ನ.25 ರಿಂದ ಗಾಂಧೀವಾದಿ ರಚನಾತ್ಮಕ ಸಮ್ಮೇಳನ
ಬೆಂಗಳೂರು, ಸೆ. 12: ಹರಿಜನ ಸೇವಾ ಸಂಘದ ವತಿಯಿಂದ ನ.25 ಮತ್ತು 26 ರಂದು ಅಖಿಲ ಭಾರತೀಯ ಗಾಂಧೀವಾದಿ ರಚನಾತ್ಮಕ ಕಾರ್ಯಗ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ರಾಷ್ಟ್ರೀಯ ಅಧ್ಯಕ್ಷ ಶಂಕರ್ ಕುಮಾರ ಸನ್ಯಾ, ನ.25 ರಂದು ನವದೆಹಲಿಯ ಹರಿಜನ ಸೇವಾ ಸಂಘ ಕಚೇರಿ ಆವರಣದಲ್ಲಿ ಸಮ್ಮೇಳನ ನಡೆಯಲಿದ್ದು, ಸಮ್ಮೇಳನದಲ್ಲಿ ಹಲವಾರು ಗಾಂಧೀವಾದಿಗಳು ಭಾಗವಹಿಸಿ ಗ್ರಾಮ ಸ್ವರಾಜ್ಯ, ಸಾಮಾಜಿಕ ಸಂಘಟನೆ, ಸರ್ವಧರ್ಮ ಸಮನ್ವಯ, ಸಹಿಷ್ಣುತೆ, ಯುವ ಜಾಗೃತಿ, ಮಹಿಳಾ ಸುರಕ್ಷತೆ, ಸ್ವಚ್ಛತೆ, ಪರಿಸರ ರಕ್ಷಣೆ ಕುರಿತು ಚರ್ಚೆಗಳನ್ನು ನಡೆಸಲಿದ್ದಾರೆ ಎಂದು ತಿಳಿಸಿದರು.
1932 ರಲ್ಲಿ ಮಹಾತ್ಮ ಗಾಂಧೀಜಿಯವರು ಸ್ಥಾಪಿಸಿದ ಈ ಹರಿಜನ ಸೇವಾ ಸಂಘದಿಂದ ಅನೇಕ ಸಾಮಾಜಿಕ ಮತ್ತು ಜನಪರವಾದ ಕೆಲಸಗಳನ್ನು ಮಾಡಲಾಗುತ್ತಿದೆ. ಯುವ ಜನರು ಗಾಂಧೀಜಿಯ ಆದರ್ಶಗಳನ್ನು ಅಳವಡಿಸಿಕೊಳ್ಳುವಂತೆ ಮಾಡುವುದು ನಮ್ಮ ಸಂಘದ ಮೂಲ ಉದ್ದೇಶವಾಗಿದೆ. ಸಂಘದ ಹಿತ ದೃಷ್ಟಿಯಿಂದ ಈ ಹಿಂದೆ ಇದ್ದ ಸಂಘದ ಅಧ್ಯಕ್ಷರು ಮತ್ತು ಪದಾಧಿಕಾರಿಗಳನ್ನು ಬದಲಾವಣೆ ಮಾಡಲಾಗಿದೆ ಎಂದರು.
ಈ ಸಂದರ್ಭದಲ್ಲಿ ಸಂಘದ ರಾಜ್ಯ ಅಧ್ಯಕ್ಷೆ ಪ್ರೇಮಾ ಕಾರಿಯಪ್ಪ, ಉಪಾಧ್ಯಕ್ಷ ರವೀಂದ್ರ, ಸದಸ್ಯರಾದ ಹನುಮಂತಯ್ಯ, ಡಾ.ಜಿ. ಗೋವಿಂದಯ್ಯ, ಎಚ್.ಮೋಹನ್ ಉಪಸ್ಥಿತರಿದ್ದರು.