×
Ad

‘ಮಕ್ಕಳ ಹಕ್ಕುಗಳು’ : ಸೆ. 14ಕ್ಕೆ ದಕ್ಷಿಣ ಭಾರತ ಶಾಸಕರ ಸಮ್ಮೇಳನ’

Update: 2017-09-12 20:19 IST

ಬೆಂಗಳೂರು, ಸೆ. 12: ಜನಪ್ರತಿನಿಧಿಗಳಲ್ಲಿ ‘ಮಕ್ಕಳ ಹಕ್ಕುಗಳ’ ಕುರಿತು ಅರಿವು ಮೂಡಿಸುವ ನಿಟ್ಟಿನಲ್ಲಿ ದಕ್ಷಿಣ ಭಾರತದ ವಿವಿಧ ರಾಜ್ಯಗಳ ಶಾಸಕರ ಸಮ್ಮೇಳನವನ್ನು ಸೆ.14ರಂದು ಏರ್ಪಡಿಸಲಾಗಿದೆ ಎಂದು ವಿಧಾನ ಪರಿಷತ್ ಸಭಾಪತಿ ಡಿ.ಎಚ್. ಶಂಕರಮೂರ್ತಿ ತಿಳಿಸಿದ್ದಾರೆ.

ಮಂಗಳವಾರ ವಿಧಾನಸೌಧದಲ್ಲಿನ ತನ್ನ ಕೊಠಡಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಕ್ಕಳ ಹಕ್ಕುಗಳ ಕುರಿತು ಜಾಗತಿಕ ಅರಿವು ಮೂಡಿಸುವ ಕಾರ್ಯ ನಡೆಯುತ್ತಿದೆ. ಜನಪ್ರತಿನಿಧಿಗಳಲ್ಲಿ ಮಕ್ಕಳ ಹಕ್ಕುಗಳ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಈ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ದಕ್ಷಿಣ ಭಾರತದಲ್ಲಿ ಮೊಟ್ಟಮೊದಲ ಬಾರಿ ಶಾಸಕರಿಗಾಗಿ ಇಂಥ ಸಮಾವೇಶವನ್ನು ಪ್ರಥಮ ಬಾರಿಗೆ ಆಯೋಜಿಸಿದ್ದು, ಈ ಸಮಾವೇಶದಲ್ಲಿ ಆಂಧ್ರ, ಗೋವಾ, ಕೇರಳ, ತೆಲಂಗಾಣ, ಪುದುಚೇರಿ, ಮಹಾರಾಷ್ಟ್ರ ಮತ್ತು ತಮಿಳುನಾಡಿನ 50ಕ್ಕೂ ಹೆಚ್ಚುಮಂದಿ ಶಾಸಕರು ಹಾಗೂ ರಾಜ್ಯದ 30ಕ್ಕೂ ಹೆಚ್ಚು ಮಂದಿ ಸೇರಿದಂತೆ ಒಟ್ಟು 80 ಮಂದಿ ಶಾಸಕರು ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದರು.

ಸುದ್ದಿಗೋಷ್ಟಿಯಲ್ಲಿದ್ದ ಸರಕಾರದ ಮುಖ್ಯ ಸಚೇತಕ ಐವಾನ್ ಡಿಸೋಜ್ ಮಾತನಾಡಿ, ವಿವಿಧ ರಾಜ್ಯಗಳ ಮೇಲ್ಮನೆ ಮತ್ತು ಕೆಳಮನೆ ಶಾಸಕರುಗಳು, ಸಭಾಪತಿಗಳೂ ಈ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದು, ಕರ್ನಾಟಕದಿಂದ 30 ಕ್ಕೂ ಹೆಚ್ಚು ಶಾಸಕರು ನೋಂದಾಯಿಸಿಕೊಂಡಿದ್ದಾರೆಂದರು.

ಈ ಸಮಾವೇಶವನ್ನು ಸಿಎಂ ಸಿದ್ದರಾಮಯ್ಯ ಉದ್ಫಾಟಿಸಲಿದ್ದು, ಅಧ್ಯಕ್ಷತೆ ವಿಧಾನ ಪರಿಷತ್ ಸಭಾಪತಿ ಡಿ.ಎಚ್.ಶಂಕರಮೂರ್ತಿ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಸ್ಪೀಕರ್ ಕೆ.ಬಿ.ಕೋಳಿವಾಡ, ಕಾನೂನು ಸಚಿವ ಜಯಚಂದ್ರ ಮತ್ತು ಮಹಿಳೆ ಮತ್ತು ಮಕ್ಕಳ ಕಲ್ಯಾಣ ಸಚಿವೆ ಉಮಾಶ್ರೀ, ಯುನಿಸೆಫ್‌ನ ಭಾರತದ ಮುಖ್ಯಸ್ಥ ಡಾ. ಯಾಸ್ಮಿನ್ ಅಲಿ ಹಖ್ ಪಾಲ್ಗೊಳ್ಳಲಿದ್ದಾರೆ ಎಂದರು.

ವಿಪಕ್ಷದ ಮುಖ್ಯ ಸಚೇತಕ ಗಣೇಶ್ ಕಾರ್ಣಿಕ್ ಮಾತನಾಡಿ, ಅಂದಿನ ಸಮಾವೇಶದಲ್ಲಿ ಮಕ್ಕಳ ಹಕ್ಕುಗಳ ವಿವಿಧ ವಿಷಯಗಳ ಕುರಿತು ತಜ್ಞರು ವಿಷಯ ಮಂಡನೆ ಮಾಡಲಿದ್ದು, ಸಂಜೆ ಸಮಾರೋಪ ಸಮಾರಂಭದಲ್ಲಿ ಬೆಂಗಳೂರು ಘೋಷಣೆಯನ್ನು ಘೋಷಿಸಲಾಗುವುದು ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮೇಲ್ಮನೆ ಸದಸ್ಯರಾದ ಶರಣಪ್ಪಮಟ್ಟೂರು, ಚೌಡರೆಡ್ಡಿ ತೋಪಳ್ಳಿ, ಪರಿಷತ್ ಕಾರ್ಯದರ್ಶಿ ಮಹಾಲಕ್ಷ್ಮಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News