ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ವಿರೋಧಿಸಿ ಸೆ.12ರಂದು ಬೃಹತ್ ‘ಪ್ರತಿರೋಧ ರ‍್ಯಾಲಿ-ಸಮಾವೇಶ’
ಬೆಂಗಳೂರು, ಸೆ. 11: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯನ್ನು ಖಂಡಿಸಿ, ದೇಶದ ಭವಿಷ್ಯದ ಬೆಳಕನ್ನೆ ಕಸಿಯುವ ಅಸಹಿಷ್ಣುತೆ ವಿರುದ್ಧ ನಾಳೆ(ಸೆ.12) ಗೌರಿ ಲಂಕೇಶ್ ಹತ್ಯೆ ವಿರೋಧಿ ವೇದಿಕೆ ಹಮ್ಮಿಕೊಂಡಿರುವ ‘ಪ್ರತಿರೋಧ ರ‍್ಯಾಲಿ-ಸಮಾವೇಶ’ದಲ್ಲಿ ಪತ್ರಕರ್ತರು, ಸಾಮಾಜಿಕ ಹೋರಾಟಗಾರರು, ಚಿಂತಕರು, ಸಾಹಿತಿ, ಕಲಾವಿದರು, ವಿವಿಧ ಸಂಘಟನೆಗಳ ಕಾರ್ಯಕರ್ತರು ಸೇರಿದಂತೆ 50 ಸಾವಿರಕ್ಕೂ ಅಧಿಕ ಮಂದಿ ಪಾಲ್ಗೊಳ್ಳುವ ನಿರೀಕ್ಷೆ ಇದೆ.
ನಾಳೆ ಬೆಳಗ್ಗೆ 10ಗಂಟೆಗೆ ನಗರದ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಿಂದ ರ‍್ಯಾಲಿ ಆರಂಭವಾಗಲಿದ್ದು, ಸಂಗೊಳ್ಳಿ ರಾಯಣ್ಣ ವೃತ್ತ, ಶೇಷಾದ್ರಿ ರಸ್ತೆ, ಸ್ವಾತಂತ್ರ ಉದ್ಯಾನವನ, ಕಾಳಿದಾಸ ರಸ್ತೆ ಮಾರ್ಗವಾಗಿ ಇಲ್ಲಿನ ಸೆಂಟ್ರಲ್ ಕಾಲೇಜು ಆಟದ ಮೈದಾನದಲ್ಲಿ ಸಮಾವೇಶಗೊಳ್ಳಲಿದೆ.
ಖ್ಯಾತನಾಮರ ಸಾಮಾಗಮ: ಹಿರಿಯ ಪತ್ರಕರ್ತ ಪಿ.ಸಾಯಿನಾಥ್, ಸಿಪಿಎಂ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ, ಖ್ಯಾತ ನಿರ್ಮಾಪಕ ಆನಂದ್ ಪಟವರ್ಧನ್, ಸಾಮಾಜಿಕ ಹೋರಾಟಗಾರ್ತಿ ತೀಸ್ತಾ ಸೆಟಲ್‌ವಾಡ್, ನರ್ಮದಾ ಬಚಾವೋ ಆಂದೋಲನದ ನಾಯಕ ಮೇಧಾ ಪಾಟ್ಕರ್, ಸ್ವರಾಜ್ ಇಂಡಿಯಾದ ಪ್ರಶಾಂತಿ ಭೂಷಣ್, ದಲಿತ ಹೋರಾಟಗಾರ ಜಿಗ್ನೇಶ್ ಮೇವಾನಿ, ನಟ ಪ್ರಕಾಶ್ ರೈ ಸೇರಿದಂತೆ ಹಲವು ಗಣ್ಯರು ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ.
ಜತೆಗೆ ಹಿರಿಯ ಸ್ವಾತಂತ್ರ ಹೋರಾಟಗಾರ ದೊರೆಸ್ವಾಮಿ, ಗಿರೀಶ್ ಕಾಸರವಳ್ಳಿ, ಗೋವಿಂದರಾವ್, ಸಿಎಂ ಮಾಧ್ಯಮ ಸಲಹೆಗಾರ ದಿನೇಶ್ ಅಮೀನ್ ಮಟ್ಟು, ನಾಗತಿಹಳ್ಳಿ ಚಂದ್ರಶೇಖರ್, ಚೇತನ್, ಡಾ.ಸಿದ್ದನಗೌಡ ಪಾಟೀಲ್, ಮಾರುತಿ ಮಾನ್ಪಡೆ, ವಸುಂಧರಾ ಭೂಪತಿ, ಡಾ.ಕೆ.ಮರುಳಸಿದ್ದಪ್ಪ, ಶ್ರೀರಾಮರೆಡ್ಡಿ, ಕೆ.ಎಸ್. ವಿಮಲಾ, ಕೆ.ಎಲ್.ಅಶೋಕ್, ಶಿವಸುಂದರ್, ಡಾ.ವಾಸು, ನೂರ್ ಶ್ರೀಧರ್ ಸೇರಿದಂತೆ ಇನ್ನಿತರ ಗಣ್ಯರು ಭಾಗವಹಿಸಲಿದ್ದಾರೆ.
ಹೋರಾಟದ ಹಾಡುಗಳು, ಸಮೂಹ ಗಾಯನ, ತಮಟೆ, ನಗಾರಿ ವಾದನ, ರಂಗಗೀತೆಗಳ ಗಾಯನ, ಚಿತ್ರಕಲೆ, ಸಿನಿಮಾ ಪ್ರದರ್ಶನ ಸೇರಿದಂತೆ ಪ್ರತಿರೋಧ ದಾಖಲಿಸುವ ಪ್ರದರ್ಶನಗಳು ಇರಲಿವೆ. ಅಲ್ಲದೆ, ಹತ್ಯೆ ಸಂಸ್ಕೃತಿ ವಿರೋಧಿ ಬೀದಿ ನಾಟಕಗಳ ಪ್ರಸ್ತುತಪಡಿಸಲಿದ್ದಾರೆ ಎಂದು ತಿಳಿಸಲಾಗಿದೆ.
ಕನ್ನಡ ನಾಟಿನಲ್ಲಿ ಶಾಂತಿ, ಸೌಹಾರ್ದತೆ ಮತ್ತು ಕೋಮು ಸಾಮರಸ್ಯ ಇರಬೇಕು, ಬರೆಯುವ ಕೈಯನ್ನು, ಹಾಡುವ ಕೊರಳನ್ನು, ನುಡಿಯುವ ನಾಲಿಗೆಯನ್ನು ಕೊಲ್ಲ ಬಯಸುವ ಜೀವವಿರೋಧಿ ಶಕ್ತಿಗಳನ್ನು ಕೇಂದ್ರ ಹಾಗೂ ರಾಜ್ಯ ಸರಕಾರಗಳು ನಿಯಂತ್ರಿಸಲು ತುರ್ತು ಕ್ರಮ ಕೈಗೊಳ್ಳಬೇಕು.