×
Ad

ಕಟ್ಟಡ ಕಾರ್ಮಿಕ ಮಂಡಳಿ ಸೆಸ್ ಹಣ ದುರ್ಬಳಕೆಗೆ ಖಂಡನೆ

Update: 2017-09-11 18:15 IST

ಬೆಂಗಳೂರು, ಸೆ.11: ಕಟ್ಟಡ ಕಾರ್ಮಿಕ ಕಲ್ಯಾಣ ಮಂಡಳಿಯ ಸೆಸ್ ಹಣವನ್ನು ಕಾರ್ಮಿಕ ಸಚಿವ ದುರ್ಬಳಕೆ ಮಾಡಿಕೊಳ್ಳಲು ಮುಂದಾಗಿದ್ದಾರೆ ಎಂದು ರಾಜ್ಯ ಕಟ್ಟಡ ಕಾರ್ಮಿಕರ ಸಂಘಗಳ ಸಮನ್ವಯ ಸಮಿತಿ ಆರೋಪಿಸಿದೆ.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿ ಸದಸ್ಯ ಕೆ.ಮಹಾಂತೇಶ್, 2006 ರಲ್ಲಿ ಆರಂಭವಾದ ಕಾರ್ಮಿಕ ಕಲ್ಯಾಣ ಮಂಡಳಿಯಲ್ಲಿ 5650 ಕೋಟಿ ರೂ.ಗಳಷ್ಟು ಕಾರ್ಮಿಕರ ಹಣ ಸೆಸ್ ರೂಪದಲ್ಲಿ ಸಂಗ್ರಹವಾಗಿದ್ದರೂ, ಇದುವರೆಗೂ ಕಾರ್ಮಿಕರಿಗಾಗಿ ಸರಕಾರ ಖರ್ಚು ಮಾಡಿರುವುದು 177 ಕೋಟಿ ರೂ.ಗಳು ಮಾತ್ರ. ಆದರೆ, ಈಗ ಕಾರ್ಮಿಕ ಸಚಿವರು ಮನಬಂದಂತೆ ಖರ್ಚು ಮಾಡಲು ಕಾರ್ಯಕ್ರಮಗಳ್ನು ರೂಪಿಸಿದ್ದಾರೆ ಎಂದು ದೂರಿದರು.

ಕಟ್ಟಡ ಕಾರ್ಮಿಕ ಕಲ್ಯಾಣ ಮಂಡಳಿ ತ್ರಿಪಕ್ಷೀಯ ಸ್ವಾಯತ್ತ ಸಮಿತಿಯಾಗಿದ್ದರೂ, ಯಾವುದೇ ವಿಷಯಗಳು ಚರ್ಚಿಸದೇ ಏಕಾಏಕಿ ಹಲವು ನಿರ್ಧಾರಗಳನ್ನು ಕೈಗೊಂಡು ಸಾವಿರಾರು ಕೋಟಿ ಹಣವನ್ನು ಖರ್ಚು ಮಾಡಲು ಅಪ್ರಯೋಜನಕಾರಿ ಸ್ವಯಂಘೋಷಿತ ಕಾರ್ಯಕ್ರಮಗಳನ್ನು ರೂಪಿಸಿದ್ದಾರೆ. ಅಲ್ಲದೆ, ನೋಂದಾಯಿತ ಕಾರ್ಮಿಕರಿಗೆ ನೀಡಲಾಗುತ್ತಿದ್ದ ಮದುವೆ, ಹೆರಿಗೆ ಮತ್ತಿತರ ಕಲ್ಯಾಣ ಸೌಲಭ್ಯಗಳಿಗೆ ಕತ್ತರಿ ಹಾಕಲು ಸಚಿವರು ನಿರ್ಧರಿಸಿದ್ದಾರೆ. ಹೀಗಾಗಿ, ಕೂಡಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಮಧ್ಯಪ್ರವೇಶ ಮಾಡಿ ಕಾರ್ಮಿಕ ವಿರೋಧಿ ನೀತಿಗಳು ಜಾರಿ ಮಾಡುವುದನ್ನು ತಡೆಗಟ್ಟಬೇಕು ಎಂದು ಆಗ್ರಹಿಸಿದರು.

ಮಹಿಳಾ ಫಲಾನುಭವಿಗಳಿಗೆ 2 ಮಕ್ಕಳಿಗೆ ಹೆರಿಗೆ ಸೌಲಭ್ಯಕ್ಕಾಗಿ ನೀಡುತ್ತಿದ್ದ ಸಹಾಯ ಧನ ಏರಿಕೆ ಮಾಡಿದ್ದಾರೆ ಹಾಗೂ ನೋಂದಣಿಯಾದ ಫಲಾನುಭವಿಯ 2 ಮಕ್ಕಳಿಗೆ 50 ಸಾವಿರ ಸಹಾಯಧನ ನೀಡಲಾಗುತ್ತಿದೆ. ಆದರೆ, ಇವೆರಡನ್ನು ಮೂರು ವರ್ಷಗಳ ಅವಧಿಗೆ ಠೇವಣಿ ಇಡಬೇಕು ಎಂದು ಪ್ರಸ್ತಾಪ ಮಾಡಿರುವುದು ಖಂಡನೀಯ ಎಂದು ಹೇಳಿದರು.

ಬೇಡಿಕೆಗಳು: ಮದುವೆ ಹಾಗೂ ಹೆರಿಗೆ ಸಹಾಯ ಧನ ಹಿಂದಿನಂತೆ ಮುಂದುವರಿಸಬೇಕು. ಸೆಸ್ ಹಣವನ್ನು ಕಾರ್ಮಿಕರ ಕಲ್ಯಾಣ ಕಾರ್ಯಕ್ರಮಗಳಿಗೆ ಮಾತ್ರ ಬಳಕೆ ಮಾಡಬೇಕು. ಸೌಲಭ್ಯಗಳ ವೀಲೆವಾರಿಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಬೇಕು. ಕಾರ್ಮಿಕ ಸಂಘಟನೆಗಳ ಪ್ರಮಾಣ ಪತ್ರದ ಆಧಾರದ ವೆುೀಲೆ ನವೀಕರಣ ಮತ್ತು ಹೊಸ ನೋಂದಣಿ ಮಾಡಬೇಕು. ಆನ್‌ಲೈನ್ ವ್ಯವಸ್ಥೆಯನ್ನು ಕೂಡಲೇ ಬಲಪಡಿಸಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಸಮಿತಿ ಸದಸ್ಯರಾದ ಎಸ್.ಎಸ್.ಪ್ರಕಾಶ್, ಸಿ.ವಿ.ಲೋಕೇಶ್, ಎನ್.ವೀರಸ್ವಾಮಿ, ಕಾಳಪ್ಪ, ಬಿ.ದೇವರಾಜು, ಎಂ.ಜಿ.ರಂಗಸ್ವಾಮಿ ಉಪಸ್ಥಿತರಿದ್ದರು.

ಕಾರ್ಮಿಕರ ಹಣ ದುರುಪಯೋಗ:

11 ಲಕ್ಷ ಫಲಾನುಭವಿಗಳಿಗೆ ಸ್ಮಾರ್ಟ್‌ ಫೋನ್‌ಗಾಗಿ 264 ಕೋಟಿ ರೂ.ಗಳು, ನೋಂದಣಿಯಾದ ಫಲಾನುಭವಿ ಹಾಗೂ ಅವರ ಮಕ್ಕಳ ಬಸ್‌ಪಾಸ್‌ಗೆ 3258 ಕೋಟಿ ರೂ.ಗಳು, ಏರ್ ಆ್ಯಂಬುಲೆನ್ಸ್‌ಗೆ 21 ಕೋಟಿ ರೂ.ಗಳು, ಉದ್ಯೋಗಖಾತ್ರಿ ಕೆಲಸಗಾರರನ್ನು ನೋಂದಾಯಿಸಲು ಕಿಯೋನಿಕ್ಸ್ ಸಂಸ್ಥೆಗೆ 15 ಕೋಟಿ ರೂ.ಗಳಿಗೆ ಗುತ್ತಿಗೆ ಸೇರಿದಂತೆ ಇನ್ನಿತರೆ ಕಾರ್ಯಕ್ರಮಗಳಿಗೆ ಕಾರ್ಮಿಕರ ಸೆಸ್ ಹಣವನ್ನು ಬಳಕೆ ಮಾಡಿಕೊಳ್ಳಲು ಮುಂದಾಗಿದ್ದಾರೆ. ಇದು ಅಕ್ಷಮ್ಯ ಅಪರಾಧ.

-ಶಿವಣ್ಣ, ರಾಜ್ಯ ಕಟ್ಟಡ ಕಾರ್ಮಿಕರ ಸಂಘಗಳ ಸಮನ್ವಯ ಸಮಿತಿ ಸದಸ್ಯ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News