ಸಿಐಡಿ ಅಧಿಕಾರಿಗಳಿಂದ ಕುಟುಂಬಸ್ಥರಿಗೆ ಬೆದರಿಕೆ: ಶೋಭಾ ಕರಂದ್ಲಾಜೆ
ಬೆಂಗಳೂರು, ಸೆ.11: ಡಿವೈಎಸ್ಪಿ ಎಂ.ಕೆ.ಗಣಪತಿ ಆತ್ಮಹತ್ಯೆ ಪ್ರಕರಣ ಸಂಬಂಧ ರಾಜ್ಯದ ಸಿಐಡಿ ಅಧಿಕಾರಿಗಳು ಗಣಪತಿ ಅವರ ಕುಟುಂಬಸ್ಥರಿಗೆ ಮೊಬೈಲ್ ಕರೆಗಳ ಮೂಲಕ ಬೆದರಿಕೆ ಹಾಕುತ್ತಿದ್ದಾರೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ, ಶೋಭಾ ಕರಂದ್ಲಾಜೆ ಗಂಭೀರ ಆರೋಪ ಮಾಡಿದ್ದಾರೆ.
ಸೋಮವಾರ ನಗರದ ಮೌರ್ಯ ವೃತ್ತದ ಗಾಂಧಿ ಪ್ರತಿಮೆ ಎದುರು ಬಿಜೆಪಿ ಮಹಿಳಾ ಮೋರ್ಚಾ ಕಾರ್ಯಕರ್ತರು, ಡಿವೈಎಸ್ಪಿ ಎಂ.ಕೆ.ಗಣಪತಿ ಆತ್ಮಹತ್ಯೆ ಪ್ರಕರಣವನ್ನು ಸುಪ್ರೀಂಕೋರ್ಟ್ ಸಿಬಿಐಗೆ ವಹಿಸಿರುವ ಹಿನ್ನೆಲೆಯಲ್ಲಿ ಪ್ರಕರಣದಲ್ಲಿ ಆರೋಪಿಯಾಗಿರುವ ಸಚಿವ ಕೆ.ಜೆ.ಜಾರ್ಜ್ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಶೋಭಾ ಕರಂದ್ಲಾಜೆ, ಗಣಪತಿ ಆತ್ಮಹತ್ಯೆ ಪ್ರಕರಣ ಸಂಬಂಧ ಸಿಬಿಐ ತನಿಖೆ ನಡೆಸಬೇಕೆಂದು ಸುಪ್ರೀಂ ಕೋರ್ಟ್ ಸೂಚಿಸಿದೆ. ಆದರೆ, ರಾಜ್ಯದ ಸಿಐಡಿ ಅಧಿಕಾರಿಗಳು ಗಣಪತಿ ಅವರ ಕುಟುಂಬಸ್ಥರಿಗೆ ಮೊಬೈಲ್ ಕರೆಗಳ ಮೂಲಕ ಬೆದರಿಕೆ ಹಾಕುತ್ತಿದ್ದಾರೆ. ಅಲ್ಲದೆ, ಪ್ರಕರಣ ಮುಚ್ಚಿಹಾಕಲು ರಾಜ್ಯದ ಕಾಂಗ್ರೆಸ್ ಸರಕಾರ ಸಂಚು ರೂಪಿಸಿದೆ ಎಂದು ದೂರಿದರು.
ಗಣಪತಿ ಪ್ರಕರಣ ತನಿಖೆ ವೇಳೆ ಅವರ ಮೊಬೈಲ್ ಕಸಿದುಕೊಂಡ ಸಿಐಡಿ ಅಧಿಕಾರಿಗಳು, ಅದರಲ್ಲಿನ ಸಾಕ್ಷ್ಯಗಳನ್ನು ನಾಶಪಡಿಸಿದ್ದಲ್ಲದೆ, ಅದರಲ್ಲಿರುವ ಕುಟುಂಬಸ್ಥರ ಮೊಬೈಲ್‌ಗಳಿಗೆ ಕರೆ ಮಾಡಿ ಬೆದರಿಕೆ ಹಾಕುತ್ತಿದ್ದಾರೆ ಎಂದ ಅವರು, ಕೇವಲ ಮೂರು ತಿಂಗಳಿನಲ್ಲಿ ಸಿಐಡಿ ತನಿಖೆ ನಡೆಸಿ, ಪ್ರಕರಣದ ಆರೋಪಿ ಕೆ.ಜೆ.ಜಾರ್ಜ್ ಅವರಿಗೆ ಕ್ಲೀನ್‌ಚಿಟ್ ನೀಡಲಾಗಿತ್ತು. ಇದೆಲ್ಲಾ ವ್ಯವಸ್ಥಿತ ಸಂಚು ಎಂದು ಹೇಳಿದರು.
ಗಣಪತಿ ಅವರ ಕುಟುಂಬವರ್ಗ ಈ ಬಗ್ಗೆ ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನೆ ಮಾಡಿದ ಹಿನ್ನೆಲೆಯಲ್ಲಿ ಸಿಬಿಐ ತನಿಖೆ ನಡೆಸುವಂತೆ ಕೋರ್ಟ್ ಸೂಚಿಸಿದೆ. ಸಿಬಿಐ ತನಿಖೆ ನಿಷ್ಪಕ್ಷಪಾತದಲ್ಲಿ ನಡೆಯಲಿದೆ. ಆದರೆ, ಜಾರ್ಜ್ ಅವರು ಅಧಿಕಾರಿದಲ್ಲಿದ್ದರೆ, ಎಲ್ಲ್ಲ ಸಾಕ್ಷಿಗಳನ್ನು ನಾಶ ಮಾಡುವ ಸಾಧ್ಯತೆಗಳು ಬಲವಾಗಿವೆ. ಹೀಗಾಗಿ, ರಾಜ್ಯದ ಜನತೆ ಅವರ ರಾಜೀನಾಮೆ ಕೇಳುತ್ತಿದ್ದಾರೆ. ಇಲ್ಲದಿದ್ದಲ್ಲಿ, ಗಣಪತಿ ಕುಟುಂಬಸ್ಥರಿಗೆ ಅನ್ಯಾಯ ಆಗಲಿದೆ ಎಂದರು.
ರಾಜೀನಾಮೆ ನೀಡಿ: ಗಣಪತಿ ಆತ್ಮಹತ್ಯೆ ಪ್ರಕರಣ ಸಂಬಂಧ ಸಿಬಿಐ ತನಿಖೆ ರಾಜ್ಯದಲ್ಲಿ ಆರಂಭವಾಗುವ ಮೊದಲೇ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ಅವರು ರಾಜೀನಾಮೆ ನೀಡಬೇಕು. ಇಲ್ಲದಿದ್ದಲ್ಲಿ, ರಾಜ್ಯಾದ್ಯಂತ ಬೃಹತ್ ಹೋರಾಟ ನಡೆಸಲಾಗುವುದು ಎಂದು ಶೋಭಾ ಕರಂದ್ಲಾಜೆ ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಬೆಂಗಳೂರು ನಗರ ಜಿಲ್ಲಾ ಅಧ್ಯಕ್ಷ ಎಸ್.ಮುನಿರಾಜು, ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಶಾರದ ನಾಯಕ, ವಿಜಯಲಕ್ಷ್ಮೀ, ಆನಂದ್ ಸೇರಿ ಪ್ರಮುಖರು ಹಾಜರಿದ್ದರು.