×
Ad

ಪ್ರತಿರೋಧ ಸಮಾವೇಶಕ್ಕೆ ಹರಿದು ಬಂದ ಜನಸಾಗರ

Update: 2017-09-12 18:38 IST

ಬೆಂಗಳೂರು, ಸೆ.12: ಹಿರಿಯ ಪತ್ರಕರ್ತೆ, ಹೋರಾಟಗಾರ್ತಿ ಗೌರಿ ಲಂಕೇಶ್ ಹತ್ಯೆ ಖಂಡಿಸಿ ನಡೆದ ಪ್ರತಿರೋಧ ಸಮಾವೇಶದ ಮೆರವಣಿಗೆಯಲ್ಲಿ ಸಾವಿರಾರು ಮಂದಿ ಪಾಲ್ಗೊಂಡಿದ್ದು, ಸೆಂಟ್ರಲ್ ಕಾಲೇಜ್ ಮೈದಾನದಲ್ಲಿ ಸೇರಿದರು. ‘ನಾನು ಗೌರಿ, ನಾವೆಲ್ಲರೂ ಗೌರಿ’ ಘೋಷಣೆಯೊಂದಿಗೆ ಗೌರಿ ಲಂಕೇಶ್‌ರನ್ನು ರ‍್ಯಾಲಿಯುದ್ದಕ್ಕೂ ಸ್ಮರಿಸಿದರು.

ಮಂಗಳವಾರ ಗೌರಿ ಲಂಕೇಶ್ ಹತ್ಯೆ ವಿರೋಧಿ ಹೋರಾಟ ವೇದಿಕೆ ಇಲ್ಲಿನ ಸಿಟಿ ರೈಲ್ವೆ ನಿಲ್ದಾಣದಿಂದ ಸೆಂಟ್ರಲ್ ಕಾಲೇಜು ಮೈದಾನದಲ್ಲಿ ನಡೆದ ಪ್ರತಿರೋಧ ಸಮಾವೇಶದವರೆಗೂ ಹಮ್ಮಿಕೊಂಡಿದ್ದ ಮೆರವಣಿಗೆಯಲ್ಲಿ ಸಾವಿರಾರು ಜನರು ಪಾಲ್ಗೊಂಡು, ಕಾಲ್ನಡಿಗೆಯಲ್ಲಿಯೇ ವೇದಿಕೆಯತ್ತ ಸಾಗಿದರು.

‘ನಾನು ಗೌರಿ, ನಾವೆಲ್ಲರೂ ಗೌರಿ’ ಎಂಬ ಭಿತ್ತಿಪತ್ರಗಳನ್ನು ಹಿಡಿದು, ತಲೆಗೆ ಕಪ್ಪುಬಟ್ಟೆ ಕಟ್ಟಿದ್ದ ಸಾವಿರಾರು ಪ್ರತಿಭಟನಾಕಾರರು ಕಪ್ಪು ಬಣ್ಣದ ಛತ್ರಿಗಳನ್ನು ಹಿಡಿದು ಗೌರಿ ಲಂಕೇಶ್‌ರನ್ನು ಕೊಲ್ಲಬಹುದು, ಆದರೆ, ಅವರ ವಿಚಾರಗಳನ್ನಲ್ಲ ಸೇರಿದಂತೆ ಅನೇಕ ಘೋಷಣೆಗಳನ್ನು ಮೆರವಣಿಗೆಯಲ್ಲಿ ಕೂಗಿದರು.

ಅದೇ ರೀತಿ, ವಿವಿಧ ಸಾಂಸ್ಕೃತಿಕ ತಂಡಗಳು, ಜಾನಪದ ಕಲಾತಂಡಗಳೊಂದಿಗೆ, ಭಜನೆ, ಗೌರಿ ಪರವಾದ ಗೀತರೂಪಕ ಹಾಗೂ ಕ್ರಾಂತಿಗೀತೆಗಳನ್ನು ಹಾಡುತ್ತಾ ಮೆರವಣಿಗೆಯಲ್ಲಿ ಸಾಗಿ, ಗೌರಿ ಹತ್ಯೆ ವ್ಯಕ್ತಿಯ ಹತ್ಯೆಯಲ್ಲ, ಅದು ವಿಚಾರದ ಹತ್ಯೆ. ಇಂತಹ ಹೇಯ ಕೃತ್ಯಗಳಿಂದ ವಿಚಾರಗಳನ್ನು ಪ್ರತಿಪಾದಿಸುವವರನ್ನು ತಡೆಯಲು ಯಾವುದೇ ಕಾರಣಕ್ಕೂ ಸಾಧ್ಯವಿಲ್ಲ ಎಂದು ಖಂಡಿಸಿದರು.

ಹರಿದು ಬಂದ ಬೆಂಬಲ: ಹಿರಿಯ ಸಾಹಿತಿಗಳು, ವಿಚಾರವಾದಿಗಳು, ಪ್ರಗತಿಪರರು, ಪತ್ರಕರ್ತರು, ಹೋರಾಟಗಾರರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಅದೇ ರೀತಿ, ಕೋಮು ಸೌಹಾರ್ದ ವೇದಿಕೆ, ಜನಶಕ್ತಿ ಕೇಂದ್ರ, ಎಸ್‌ಡಿಪಿಐ, ದಸಂಸ, ಮಹಿಳಾ ಸಂಘಟನೆಗಳು, ಪ್ರಾಂತ ರೈತ ಸಂಘ, ಆಪ್ ಪಕ್ಷ, ವಿದ್ಯಾರ್ಥಿ ಸಂಘಟನೆಗಳು, ಕನ್ನಡ ಪರ ಸಂಘಟನೆಗಳು ಸ್ವಯಂಪ್ರೇರಿತರಾಗಿ ಪಾಲ್ಗೊಂಡು ಗೌರಿ ಹತ್ಯೆ ಖಂಡಿಸಿದರು.

ಮುಸ್ಲಿಮ್ ಮಹಿಳೆಯರು ಭಾಗಿ: ಗೌರಿ ಲಂಕೇಶ್ ಹತ್ಯೆ ಖಂಡಿಸಿ ನಡೆದ ಬೃಹತ್ ಮೆರವಣಿಗೆಯಲ್ಲಿ ನೂರಾರು ಮುಸ್ಲಿಮ್ ಮಹಿಳೆಯರು ಬುರ್ಖಾ ಧರಿಸಿ ಪಾಲ್ಗೊಂಡು, ಗೌರಿ ಅಮರ್ ರಹೇ ಎಂದು ಕೂಗಿದರು. ಇದರಲ್ಲಿ ಮಹಿಳೆಯೊಬ್ಬರು ತನ್ನ ಮೂರು ವರ್ಷದ ಹೆಣ್ಣು ಮಗುವಿನ ಹಣೆಗೆ ‘ನಾನು ಗೌರಿ, ನಾವೆಲ್ಲರೂ ಗೌರಿ’ ಹೆಸರಿನ ಕಪ್ಪು ಪಟ್ಟಿಯನ್ನು ಕಟ್ಟಿದ್ದು ಮೆರವಣಿಗೆಯಲ್ಲಿ ಎಲ್ಲರನ್ನು ಆಕರ್ಷಿಸುವಂತೆ ಮಾಡಿತು.

ಬಂಧನಕ್ಕೆ ಪಟ್ಟು: ವಿಚಾರವಾದಿಗಳಾದ ಡಾ.ಎಂ.ಎಂ.ಕಲಬುರ್ಗಿ, ಗೌರಿಲಂಕೇಶ್, ನರೇಂದ್ರ ದಾಬೋಲ್ಕರ್, ಗೋವಿಂದಪನ್ಸಾರೆ ಅವರನ್ನು ಹತ್ಯೆ ಮಾಡಿದ ಆರೋಪಿಗಳನ್ನು ಶೀಘ್ರ ಬಂಧಿಸುವಂತೆ ಸಮಾವೇಶದಲ್ಲಿ ನೆರೆದಿದ್ದ ಅಸಂಖ್ಯಾತ ಮಂದಿ ಒಕ್ಕೊರಲಿನಿಂದ ಒತ್ತಾಯಿಸಿದರು.
ಬಿಗಿ ಭದ್ರತೆ: ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಖಂಡಿಸಿ ನಗರದಲ್ಲಿಂದು ನಡೆದ ಪ್ರತಿಭಟನಾ ಸಮಾವೇಶಕ್ಕೆ ಬಿಗಿ ಪೊಲೀಸ್ ಭದ್ರತೆ ಒದಗಿಸಲಾಗಿತ್ತು.

ಕೇಂದ್ರವಲಯ ಡಿಸಿಪಿ ಚಂದ್ರಗುಪ್ತ ಉತ್ತರವಲಯ, ಡಿಸಿಪಿ ಚೇತನ್‌ಸಿಂಗ್ ಹಾಗೂ ದಕ್ಷಿಣ ವಲಯ ಡಿಸಿಪಿ ಶರಣಪ್ಪ ಅವರ ನೇತೃತ್ವದಲ್ಲಿ ಸಮಾವೇಶದ ಭದ್ರತೆಗಾಗಿ 10 ಕೆಎಸ್‌ಆರ್‌ಪಿ ತುಕಡಿ, 8 ಎಸಿಪಿ, 12ಕ್ಕೂ ಹೆಚ್ಚು ಇನ್ಸ್‌ಪೆಕ್ಟರ್‌ಗಳನ್ನು ಭದ್ರತೆಗಾಗಿ ನಿಯೋಜಿಸಲಾಗಿತ್ತು. ಅದೇ ರೀತಿ, ಸಮಾವೇಶ ನಡೆದ ಮೈದಾನ ಹಾಗೂ ಸುತ್ತ ಮುತ್ತಲ ಪ್ರದೇಶದಲ್ಲಿ ಸಂಚಾರ ದಟ್ಟಣೆ ಉಂಟಾಗದಂತೆ ಡಿಸಿಪಿ ಶಿವಕುಮಾರ್ ನೇತೃತ್ವದಲ್ಲಿ ಸಂಚಾರಿ ಪೊಲೀಸರ ನಿಯೋಜನೆ ಮಾಡಲಾಗಿತ್ತು.

ನಗರದ ಸಿಟಿ ರೈಲು ನಿಲ್ದಾಣದಿಂದ ಮೆರವಣಿಗೆಗೆ ಚಿತ್ರದುರ್ಗದ ಮುರುಘಾಮಠದ ಮುರುಘ ರಾಜೇಂದ್ರ ಶರಣರು ಚಾಲನೆ ನೀಡಿದರು. ಹೋರಾಟಗಾರ್ತಿ ತೀಸ್ತಾ ಸೆಟಲ್ವಾಡ್, ನರ್ಮದಾ ಬಚಾವೋ ಆಂದೋಲನ ಹೋರಾಟಗಾರ್ತಿ ಮೇಧಾ ಪಾಟ್ಕರ್, ಖ್ಯಾತ ವಕೀಲ ಪ್ರಶಾಂತ್‌ಭೂಷಣ್, ಹೋರಾಟಗಾರರಾದ ಕೆ.ನೀಲಾ, ಸಿದ್ದನಗೌಡ ಪಾಟೀಲ್, ಮಾರುತಿ ಮಾನ್ಪಡೆ, ಕೆ.ಶಿವರಾಮ್, ಕೆ.ಎಸ್.ವಿಮಲಾ, ಎಸ್.ಆರ್.ಹಿರೇಮಠ್, ಬಿ.ಟಿ.ಲಲಿತಾ ನಾಯಕ್ ಸೇರಿ ಪ್ರಮುಖರಿದ್ದರು.

‘ಒಬ್ಬ ಗೌರಿಯನ್ನು ಹತ್ಯೆ ಮಾಡುವುದರಿಂದ ಪ್ರತಿಪಾದಿಸಿಕೊಂಡು ಬರುತ್ತಿರುವ ವಿಚಾರಗಳನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ. ಒಬ್ಬ ಗೌರಿ ಹತ್ಯೆಯಿಂದ ಸಾವಿರಾರು ಗೌರಿಗಳು ಹುಟ್ಟಿಕೊಳ್ಳುತ್ತಾರೆ. ಗೌರಿ ಹತ್ಯೆ ಪ್ರಜಾಪ್ರಭುತ್ವದ ಕಗ್ಗೊಲೆ’
-ಮುರುಘ ರಾಜೇಂದ್ರ ಶರಣರು, ಚಿತ್ರದುರ್ಗದ ಮುರುಘಾಮಠ

‘120 ಕೋಟಿ ನೋಟಿಸ್ ತಯಾರಿಸಿಕೊಳ್ಳಿ’

 ‘ಗೌರಿ ಲಂಕೇಶ್ ಹತ್ಯೆ ಹಿಂದೆ ಸಂಘ ಪರಿವಾರದ ಕೈವಾಡ ಇದೆ ಎಂದು ಆರೋಪಿಸಿದ್ದಕ್ಕೆ ನೋಟಿಸ್ ನೀಡಲಾಗುತ್ತಿದೆ. ಎಷ್ಟು ನೋಟಿಸ್‌ಗಳನ್ನು ಇವರು ನೀಡುತ್ತಾರೆ. ಅಲ್ಲದೆ, 120 ಕೋಟಿ ನೋಟೀಸ್ ತಯಾರಿಸಿಕೊಳ್ಳಲಿ, ನಾವೂ ನೋಟಿಸ್‌ಗೆ ಕಾನೂನು ಪ್ರಕಾರವೇ ಉತ್ತರ ನೀಡುತ್ತೇವೆ ಎಂದು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಪ್ರಗತಿಪರರು ಹೇಳಿದರು.

 ‘ಗೌರಿ ಲಂಕೇಶ್ ಹತ್ಯೆ ನಾಗರಿಕ ಸಮಾಜ ತಲೆತಗ್ಗಿಸುವಂತಹ ಕೃತ್ಯವಾಗಿದೆ. ಇಂತಹ ಸಂಸ್ಕೃತಿ ತೊಲಗಬೇಕು. ರಾಜ್ಯದಲ್ಲಷ್ಟೇ ಅಲ್ಲ, ದೇಶದಲ್ಲೆಡೆ ಇಂತಹ ಕೃತ್ಯಗಳು ನಡೆಯುತ್ತಿವೆ. ಇದನ್ನು ನಾವೆಲ್ಲರೂ ಖಂಡಿಸಬೇಕು’
-ಬಿ.ಟಿ.ಲಲಿತಾ ನಾಯಕ್, ಮಾಜಿ ಸಚಿವೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News