ಸುಗ್ರೀವಾಜ್ಞೆಗೆ ಅನುಮೋದನೆ ನೀಡುವಂತೆ ದಸಂಸ ಆಗ್ರಹ
ಬೆಂಗಳೂರು, ಸೆ.11: ಪರಿಶಿಷ್ಟ ಜಾತಿ ಹಾಗೂ ಪಂಗಡಗಳ ಮುಂಭಡ್ತಿಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಆದೇಶ ವಿರೋಧಿಸಿ ರಾಜ್ಯ ಸರಕಾರ ಹೊರಡಿಸಿ ರುವ ಸುಗ್ರೀವಾಜ್ಞೆಗೆ ರಾಜ್ಯಪಾಲರು ಕೂಡಲೇ ಅನುಮೋದನೆ ನೀಡಬೇಕೆಂದು ಆಗ್ರಹಿಸಿ ರಾಜ್ಯ ದಲಿತ ಸಂಘರ್ಷ ಸಮಿತಿ ವತಿಯಿಂದ ಸೆ.15 ರಂದು ರಾಜ್ಯಾದ್ಯಂತ ಧರಣಿ ಹಮ್ಮಿಕೊಳ್ಳಲಾಗಿದೆ.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿ ಅಧ್ಯಕ್ಷ ಲಕ್ಷ್ಮಿನಾರಾಯಣ ನಾಗವಾರ, ವಿನಾಕಾರಣ ರಾಜ್ಯಪಾಲ ವಜುಭಾಯಿ ವಾಲಾ ರಾಜ್ಯ ಸರಕಾರ ಹೊರಡಿಸಿರುವ ಸುಗ್ರೀವಾಜ್ಞೆಯನ್ನು ಹಲವು ಕಾರಣಗಳು ನೀಡಿ ವಾಪಸ್ ಕಳಿಸಿದ್ದಾರೆ. ಆದರೆ, ರಾಜ್ಯ ಸರಕಾರ ಅವರು ಕೇಳಿದ ಕಾರಣಗಳಿಗೆ ವಿವರಣೆ ನೀಡಿದ್ದರೂ ಮಸೂದೆಗೆ ಅನುಮೋದನೆ ನೀಡದೇ ದಲಿತ ವಿರೋಧಿ ನೀತಿ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿದರು.
ಇತ್ತೀಚಿನ ದಿನಗಳಲ್ಲಿ ರಾಜ್ಯಪಾಲರು ದಲಿತ ಪರವಾದ ವಿಚಾರಗಳಲ್ಲಿ ಕಾಲಹರಣ ಮಾಡುತ್ತಿದ್ದಾರೆ. ಈ ಮೂಲಕ ಸಾಮಾಜಿಕ ನ್ಯಾಯದ ವಿರೋಧಿ ನಿಲುವು ತಾಳುತ್ತಿದ್ದಾರೆ. ದಲಿತ ಗುತ್ತಿಗೆದಾರರಿಗೆ 50 ಲಕ್ಷದೊಳಗಿನ ಟೆಂಡರ್‌ನಲ್ಲಿ ಮೀಸಲಾತಿ ನೀಡುವ ಸಂಬಂಧ ಜಾರಿ ಮಾಡಿದ್ದ ಮಸೂದೆಗೂ ಅನುಮೋದನೆ ನೀಡದೇ ರಾಷ್ಟ್ರಪತಿಗಳಿಗೆ ಕಳಿಸುವ ಮೂಲಕ ದಲಿತ ವಿರೋಧಿ ನೀತಿ ಅನುಸರಿಸಿದ್ದರು. ಆದರೆ, ಈಗ ಅದೇ ಹಾದಿಯಲ್ಲಿ ಮುಂದುವರಿದಿರುವ ಅವರು ಮುಂಭಡ್ತಿ ವಿಚಾರದಲ್ಲಿ ಸ್ಪಂದಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ದಲಿತರ ಮನೆಗಳಿಗೆ ಭೇಟಿ ಕೊಟ್ಟು ಊಟ ಮಾಡುವ, ದಲಿತ ಅಭಿವೃದ್ಧಿ ಬಗ್ಗೆ ಮಾತನಾಡುವ ಬಿಜೆಪಿ ಮುಖಂಡರು ದಲಿತರ ಪರವಾದ ಸುಗ್ರೀವಾಜ್ಞೆಗೆ ಸಹಿ ಹಾಕುವಂತೆ ಇದುವರೆಗೂ ರಾಜ್ಯಪಾಲರನ್ನು ಭೇಟಿ ಮಾಡಿ ಮನವಿ ಮಾಡಿಲ್ಲ. ಕೇವಲ ತಮ್ಮ ರಾಜಕೀಯ ಸ್ವಾರ್ಥಕ್ಕಾಗಿ ದಲಿತರನ್ನು ಬಳಕೆ ಮಾಡಿಕೊಳ್ಳಲು ಬಿಜೆಪಿ ಮುಂದಾಗಿದೆ ಎಂದು ಅವರು ಕಿಡಿಕಾರಿದರು.