ಮಳೆ ನೀರುಗಾಲುವೆ ಕಾಮಗಾರಿ ಅಕ್ರಮ; ತನಿಖೆ ನಡೆಸಿ ಸೂಕ್ತ ಕ್ರಮ: ಸಚಿವ ಕೆ.ಜೆ.ಜಾರ್ಜ್
ಬೆಂಗಳೂರು, ಸೆ.12: ಬೃಹತ್ ಬೆಂಗಳೂರು ಮಹಾ ನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿ 842 ಕಿ.ಮೀ ಉದ್ದದ ಮಳೆ ನೀರುಗಾಲುವೆಗೆ ನಿರ್ಮಾಣದಲ್ಲಿನ ಅಕ್ರಮಗಳ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಬೆಂಗಳೂರು ನಗರ ಅಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್ ತಿಳಿಸಿದ್ದಾರೆ.
ಮಂಗಳವಾರ ವಿಧಾನಸೌಧದಲ್ಲಿನ ತನ್ನ ಕೊಠಡಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2012-13ರ ಅವಧಿಯಲ್ಲಿ 664.21 ಕೋಟಿ ರೂ.ಗಳ ವೆಚ್ಚದಲ್ಲಿ 53 ಕಿ.ಮೀ ಉದ್ದದ ಬೃಹತ್ ಕಾಲುವೆ ಅಭಿವೃದ್ಧಿಪಡಿಸಲಾಗಿದೆ ಎಂದು ಹೇಳಿದರು.
ಇದೀಗ ರಾಜ್ಯ ಸರಕಾರ ಕಳೆದ ಸಚಿವ ಸಂಪುಟದಲ್ಲಿ 800ಕೋಟಿ ರೂ.ವೆಚ್ಚದಲ್ಲಿ 132 ಕಿ.ಮೀ ಉದ್ದದ ಕಾಮಗಾರಿ ಪ್ರಗತಿಯಲ್ಲಿದೆ ಎಂದ ಅವರು, ನಗರದಲ್ಲಿ ಸುರಿದ ಬಾರಿ ಮಳೆಗೆ ಸಾರ್ವಜನಿಕ ಆಸ್ತಿಪಾಸ್ತಿ ಹಾನಿಯಾಗಿದ್ದು, ಒಳಚರಂಡಿ ವ್ಯವಸ್ಥೆ ಸರಿಪಡಿಸುವ ಜೊತೆಗೆ ಒತ್ತುವರಿ ತೆರವು ಕಾರ್ಯ ಕೈಗೆತ್ತಿಕೊಳ್ಳಲಾಗಿದೆ.
ಇದುವರೆಗೆ 1225 ಕಡೆಯ ಒತ್ತುವರಿಯನ್ನು ತೆರವುಗೊಳಿಸಲಾಗಿದೆ. ಇನ್ನೂ 728 ಪ್ರದೇಶದಲ್ಲಿ ತೆರವುಗೊಳಿಸುವ ವಿಚಾರದಲ್ಲಿ ಹಲವು ಪ್ರಕರಣಗಳು ನ್ಯಾಯಾಲಯದ ಮುಂದೆ ಇವೆ. ನಗರದಲ್ಲಿ ಅತಿ ಹೆಚ್ಚು ಮಳೆಯಿಂದ ಆಗಿರುವ ಹಾನಿ ತಡೆಗೆ ಹಲವು ಕ್ರಮಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ. ಜತೆಗೆ ಕೋರಮಂಗಲ, ಜೆ.ಸಿ.ರಸ್ತೆ, ಶಾಂತಿನಗರ ಬಸ್ ನಿಲ್ದಾಣ, ಎಚ್‌ಎಸ್‌ಆರ್ ಲೇಔಟ್, ಮಡಿವಾಳ ಕೆರೆ, ಅರಕೆರೆ, ಕೆ.ಆರ್.ಪುರಂನ ನಂದಗೋಕುಲ ಬಡಾವಣೆಗಳಲ್ಲಿ ಮಳೆಯಿಂದ ಆಗಿರುವ ಹಾನಿಗೆ ಕಾಮಗಾರಿಗಳನ್ನು ಕೈಗೆತ್ತಿಗೊಂಡಿದ್ದು ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದು ತಿಳಿಸಿದರು.
ಬಿಬಿಎಂಪಿ ವ್ಯಾಪ್ತಿಯಲ್ಲಿ ಕಸ ವಿಲೇವಾರಿ, ತ್ಯಾಜ್ಯದಿಂದ ಇಂಧನ ಉತ್ಪಾದನೆ ಘಟಕವು ಬರುವ ಮಾರ್ಚ್ ವೇಳೆಗೆ ಪೂರ್ಣ ಪ್ರಮಾಣದಲ್ಲಿ ಕಾರ್ಯಾರಂಭ ಆಗುವ ನಿರೀಕ್ಷೆ ಇದೆ ಎಂದ ಅವರು, ಕಸ ವಿಲೇವಾರಿಗೆ ಏಳು ಕಾಂಪೋಸ್ಟ್ ಘಟಕಗಳನ್ನು ಆರಂಭಿಸಲಾಗಿದೆ ಎಂದರು.
ಕಸ ವಿಲೇವಾರಿಗೆ ಶಾಶ್ವತ ಪರಿಹಾರ ಕಲ್ಪಿಸುವ ದೃಷ್ಟಿಯಿಂದ ಪೌರ ಕಾರ್ಮಿಕರ ಖಾಯಂ ನೇಮಕಾತಿ, ಅವರಿಗೂ ಬಯೋಮೆಟ್ರಿಕ್ ವ್ಯವಸ್ಥೆ ರೂಪಿಸಲಾಗುತ್ತಿದೆ. ಅಲ್ಲದೆ, ಹೆಣ್ಣೂರಿನ ಕಲ್ಲುಕ್ವಾರಿ ಸೇರಿ ವಿವಿಧ ಪ್ರದೇಶದಲ್ಲಿ ನಮ ಕ್ವಾರಿಗಳಿಗೆ ಕಸವನ್ನು ಭರ್ತಿ ಮಾಡಿ, ಆ ಪ್ರದೇಶದಲ್ಲಿ ಅರಣ್ಯಾಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು ಎಂದರು.
ಶೀಘ್ರದಲ್ಲೆ ರಸ್ತೆ ದುರಸ್ತಿ: ಮಳೆ ನಿಂತ ಬಳಿಕ ನಗರದಲ್ಲಿನ ಹದಗೆಟ್ಟಿರುವ ರಸ್ತೆಗಳನ್ನು ದುರಸ್ತಿ ಮಾಡಲಾಗುವುದು. ಅಲ್ಲದೆ, ಗುಂಡಿಗಳನ್ನು ಮುಚ್ಚುವ ಕೆಲಸ ಕೈಗೆತ್ತಿಕೊಳ್ಳಲಾಗುವುದು ಎಂದು ಕೆ.ಜೆ.ಜಾರ್ಜ್ ಇದೇ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದರು.
ಬೆಂಗಳೂರು ಮಹಾನಗರ ಪಾಲಿಕೆಗೆ 110ಹಳ್ಳಿಗಳ ಸೇರ್ಪಡೆ ವೇಳೆ ರಾಜಕಾಲುವೆ, ಕುಡಿಯುವ ನೀರು, ಕಸ ವಿಲೇವಾರಿಗೆ ಯಾವುದೇ ಮುನ್ನಚ್ಚರಿಕೆ ಕೈಗೊಂಡಿಲ್ಲ. ಹೀಗಾಗಿ ಇದೀಗ ಮಳೆ ನೀರು, ಕುಡಿಯುವ ನೀರು, ಕಸ ವಿಲೇವಾರಿ ಸಮಸ್ಯೆ ಆಗುತ್ತಿದೆ ಎಂದು ಅವರು ಆಕ್ಷೇಪಿಸಿದರು.
‘ಬಿಬಿಎಂಪಿಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮುಂದುವರಿಯಲಿದೆ. ಜೆಡಿಎಸ್ ಪಕ್ಷಕ್ಕೆ ಮೇಯರ್ ಸ್ಥಾನ ನೀಡುವ ಸಂಬಂಧ ಸಚಿವ ರಾಮಲಿಂಗಾರೆಡ್ಡಿ, ಆ ಪಕ್ಷದ ವರಿಷ್ಠ ದೇವೇಗೌಡ ಅವರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಿದ್ದು, ಶೀಘ್ರದಲ್ಲೆ ತೀರ್ಮಾನಿಸಲಿದ್ದಾರೆ’
-ಕೆ.ಜೆ.ಜಾರ್ಜ್ ಬೆಂಗಳೂರು ನಗರಾಭಿವೃದ್ಧಿ ಸಚಿವ