×
Ad

ಒತ್ತಡ ನಿವಾರಣೆಗೆ ಕ್ರೀಡೆ ಸಹಕಾರಿ: ಸಂಕೇತ್ ಪೂವಯ್ಯ

Update: 2017-09-11 20:06 IST

ಮಡಿಕೇರಿ, ಸೆ.11: ಮಾನಸಿಕ ಹಾಗೂ ದೈಹಿಕವಾಗಿ ಒತ್ತಡದಲ್ಲಿರುವ ಪತ್ರಕರ್ತರಿಗೆ ಕ್ರೀಡಾಕೂಟ ಮನರಂಜನೆ ನೀಡಬಲ್ಲದೆಂದು ಜೆಡಿಎಸ್ ಜಿಲ್ಲಾಧ್ಯಕ್ಷ ಮೇರಿಯಂಡ ಸಂಕೇತ್ ಪೂವಯ್ಯ ಹೇಳಿದರು.

ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘವು ಕೊಡಗು ಪ್ರೆಸ್‍ಕ್ಲಬ್ ಸಹಯೋಗದಲ್ಲಿ ಆರ್ಜಿ ಗ್ರಾಮದಲ್ಲಿರುವ ಬಲ್ಲಚಂಡ ರಂಜನ್ ಬಿದ್ದಪ್ಪ ಅವರ ಗದ್ದೆಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಪತ್ರಕರ್ತರ ಜಿಲ್ಲಾಮಟ್ಟದ ಕೆಸರುಗದ್ದೆ ಕ್ರೀಡಾಕೂಟ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಅವರು, ಪತ್ರಕರ್ತರ ಮೇಲೆ ಹಲ್ಲೆ ಮಾಡುವುದು ಸಾಮಾನ್ಯವಾಗಿದೆ. ದೇಶದ ವಿವಿಧೆಡೆಯಲ್ಲಿ ಪತ್ರಕರ್ತರ ಹತ್ಯೆಯಾಗಿದೆ. ಪ್ರಜಾಪ್ರಭುತ್ವದಲ್ಲಿ ಪತ್ರಕರ್ತರಿಂದು ನಿಜವಾದ ಅಭಿವ್ಯಕ್ತಿ ಸ್ವಾತಂತ್ರ್ಯ ಎತ್ತಿ ಹಿಡಿಯುತ್ತಿದ್ದಾರೆ. ಸಾಮಾನ್ಯರಿಗೆ ನ್ಯಾಯಾಂಗ, ಪತ್ರಿಕಾರಂಗದ ಮೇಲೆ ಮಾತ್ರ ವಿಶ್ವಾಸ, ನಂಬಿಕೆ ಇದೆ ಎಂದು ತಿಳಿಸಿದರು. 

ಗೌರಿ ಲಂಕೇಶ್ ಹತ್ಯೆಯ ನಂತರ 2 ದಿನದಲ್ಲಿ ಬಿಹಾರದಲ್ಲಿ ಪತ್ರಕರ್ತನ ಕೊಲೆಯಾಗಿದೆ. ಇದರಿಂದ ನಾಗರಿಕ ಸಮಾಜ ತಲೆ ತಗ್ಗಿಸುವಂತಾಗಿದೆ. 1990 ರಿಂದ 2017 ರವರೆಗೆ 142 ಪತ್ರಕರ್ತರ ಕೊಲೆ ಯಾಗಿದೆ. ಅನೇಕ ಪತ್ರಕರ್ತರಿಗೆ ಕೊಲೆ ಬೆದರಿಕೆ, ಮಾನನಷ್ಟ ಮೊಕದ್ದಮೆ ಹೂಡುತ್ತಿದ್ದಾರೆಂದರು.

ಡೇರಾ ಸತ್ಯ ಸೌಧದ ಪ್ರಕರಣ ಬೆಳಕಿಗೆ ತಂದ ಪತ್ರಕರ್ತರನ್ನು ಕೊಲೆ ಮಾಡಲಾಗಿದೆ. ಮಧ್ಯ ಪ್ರದೇಶದಲ್ಲಿ ವ್ಯಾಪಂ ಪ್ರಕರಣ ಬಹಿರಂಗಗೊಳಿಸಿದ ಪತ್ರಕರ್ತರನ್ನು ಕೊಲೆ ಮಾಡಲಾ ಗಿದೆ. ಹಸ್ತಕ್ಷೇಪವಿಲ್ಲದೆ ಮಾಧ್ಯಮಕ್ಕೆ ಮುಕ್ತವಾಗಿ ಕೆಲಸ ಮಾಡಲು ಬಿಡುತ್ತಿದೆ ಎಂಬ ಸಮೀಕ್ಷೆಯಲ್ಲಿ ಭಾರತ 136ನೆ ಸ್ಥಾನ ಪಡೆದಿದೆ. ಕಾರ್ಯಾಂಗ, ಶಾಸಕಾಂಗದ ಮೇಲೆ ಜನರಿಗೆ ಭ್ರಮನಿರಸನ ಉಂಟಾಗಿದೆ. ನ್ಯಾಯ ದೇಗುಲಗಳು ಹಾಗೂ ಮಾಧ್ಯಮಗಳು ಸಾಮಾನ್ಯ ಮನುಷ್ಯನ ಕೂಗನ್ನು ಸರ್ಕಾರಕ್ಕೆ ತಲುಪಿಸುವ ಕೆಲಸ ಮಾಡಬೇಕು. ಪತ್ರಕರ್ತರು ನಿರ್ಭೀತಿಯಿಂದ ಕಾರ್ಯನಿರ್ವಹಿಸಲು ಸರ್ಕಾರ ಸೂಕ್ತ ರಕ್ಷಣೆ ಹಾಗೂ ಭದ್ರತೆ ಒದಗಿಸಬೇಕು ಎಂದು ಮನವಿ ಮಾಡಿದರು.

ಜಿಲ್ಲಾ ಪತ್ರಕರ್ತರ ಸಂಘ ಹಾಗೂ ಕೊಡಗು ಪ್ರೆಸ್‍ಕ್ಲಬ್ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ ಮಾತನಾಡಿ, ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವುದರಿಂದ ಒತ್ತಡದಿಂದ ಮುಕ್ತರಾಗಿ ಸ್ಫೂರ್ತಿಯಿಂದ ವೃತ್ತಿಯಲ್ಲಿ ಮುಂದುವರಿಯಬಹುದು ಎಂದು ವಿವರಿಸಿದರು.

ರಾಷ್ಟ್ರೀಯ ಪತ್ರಕರ್ತರ ಒಕ್ಕೂಟ ಸದಸ್ಯ ಬಿ.ಎಸ್. ಲೋಕೇಶ್ ಸಾಗರ್ ಮಾತನಾಡಿ, ಪತ್ರಕರ್ತರು ನಿರಂತರ ಪ್ರತಿಪಕ್ಷದ ಸ್ಥಾನದಲ್ಲಿ ಕಾರ್ಯನಿರ್ವಹಿಸಬೇಕು. ಆಡಳಿತ ವೈಫಲ್ಯಗಳನ್ನು ಕಂಡು ಹಿಡಿಯಲು ಪತ್ರಕರ್ತರಿಂದ ಮಾತ್ರ ಸಾಧ್ಯ ಎಂದರು.

ಕ್ರೀಡಾಕೂಟ ಸಂಚಾಲಕ ಪಳೆಯಂಡ ಪಾರ್ಥ ಚಿಣ್ಣಪ್ಪ ಅಧ್ಯಕ್ಷತೆ ವಹಿಸಿದ್ದರು. ಮುಖ್ಯಅತಿಥಿಗಳಾಗಿ ಉದ್ಯಮಿ ಬಿ.ಬಿ. ಚುಪ್ಪ ನಾಗರಾಜ್, ನಿವೃತ್ತ ಶಿಕ್ಷಕಿ ಬಲ್ಲಚಂಡ ಕಮಲ, ಕಾಫಿ ಬೆಳೆಗಾರ ಬಲ್ಲಚಂಡ ರಂಜನ್ ಬಿದ್ದಪ್ಪ, ವಿರಾಜಪೇಟೆ ತಾಲೂಕು ಪತ್ರಕರ್ತರ ಸಂಘ ಅಧ್ಯಕ್ಷ ಕುಪ್ಪಂಡ ದತ್ತಾತ್ರಿ, ಸೋಮವಾರ ಪೇಟೆ ತಾಲೂಕು ಪತ್ರಕರ್ತರ ಸಂಘ ಅಧ್ಯಕ್ಷ ತೇಲಪಂಡ ಕವನ್ ಕಾರ್ಯಪ್ಪ, ರಾಜ್ಯ ಪತ್ರಕರ್ತರ ಸಂಘ ನಿರ್ದೇಶಕರಾದ ಎಸ್.ಐ. ಮುರಳೀಧರ್, ಅನು ಕಾರ್ಯಪ್ಪ ಮತ್ತಿತರರಿದ್ದರು.

ಎಸ್.ಐ. ಮುರಳೀಧರ್ ಪ್ರಾರ್ಥಿಸಿದರು. ಅಮ್ಮಣಿಚಂಡ ಪ್ರವೀಣ್ ಚಂಗಪ್ಪ ಸ್ವಾಗತಿಸಿದರು. ಕುಡೆಕಲ್ ಸಂತೋಷ್, ಕೆ.ಬಿ.ಮಂಜುನಾಥ್ ನಿರೂಪಿಸಿದರು. ಡಿ.ಪಿ. ರಾಜೇಶ್ ವಂದಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News