ವಿವೇಕಾನಂದರ ತತ್ವಾದರ್ಶಗಳ ಪಾಲನೆಯಿಂದ ಬಲಿಷ್ಠ ರಾಷ್ಟ್ರ ನಿರ್ಮಾಣ: ಕೇಂದ್ರ ಸಚಿವ ಅನಂತಕುಮಾರ್
ಬೆಂಗಳೂರು, ಸೆ. 11: ವಿವೇಕಾನಂದರ ತತ್ವಾದರ್ಶವನ್ನು ಆದರ್ಶವಾಗಿಟ್ಟುಕೊಂಡು ಯುವಕರು ದೇಶದ ಅಭ್ಯುದಯಕ್ಕೆ ಶ್ರಮಿಸಬೇಕು ಎಂದು ಕೇಂದ್ರ ಸಚಿವ ಅನಂತಕುಮಾರ್ ಕರೆ ನೀಡಿದ್ದಾರೆ.
ಸೋಮವಾರ ನಗರದಲ್ಲಿ ಆಯೋಜಿಸಿದ್ದ ಯುವಚೇತನೋತ್ಸವ-2017 ಹಾಗೂ ನವೀಕರಿಸಿದ ವಿವೇಕಾನಂದ ಉದ್ಯಾನವನ (ಆಧ್ಯಾತ್ಮಿಕ ಉದ್ಯಾನವನ) ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, 19ನೆ ಶತಮಾನ ಇಂಗ್ಲೆಂಡ್, 20ನೆ ಶತಮಾನ ಅಮೆರಿಕದ್ದಾಗಿದ್ದು, 21ನೆ ಶತಮಾನ ಭಾರತದ್ದಾಗಲಿದೆ. ಇದಕ್ಕೆ ಯುವಕರು ಕೈ ಜೋಡಿಸಿದರೆ ಭಾರತ ವಿಶ್ವದಲ್ಲೇ ಸೂಪರ್ ಪವರ್ ಆಗಲಿದೆ ಎಂದರು.
2025ರ ವೇಳೆಗೆ ದೇಶ ಬಲಿಷ್ಠ ರಾಷ್ಟ್ರವಾಗಲು ಯುವಶಕ್ತಿಯ ಪಾತ್ರ ದೊಡ್ಡದು. ಇಂದಿನ ಯುವಕರು ವಿವೇಕಾನಂದರ ಆದರ್ಶಗಳನ್ನು ಮೈಗೂಡಿಸಿಕೊಂಡಾಗ ಮಾತ್ರ ಇದು ಸಾಧ್ಯವಾಗಲಿದೆ ಎಂದು ಹೇಳಿದರು.
ಪಾಲಿಕೆ ಸದಸ್ಯ ಕೆ.ಉಮೇಶ್ ಶೆಟ್ಟಿ ಮಾತನಾಡಿ, ಉದ್ಯಾನವನದಲ್ಲಿ ಸ್ವಾಮಿ ವಿವೇಕಾನಂದರ ಆದರ್ಶಗಳನ್ನು ಬರವಣಿಗೆ ರೂಪದಲ್ಲಿ ಕೆತ್ತಲಾಗಿದೆ. ಇಲ್ಲಿ ವಾಯುವಿಹಾರಕ್ಕೆ ಬರುವ ಸಾರ್ವಜನಿಕರು ಮತ್ತು ಯುವಕರಿಗೆ ಪ್ರೇರಣೆ ಆಗಲಿದೆ ಎಂದರು.
ಕಾರ್ಯಕ್ರಮದಲ್ಲಿ ಐದು ಸಾವಿರ ವಿದ್ಯಾರ್ಥಿಗಳಿಂದ ಬೃಹತ್ ಶೋಭಾಯಾತ್ರ ನಡೆಸಲಾಯಿತು. ಈ ವೇಳೆ ವಿಧಾನ ಪರಿಷತ್ ಸದಸ್ಯ ವಿ.ಸೋಮಣ್ಣ, ಅದಮ್ಯ ಚೇತನ ಅಧ್ಯಕ್ಷೆ ತೇಜಸ್ವಿನಿ ಅನಂತಕುಮಾರ್ ಸೇರಿದಂತೆ ಇತರರು ಇದ್ದರು.