ಚಿನ್ನಾಭರಣ ಕಳವು ಪ್ರಕರಣ: ನಾಲ್ವರ ಬಂಧನ
ಬೆಂಗಳೂರು, ಸೆ.11: ನಗರದ ಕೆಆರ್‌ಪುರಂನ ಬಾಲಾಜಿ ಚಿನ್ನಾಭರಣ ಅಂಗಡಿಗೆ ಒಳಚರಂಡಿ ಮೂಲಕ ಸುರಂಗ ಕೊರೆದು 20 ಕೆ.ಜಿ ಬೆಳ್ಳಿ ಸೇರಿ ಚಿನ್ನಾಭರಣ ಕಳವು ಮಾಡಿದ್ದ ಪ್ರಕರಣ ಸಂಬಂಧ ನಾಲ್ವರನ್ನು ನೆಲಮಂಗಲ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಕೆಆರ್ ಪುರಂನ ಜಗನ್ನಾಥ ಲೇಔಟ್‌ನ ಸುಶಾಂತ್(23), ಏಕ್ತಾ ನಗರದ ಜಗದೀಶ್ ಕುಮಾರ್(23), ಜಿಗಣಿಯ ಕೋಳಿಫಾರಂ ಲೇಔಟ್‌ನ ಸಿದ್ದರಾಜು(26), ಹುಲ್ಲಹಳ್ಳಿಯ ಸುನೀಲ್ ಕುಮಾರ್(23) ಬಂಧಿತ ಆರೋಪಿಗಳೆಂದು ಪೊಲೀಸರು ಗುರುತಿಸಿದ್ದಾರೆ.
ಬಂಧಿತರಿಂದ 29 ಲಕ್ಷ ರೂ. ಮೌಲ್ಯದ ಚಿನ್ನಾಭರಣ, 10 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡು ಕೆಆರ್ ಪುರಂನಲ್ಲಿ ಒಂದು, ನೆಲಮಂಗಲ ವ್ಯಾಪ್ತಿ ನಾಲ್ಕು ಸೇರಿ ಬನ್ನೇರುಘಟ್ಟ, ಆನೇಕಲ್, ಅತ್ತಿಬೆಲೆ ತಲಾ ಒದೊಂದು ಪ್ರಕರಣಗಳನ್ನು ಪತ್ತೆಹಚ್ಚಲಾಗಿದೆ ಎಂದು ಗ್ರಾಮಾಂತರ ಎಸ್ಪಿ ಅಮಿತ್ ಸಿಂಗ್ ಹೇಳಿದ್ದಾರೆ.
ಕಳೆದ ಮೇ ತಿಂಗಳಲ್ಲಿ ಆರೋಪಿಗಳು ಗುಂಪು ಕಟ್ಟಿಕೊಂಡು ಕೆಆರ್ ಪುರಂನ ಬಾಲಾಜಿ ಚಿನ್ನಾಭರಣ ಅಂಗಡಿಗೆ ಹೊಂಚು ಹಾಕಿ ಒಳಚರಂಡಿ ಮೂಲಕ ಸುರಂಗ ಕೊರೆದು ಕಳ್ಳತನ ಮಾಡಿ ಪರಾರಿಯಾಗಿದ್ದರು. ಈ ಪ್ರಕರಣ ನಗರ ಪೊಲೀಸರಿಗೆ ಸವಾಲಾಗಿ ಪರಿಣಮಿಸಿತ್ತು.
ಕಳವು ಮಾಡಿದ ಆಭರಣಗಳನ್ನು ಗಿರವಿ ಇಟ್ಟು, ಐಷಾರಾಮಿ ಜೀವನ ನಡೆಸುತ್ತಿದ್ದ ಆರೋಪಿಗಳು, ಬೈಕ್ ಕಳ್ಳತನ ಸಹ ನಡೆಸುತ್ತಿದ್ದ ಬಗ್ಗೆ ಮಾಹಿತ ಬಂದಿದೆ. ನೆಲಮಂಗಲದಲ್ಲಿ ಕಳವು ಮಾಡಿದ್ದ ಬೈಕ್‌ವೊಂದರ ಸುಳಿವು ಆಧರಿಸಿ ಆರೋಪಿಗಳನ್ನು ಬಂಧಿಸಿ ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.