿಸಿ ಸೆ 16ರಂದು ರಾಜ್ಯಾದ್ಯಂತ ಹೋರಾಟ ನಡೆಸಲಾಗುವುದು ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ತಿಳಿಸಿದ್ದಾರೆ.
ಸೋಮವಾರ ನಗರದ ಬಿಜೆಪಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಐಡಿ ತನಿಖೆಯಲ್ಲಿ ಕ್ಲೀನ್ ಚಿಟ್ ಪಡೆದು ಮತ್ತೆ ಸಚಿವ ಜಾರ್ಜ್ ಮಂತ್ರಿಯಾಗಿದ್ದು ಸಿಐಡಿ ವರದಿ ದೋಷಪೂರಿತ ಎಂದು ಸುಪ್ರೀಂ ಕೋರ್ಟ್ ಹೇಳಿರುವಾಗ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕಿತ್ತು. ಈಗಲಾದರೂ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಲಿ ಇಲ್ಲವೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಚಿವ ಸಂಪುಟದಿಂದ ಕೈಬಿಡಲಿ ಎಂದು ಆಗ್ರಹಿಸಿದರು.
ಸುಪ್ರೀಂಕೋರ್ಟ್ ಸಿಬಿಐಗೆ 3 ತಿಂಗಳಲ್ಲಿ ತನಿಖಾ ವರದಿ ನೀಡಲು ಸೂಚಿಸಿದೆ. ಹಾಗಾಗಿ, ತನಿಖೆಯಲ್ಲಿ ಅವರು ನಿರ್ದೋಷಿ ಎಂದು ಸಾಬೀತಾದರೆ ಮತ್ತೆ ಮಂತ್ರಿಯಾಗಲಿ. ನಮ್ಮದೇನು ಅಭ್ಯಂತರವಿಲ್ಲ. ಸಚಿವ ಜಾರ್ಜ್ ರಾಜೀನಾಮೆಗೆ ಆಗ್ರಹಿಸಿ ಸೆ. 16 ರಂದು ಬೆಂಗಳೂರು ಸೇರಿದಂತೆ ಜಿಲ್ಲಾ ಕೇಂದ್ರಗಳಲ್ಲಿ ಬಿಜೆಪಿ ಶಾಸಕರು, ಸಂಸದರು, ಮಾಜಿ ಶಾಸಕರು ಹಾಗೂ ಪ್ರಮುಖ ಮುಖಂಡರು ಪ್ರತಿಭಟನೆ ನಡೆಸಲಿದ್ದಾರೆ ಎಂದು ತಿಳಿಸಿದರು.
ಸ್ವಾಮಿ ವಿವೇಕಾನಂದ ಅವರು ಚಿಕಾಗೋದಲ್ಲಿ ಮಾಡಿದ ಐತಿಹಾಸಿಕ ಭಾಷಣದ 120ನೆ ವರ್ಷದ ಅಂಗವಾಗಿ ಪ್ರಧಾನಿ ಮೋದಿ ದಿಲ್ಲಿಯಲ್ಲಿ ವಿದ್ಯಾರ್ಥಿಗಳ ಜತೆ ನಡೆಸಿದ ಸಂವಾದವನ್ನು ಆಲಿಸುವಂತೆ ಮೈಸೂರು ವಿವಿ ವಿದ್ಯಾರ್ಥಿಗಳಿಗೆ ಸೂಚನೆ ನೀಡಿರುವುದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆಕ್ಷೇಪಣೆ ವ್ಯಕ್ತಪಡಿಸಿರುವುದು ಖಂಡನೀಯ. ಸಿದ್ದರಾಮಯ್ಯ ಭಾರತೀಯರೋ, ಹಿಂದೂಗಳೋ ಅಲ್ಲವೋ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿದರು.
ನಗರದಲ್ಲಿ ಮಳೆಯ ಅವಾಂತರಕ್ಕೆ ಸಿಲುಕಿರುವ 2 ಸಾವಿರ ಕುಟುಂಬಗಳಿಗೆ ಸೆ.17ರಂದು ಬಿಜೆಪಿ ವತಿಯಿಂದ ಅಕ್ಕಿ ವಿತರಿಸಲಾಗುವುದು ಎಂದು ಯಡಿಯೂರಪ್ಪ ಇದೇ ವೇಳೆ ತಿಳಿಸಿದರು.
ಗೋಷ್ಠಿಯಲ್ಲಿ ಸಂಸದ ಪಿ.ಸಿ.ಮೋಹನ್, ಶಾಸಕರಾದ ಬಿ.ಎನ್ ವಿಜಯಕುಮಾರ್, ಲಕ್ಷ್ಮಣ ಸವದಿ, ಡಾ. ಅಶ್ವತ್ಥನಾರಾಯಣ, ನಾರಾಯಣಸ್ವಾಮಿ ಸೇರಿದಂತೆ ಇತರರು ಇದ್ದರು.