ವೇತನ ಹೆಚ್ಚಳಕ್ಕೆ ಸರಕಾರಿ ನೌಕರರ ಆಗ್ರಹ

Update: 2017-09-12 12:47 GMT

ಬೆಂಗಳೂರು, ಸೆ. 12: ರಾಜ್ಯ ಸರಕಾರ ಆರನೆ ವೇತನ ಆಯೋಗದ ಅವಧಿಯನ್ನು ಮುಂದಿನ 2018 ರ ಜ.31 ರವರೆಗೆ ವಿಸ್ತರಿಸಿರುವ ಹಿನ್ನೆಲೆಯಲ್ಲಿ ರಾಜ್ಯ ಸರಕಾರಿ ನೌಕರರ ಸಂಘ ಕೂಡಲೇ ಶೇ.30 ರಷ್ಟು ಮಧ್ಯಂತರ ಪರಿಹಾರವಾಗಿ ವೇತನ ಹೆಚ್ಚಳ ಮಾಡಬೇಕೆಂದು ಆಗ್ರಹಿಸಿದೆ.

ವೇತನ ಆಯೋಗದ ವರದಿಯನ್ನು ನವೆಂಬರ್‌ಗೆ ನೀಡಿ ಕೂಡಲೇ ಹೆಚ್ಚಳ ಮಾಡಬೇಕು ಎಂದು ಮನವಿ ಮಾಡಲಾಗಿದೆ. ಆರಂಭದಲ್ಲಿ ಸರಕಾರ ನಾಲ್ಕು ತಿಂಗಳಲ್ಲಿ ವೇತನ ಆಯೋಗ ವರದಿ ನೀಡಬೇಕು ಎಂದು ಸೂಚನೆ ನೀಡಲಾಗಿತ್ತು. ಆದರೆ, ಈಗ ಹೆಚ್ಚುವರಿ ನಾಲ್ಕು ತಿಂಗಳ ಸಮಯಾವಕಾಶ ವಿಸ್ತರಿಸಿದೆ.

ಈ ಹಿಂದೆ ಮಧ್ಯಂತರ ಪರಿಹಾರಕ್ಕೆ ಸಂಬಂಧಿಸಿದಂತೆ ನಾಲ್ಕು ತಿಂಗಳು ಕಾಯುವಂತೆ ಹೇಳಲಾಗಿತ್ತು. ಆದರೆ, ಹೊಸ ವಿಸ್ತರಣೆ ಯೋಜನೆಯ ಅನ್ವಯ ಸರಕಾರ ಮಧ್ಯಂತರ ಪರಿಹಾರವಾಗಿ ಈ ವರ್ಷ ಏ.1 ರಿಂದ ಶೇ.30 ರಷ್ಟು ವೇತನಗಳನ್ನು ಹೆಚ್ಚಿಸುವಂತೆ ಮನವಿ ಸಲ್ಲಿಸಲಾಗಿದೆ ಎಂದು ರಾಜ್ಯ ಸರಕಾರಿ ನೌಕರರ ಸಂಘದ ಅಧ್ಯಕ್ಷ ಬಿ.ಪಿ.ಮಂಜೇಗೌಡ ತಿಳಿಸಿದ್ದಾರೆ.

ಮುಂದಿನ ವರ್ಷ ವಿಧಾನಸಭಾ ಚುನಾವಣೆಗಳು ನಡೆಯುತ್ತಿರುವುದರಿಂದ ವೇತನ ಆಯೋಗ ಜನವರಿವರೆಗೂ ತಡಮಾಡದೆ ನವೆಂಬರ್‌ನಲ್ಲಿ ವರದಿ ನೀಡಬೇಕು. ರಾಜ್ಯದಲ್ಲಿ 6.4 ಲಕ್ಷ ಉದ್ಯೋಗಿಗಳು ಕಾರ್ಯನಿರ್ವಹಿಸುತ್ತಿದ್ದೇವೆ. ನಾವು ನಮ್ಮ ವೇತನ ಬಾಕಿ ಪಡೆಯಲು ಬಹಳ ದೀರ್ಘಕಾಲದಿಂದ ಕಾಯುತ್ತಿದ್ದೇವೆ. ಹೀಗಾಗಿ, ಸಕಾಲಕ್ಕೆ ಆಯೋಗ ವರದಿ ಸಲ್ಲಿಸಲು ಮತ್ತು ಮಧ್ಯಂತರ ಪರಿಹಾರ ನೀಡಲು ವಿಫಲವಾದರೆ ನಾವು ನೇರವಾಗಿ ಮುಖ್ಯಮಂತ್ರಿ ಬಳಿ ನಮ್ಮ ಬೇಡಿಕೆಗಳನ್ನು ಮಂಡಿಸಬೇಕಾಗುತ್ತದೆ ಎಂದು ಅವರು ಹೇಳಿದ್ದಾರೆ.

ನಮ್ಮ ಸಮಿತಿಯ ಪದಾಧಿಕಾರಿಗಳು ಆಯೋಗದ ಅಧ್ಯಕ್ಷ ಎಂ.ಆರ್.ಶ್ರೀನಿವಾಸಮೂರ್ತಿಯನ್ನು ಭೇಟಿ ಮಾಡುವ ಪ್ರಯತ್ನ ನಡೆಸಿದ್ದೆವು. ಆದರೆ, ಅವರ ಭೇಟಿ ಸಾಧ್ಯವಾಗಿಲ್ಲ. ಒಂದೆರಡು ದಿನಗಳಲ್ಲಿ ಮತ್ತೊಮ್ಮೆ ಭೇಟಿಯಾಗಿ ನಮ್ಮ ಹೊಸ ಬೇಡಿಕೆಗಳನ್ನು ಸಲ್ಲಿಸಲಿದ್ದೇವೆ ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News