ಬಿಬಿಎಂಪಿ ಮೈತ್ರಿ ಮುಂದುವರಿಯಬೇಕು: ಸಚಿವ ಜಾರ್ಜ್
ಬೆಂಗಳೂರು, ಸೆ. 11: ಜಾತ್ಯತೀತ ಶಕ್ತಿಗಳ ಒಗ್ಗಟ್ಟಿನ ದೃಷ್ಟಿಯಿಂದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮುಂದುವರಿಯಬೇಕು ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ಭರವಸೆ ವ್ಯಕ್ತಪಡಿಸಿದ್ದಾರೆ.
ಸೋಮವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಉಭಯ ಪಕ್ಷಗಳು ಒಟ್ಟುಗೂಡಿ ಒಳ್ಳೆಯ ಕೆಲಸ ಮಾಡಿದ್ದೇವೆ. ಹೀಗಾಗಿ ಮೈತ್ರಿ ಮುಂದುವರೆಸಿ ಮತ್ತೆ ಆಡಳಿತ ನಡೆಸುತ್ತೇವೆ. ಕಳೆದ ಬಾರಿ ಬಿಬಿಎಂಪಿ ಗದ್ದುಗೆ ಹಿಡಿಯುವಲ್ಲಿ ರಾಮಲಿಂಗಾರೆಡ್ಡಿ ಸೇರಿ ಹಲವು ನಾಯಕರು, ಪ್ರಮುಖ ಪಾತ್ರ ವಹಿಸಿದ್ದರು.
ಈ ಬಾರಿಯೂ ಪ್ರಮುಖ ಪಾತ್ರ ವಹಿಸಲಿದ್ದಾರೆ. ಜೆಡಿಎಸ್‌ಗೆ ಮೇಯರ್ ಸ್ಥಾನ ನೀಡುವ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್, ಜೆಡಿಎಸ್ ವರಿಷ್ಠ ದೇವೇಗೌಡ ಅವರೊಂದಿಗೆ ಸಮಾಲೋಚನೆ ಬಳಿಕ ನಿರ್ಧರಿಸಲಿದ್ದಾರೆ ಎಂದರು.
ಬಿಬಿಎಂಪಿ ಮೇಯರ್ ಪದ್ಮಾವತಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಒಳ್ಳೆಯ ಕೆಲಸ ಮಾಡಿದ್ದಾರೆ. ಮೈತ್ರಿ ಸಂದರ್ಭದಲ್ಲಿ ಜೆಡಿಎಸ್ ಅವರಿಗೆ ನೀಡಿದ ಎಲ್ಲ ಆಶ್ವಾಸನೆ ನಾವು ಪೂರೈಸಿದ್ದೇವೆ. ನಮ್ಮ ಮೈತ್ರಿಗೆ ಯಾವುದೇ ಕೊರತೆಯಿಲ್ಲ ಎಂದು ಅವರು ಸ್ಪಷ್ಟನೆ ನೀಡಿದರು.
ಮಳೆ ನಿಂತ ಬಳಿಕ ರಸ್ತೆ ದುರಸ್ತಿ: ಉದ್ಯಾನನಗರಿಯಲ್ಲಿ ಮಳೆ ಧಾರಾಕಾರ ಮಳೆಯಾಗಿದ್ದು, ಮಳೆ ನಿಂತ ಕೂಡಲೇ ಹದಗೆಟ್ಟಿರುವ ಎಲ್ಲ ರಸ್ತೆಗಳನ್ನು ದುರಸ್ತಿ ಮಾಡಲಾಗುವುದು ಎಂದ ಅವರು, ಬಹುಮಹಡಿ ಕಾರು ಪಾರ್ಕಿಂಗ್ ಕಾಮಗಾರಿಗೆ ಬಂಡೆಕಲ್ಲು ಅಡ್ಡ ಬಂದಿದ್ದರಿಂದ ವಿಳಂಬವಾಗಿದೆ. ನವೆಂಬರ್ ವೇಳೆಗೆ ಮೊದಲ ಹಂತ ಸಂಪೂರ್ಣವಾಗಲಿದೆ. ಈ ಕಾಮಗಾರಿ ಮುಗಿದರೆ 580 ನಾಲ್ಕು ಚಕ್ರಗಳು, 500ದ್ವಿಚಕ್ರ ವಾಹನಗಳ ಪಾರ್ಕಿಂಗ್ ಸಾಧ್ಯ ಎಂದರು.