×
Ad

ವಿಕಲಚೇತನರೆಂದುಕೊಂಡು ಬದುಕಿನಲ್ಲಿ ನಿರಾಸಕ್ತಿ ಬೇಡ: ಸಿಎಂ ಸಿದ್ದರಾಮಯ್ಯ

Update: 2017-09-11 19:31 IST

ಬೆಂಗಳೂರು, ಸೆ.11: ವಿಕಲಚೇತನರೆಂದುಕೊಂಡು ಬದುಕಿನಲ್ಲಿ ನಿರಾಸಕ್ತಿ ಬೆಳೆಸಿಕೊಳ್ಳದೆ ಸಮುದಾಯದ ಎಲ್ಲ ಚಟುವಟಿಕೆಗಳಲ್ಲೂ ಪಾಲ್ಗೊಳ್ಳಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದಿಲ್ಲಿ ಕರೆ ನೀಡಿದ್ದಾರೆ.

ಸೋಮವಾರ ವಿಧಾನಸೌಧದ ಪೂರ್ವದ್ವಾರದಲ್ಲಿ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಏರ್ಪಡಿಸಿದ್ದ ವಿಕಲಚೇತನರಿಗೆ ಯಂತ್ರಚಾಲಿತ ದ್ವಿಚಕ್ರ ವಾಹನಗಳನ್ನು ವಿತರಿಸುವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ವಿಕಲಚೇತನರು ಸಮುದಾಯದ ಅವಿಭಾಜ್ಯ ಅಂಗ, ಅವರ ಶ್ರೇಯೋಭಿವೃದ್ಧಿಗಾಗಿ ರಾಜ್ಯ ಸರಕಾರ ಹಲವು ಯೋಜನೆಗಳನ್ನು ರೂಪಿಸಿ, ಅನುಷ್ಠಾನಗೊಳಿಸಿದ್ದು, 2013- 14ರಲ್ಲಿ ಇಲಾಖೆಗೆ 647ಕೋಟಿ ರೂ. ಬಿಡುಗಡೆ ಮಾಡಿದ್ದು, ಪ್ರಸ್ತುತ ಸಾಲಿನಲ್ಲಿ ಅವರ ಶ್ರೇಯೋಭಿವೃದ್ಧಿ ಗಾಗಿ 1,074 ಕೋಟಿ ರೂ.ಅನುದಾನ ಒಗದಿಸಲಾಗಿದೆ ಎಂದು ವಿವರ ನೀಡಿದರು.

ಅರ್ಹ ವಿಕಲಚೇತನರಿಗೆ ಈ ವರ್ಷದ ಡಿಸೆಂಬರ್ ಅಂತ್ಯದ ಒಳಗಾಗಿ ನಾಲ್ಕು ಸಾವಿರ ದ್ವಿಚಕ್ರ ವಾಹನಗಳನ್ನು ವಿತರಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ರಾಜ್ಯದಲ್ಲಿ 2011ರ ಜನಗಣತಿ ಪ್ರಕಾರ 13,24,204 ಮಂದಿ ವಿಕಲಚೇತನರು ಇರುವುದು ಕಂಡು ಬಂದಿದ್ದು, ಅವರ ಶ್ರೇಯೋಭಿವೃದ್ಧಿಗಾಗಿ ಇನ್ನೂ ಹಲವು ಕಾರ್ಯಕ್ರಮಗಳನ್ನು ಜಾರಿಗೆ ತರಲಾಗುವುದು ಎಂದು ಹೇಳಿದರು.

ವಿಕಲಚೇತನರು ಸ್ವಾಭಿಮಾನದಿಂದ ಜೀವನ ನಡೆಸಬೇಕೆಂದು ಹೇಳಿದ ಅವರು, ರಾಜ್ಯದಲ್ಲಿ ವಿಕಲಚೇತನರು ಎಷ್ಟು ಮಂದಿ ಇದ್ದಾರೆಂಬ ಬಗ್ಗೆ ಮತ್ತೊಮ್ಮೆ ಸಮೀಕ್ಷೆ ನಡೆಸಬೇಕು ಎಂದು ಸಿದ್ದರಾಮಯ್ಯ ಇದೇ ವೇಳೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸಚಿವೆ ಉಮಾಶ್ರೀ ಮಾತನಾಡಿ, ವಿಕಲಚೇತನರು ಹಾಗೂ ಹಿರಿಯ ನಾಗರಿಕರಿಗೆ ಸೌಲಭ್ಯ ನೀಡುವಲ್ಲಿ ನಮ್ಮ ಸರಕಾರ ಮುಂಚೂಣಿಯಲ್ಲಿದ್ದು, ಇತರ ರಾಜ್ಯಗಳಿಗೆ ಮಾದರಿಯಾಗಿದೆ. ಈ ಕಾರ್ಯಕ್ಕಾಗಿ ನಮ್ಮ ಸರಕಾರಕ್ಕೆ ರಾಷ್ಟ್ರ ಪ್ರಶಸ್ತಿ ಸಹ ದೊರಕಿದೆ. ಬೇರೆ ಬೇರೆ ದೇಶಗಳು ನಮ್ಮ ರಾಜ್ಯ ನೋಡುವಂತೆ ವಿಕಲಚೇತನರು ಹಾಗೂ ರಿಯ ನಾಗರಿಕರಿಗೆ ಸರಕಾರದ ಸೌಲಭ್ಯ ಒದಗಿಸುವಲ್ಲಿ ಅಧಿಕಾರಿಗಳು ಆದ್ಯತೆ ಮೇಲೆ ಕೆಲಸ ಮಾಡಬೇಕು.

ನಮ್ಮ ಸರಕಾರ ಆಡಳಿತಕ್ಕೆ ಬಂದ ಮೇಲೆ ವಿಕಲಚೇತನರು ಹಾಗೂ ಹಿರಿಯ ನಾಗರಿಕರಿಗೆ ವಿದ್ಯಾರ್ಥಿ ವೇತನ, ವಿವಾಹ ಪ್ರೋತ್ಸಾಹ, ಅಂಧ ವಿದ್ಯಾರ್ಥಿಗಳಿಗೆ ಟಾಕಿಂಗ್ ಲ್ಯಾಪ್‌ಟಾಪ್, ವೈದ್ಯಕೀಯ ಪರಿಹಾರದಂತ ಹಲವು ಸೌಲಭ್ಯಗಳನ್ನು ನೀಡಲಾಗುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ಇಲಾಖೆ ಪ್ರಧಾನ ಕಾರ್ಯದರ್ಶಿ ಉಮಾ ಮಹದೇವನ್, ಬೆಂ.ನಗರ ಜಿಲ್ಲಾ ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿ ಅರ್ಚನಾ, ನಿರ್ದೇಶಕ ಡಾ.ಸಿದ್ದರಾಜು ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News