ಕ್ರಿಮಿನಲ್ ಮೊಕದ್ದಮೆ ಎದುರಿಸುತ್ತಿರುವ ಕೇಂದ್ರ ಸಚಿವರ ರಾಜೀನಾಮೆ ಮೊದಲು ಪಡೆಯಲಿ: ಸಿಎಂ ಸಿದ್ದರಾಮಯ್ಯ
ಬೆಂಗಳೂರು, ಸೆ.11: ಸಚಿವ ಕೆ.ಜೆ.ಜಾರ್ಜ್ ಅವರ ರಾಜೀನಾಮೆ ಕೇಳುವ ಮೊದಲು ಕ್ರಿಮಿನಲ್ ಮೊಕದ್ದಮೆ ಎದುರಿಸುತ್ತಿರುವ ಕೇಂದ್ರ ಸಚಿವರ ರಾಜೀನಾಮೆಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೋರಾಟ ಮಾಡಲಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ.
ಸೋಮವಾರ ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಡಿವೈಎಸ್ಪಿ ಎಂ.ಕೆ.ಗಣಪತಿ ಆತ್ಮಹತ್ಯೆ ಪ್ರಕರಣ ಸಿಬಿಐ ತನಿಖೆಗೆ ಸುಪ್ರೀಂ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಜಾರ್ಜ್ ರಾಜೀನಾಮೆ ಕೋರಿ ಬಿಜೆಪಿ ಕೈಗೊಂಡಿರುವ ಹೋರಾಟಕ್ಕೆ ತಿರುಗೇಟು ನೀಡಿದರು.
ಹೋರಾಟ ಹಾಸ್ಯಾಸ್ಪದ: ಕ್ರಿಮಿನಲ್ ಮೊಕದ್ದಮೆ ಎದುರಿಸುತ್ತಿರುವ ಹಲವು ಮಂದಿ ಕೇಂದ್ರ ಸಚಿವರ ಇದ್ದಾರೆ. ಮೊದಲು ಬಿಜೆಪಿ ಅವರ ರಾಜೀನಾಮಗೆ ಆಗ್ರಹಿಸಿ ಹೋರಾಟ ಮಾಡಬೇಕು. ಆದರೆ, ಬಿಜೆಪಿ ಅದು ಬಿಟ್ಟು ಜಾರ್ಜ್ ರಾಜೀನಾಮೆಗೆ ಹೋರಾಟಕ್ಕೆ ಮುಂದಾಗಿರುವುದು ಹಾಸ್ಯಾಸ್ಪದ ಎಂದು ಟೀಕಿಸಿದರು.
ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಸುಳ್ಳು ಹೇಳುವುದರಲ್ಲಿ ನಿಸ್ಸಿಮರು. ಹೀಗಾಗಿ ಅವರು ಎಲ್ಲೆ ಹೋದರೂ ಸುಳ್ಳು ಹೇಳುತ್ತಾರೆ. ಆದುದರಿಂದ ಅವರ ಯಾವುದೇ ಹೇಳಿಕೆಗಳಿಗೆ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.