ಗೌರಿ ಲಂಕೇಶ್ ಹತ್ಯೆ ಪ್ರಕರಣ: ಸಿಟ್‌ಗೆ 40 ಪೊಲೀಸ್ ಅಧಿಕಾರಿಗಳ ಸೇರ್ಪಡೆ
ಬೆಂಗಳೂರು, ಸೆ.11: ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣ ಸಂಬಂಧ ತನಿಖೆ ಮತ್ತಷ್ಟು ಚುರುಕುಗೊಳಿಸಲು ವಿಶೇಷ ತನಿಖಾ ತಂಡಕ್ಕೆ(ಸಿಟ್‌ಗೆ) ಮತ್ತೆ 40 ಪೊಲೀಸ್ ಅಧಿಕಾರಿಗಳ ನೇಮಕವಾಗಿದೆ ಎಂದು ಮೂಲಗಳು ತಿಳಿಸಿವೆ.
ವಿಶೇಷ ತನಿಖಾ ತಂಡ 3 ಡಿವೈಎಸ್ಪಿ ಮತ್ತು 7 ಇನ್ಸ್ ಸ್ಪೆಕ್ಟರ್ ಸೇರಿದಂತೆ ಒಟ್ಟು 40 ಜನ ಅಧಿಕಾರಿಗಳನ್ನು ಮತ್ತೆ ವಿಶೇಷ ತನಿಖಾ ತಂಡಕ್ಕೆ ಸೇರ್ಪಡೆ ಮಾಡಿಕೊಳ್ಳಲಾಗಿದೆ. ಈಗಾಗಲೇ ಸಿಟ್ ತನಿಖೆ ಚುರುಕುಗೊಂಡಿದ್ದು, ಹೊರ ರಾಜ್ಯಗಳಿಗೂ ತೆರಳಿ ಹಂತಕರಿಗಾಗಿ ಶೋಧ ಕಾರ್ಯ ಮುಂದುವರಿದೆ ಎಂದು ತಿಳಿದು ಬಂದಿದೆ.
ಮನೆಗೆ ಭೇಟಿ: ಸೋಮವಾರ ಕೂಡ ಘಟನೆ ನಡೆದ ಗೌರಿ ಲಂಕೇಶ್ ಅವರ ರಾಜರಾಜೇಶ್ವರಿ ನಗರದಲ್ಲಿರುವ ಸ್ವಗೃಹಕ್ಕೆ ತೆರಳಿದ ಸಿಟ್ ತನಿಖಾ ತಂಡ, ಪರಿಶೀಲನೆ ನಡೆಸಿದರು. ಮನೆಯ ಸುತ್ತ ಮುತ್ತಲಿರುವ ಜನರ ಬಳಿ ಹಲವು ಮಾಹಿತಿಗಳನ್ನು ಪಡೆದರು ಎಂದು ತಿಳಿದು ಬಂದಿದೆ.
ವಾಹನ ಪರಿಶೀಲನೆ: ಸಿಟ್ ಅಧಿಕಾರಿಗಳು ಹಲವು ವಾಹನ ಮಾಲಕರಿಗೆ ಕರೆ ಮಾಡಿ ಯಾರ ವಾಹನವಿದು, ಯಾಕೆ ಇಲ್ಲಿ ನಿಂತಿದೆ ಎಂಬ ಹಲವು ರೀತಿಯ ಪ್ರಶ್ನೆಗಳನ್ನು ಕೇಳಿದರು. ಅದೇ ರೀತಿ, ಬೆಂಗಳೂರು ಹೊರಭಾಗದಲ್ಲಿರುವ ಟೋಲ್‌ಗಳ ಸಿಸಿಟಿವಿ ಡಿವೈಸರ್‌ಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಟವರ್‌ನಿಂದ ಸಿಕ್ಕಿತ್ತೆ ಸುಳಿವು?: ಗೌರಿ ಲಂಕೇಶ್ ಹತ್ಯೆ ಪ್ರಕರಣ ಸಂಬಂಧ ತನಿಖೆ ಆರಂಭಿಸಿರುವ ಪೊಲೀಸರಿಗೆ ಮಹತ್ವದ ಸುಳಿವು ಸಿಕ್ಕಿದೆ ಎನ್ನಲಾಗುತ್ತಿದೆ. ತಾಂತ್ರಿಕವಾಗಿ ತನಿಖೆ ನಡೆಸುತ್ತಿರುವ ತಂಡಕ್ಕೆ ನಗರದ ಬಸವನಗುಡಿ ಗಾಂಧಿ ಬಜಾರ್‌ನ ಲಂಕೇಶ್ ಕಚೇರಿಯಿಂದ ಕಾರನ್ನು ಹಿಂಬಾಲಿಸಿರುವಾಗ ಒಂದು ಮೊಬೈಲ್ ಸಂಖ್ಯೆ ಗಾಂಧಿ ಬಜಾರ್‌ನಲ್ಲಿ ಸಿಕ್ಕಿದ್ದು, ಮತ್ತೆ ಅದೇ ಸಂಖ್ಯೆ ರಾಜರಾಜೇಶ್ವರಿ ನಗರದ ಅವರ ಮನೆಯ ಬಳಿ ಸಿಕ್ಕಿರುವುದು ಮನೆಯ ಬಳಿ ಮೊಬೈಲ್ ಎರಡು ಬಾರಿ ಬಂದ್ ಆಗಿರುವುದು ತಿಳಿದು ಬಂದಿದೆ.
ಹತ್ಯೆಯಾದ ನಂತರ ಆ ಮೊಬೈಲ್ ಸಂಖ್ಯೆ ಮೈಸೂರು ರಸ್ತೆಯ ಮೂಲಕ ಹಾದು ಹೋಗಿರುವುದಾಗಿ ಕೂಡ ಟವರ್‌ನಲ್ಲಿ ತೋರಿಸುತ್ತಿದೆ ಎನ್ನಲಾಗಿದೆ.
ಈ ಸುಳಿವು ಹಿಡಿದಿರುವ ಒಂದು ತಂಡ ಈಗಾಗಲೇ ಮೊಬೈಲ್ ಸಂಖ್ಯೆಯ ಬೆನ್ನತ್ತಿ ತನಿಖೆ ನಡೆಸುತ್ತಿದೆ ಎನ್ನಲಾಗಿದೆ.