×
Ad

ಸಿಬಿಐ ತನಿಖೆ ಆಗುವವರೆಗೂ ತಾಳ್ಮೆಯಿಂದಿರಿ : ಬಿಜೆಪಿ ಮುಖಂಡರಿಗೆ ಸಚಿವ ಜಾರ್ಜ್ ಸಲಹೆ

Update: 2017-09-12 20:24 IST

ಬೆಂಗಳೂರು, ಸೆ. 12: ಡಿವೈಎಸ್ಪಿ ಎಂ.ಕೆ.ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ತಾನು ಯಾವುದೇ ತಪ್ಪು ಮಾಡಿಲ್ಲ. ನಾನು ನಿರ್ದೋಷಿ. ಹೀಗಾಗಿ  ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ಸ್ಪಷ್ಟಣೆ ನೀಡಿದ್ದಾರೆ.

ಮಂಗಳವಾರ ವಿಧಾನಸೌಧದಲ್ಲಿನ ತನ್ನ ಕೊಠಡಿಯಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಪ್ರೀಂ ಕೋರ್ಟ್ ಸಿಬಿಐ ತನಿಖೆಗೆ ವಹಿಸಿದೆ. ತನಿಖೆ ನಡೆದು ಸತ್ಯಾಂಶ ಹೊರ ಬರುವವರೆಗೂ ಎಲ್ಲರೂ ತಾಳ್ಮೆಯಿಂದ ಕಾಯಬೇಕು ಎಂದು ಬಿಜೆಪಿ ಮುಖಂಡರಿಗೆ ತಿಳಿಸಿದರು.

ಗಣಪತಿ ಆತ್ಮಹತ್ಯೆ ಪ್ರಕರಣವನ್ನು ಸುಪ್ರಿಂ ಕೋರ್ಟ್ ಸಿಬಿಐ ತನಿಖೆಗೆ ಆದೇಶಿಸುವ ಸಂದರ್ಭದಲ್ಲಿ ತನ್ನ ಹೆಸರನ್ನು ಎಲ್ಲಿಯೂ ಪ್ರಸ್ತಾಪಿಸಿಲ್ಲ. ಈ ಪ್ರಕರಣದ ತನಿಖೆಯನ್ನು 3 ತಿಂಗಳಲ್ಲಿ ಮುಗಿಸಿ, ಪ್ರಕರಣವನ್ನು ಯಾರು ಮಾಡಿದ್ದಾರೆಂಬುದನ್ನು ಪತ್ತೆ ಹಚ್ಚಿ ಎಂದು ನಿರ್ದೇಶಿಸಿದೆ. ಹೀಗಾಗಿ ಬಿಜೆಪಿ ನಾಯಕರು ತನಿಖೆ ಮುಗಿಯುವವರೆಗೂ ಕಾಯದೆ ತನ್ನ ರಾಜೀನಾಮೆಗೆ ಆಗ್ರಹಿಸುವುದು ಸಲ್ಲ ಎಂದು ಟೀಕಿಸಿದರು.

ತಮ್ಮ ಮೇಲಿನ ರಾಜಕೀಯ ದುರುದ್ದೇಶದಿಂದ ಬಿಜೆಪಿ ನಾಯಕರು ತನ್ನ ತೇಜೋವಧೆ ನಡೆಸಿದ್ದಾರೆ. ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ನನ್ನ ಯಾವುದೇ ಪಾತ್ರ ಇಲ್ಲ. ಹೀಗಿದ್ದರೂ ಬಿಜೆಪಿ ನಾಯಕರು ರಾಜೀನಾಮೆ ಕೇಳುತ್ತಿರುವುದು ರಾಜಕೀಯ ಪ್ರೇರಿತ ಎಂದು ಬಿಎಸ್‌ವೈ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ಡಿ.ಕೆ.ರವಿ ಆತ್ಮಹತ್ಯೆ ಪ್ರಕರಣದಲ್ಲೂ ನನ್ನ ಮೇಲೆ ಆರೋಪ ಹೊರಿಸಲಾಗಿತ್ತು. ಈ ಪ್ರಕರಣದ ಸಿಬಿಐ ತನಿಖಾ ವರದಿಯಲ್ಲಿ ನನ್ನ ವಿರುದ್ಧ ಒಂದು ಅಂಶವೂ ಇರಲಿಲ್ಲ. ಕೊನೆಗೆ ಕ್ಲೀನ್‌ಚಿಟ್ ನೀಡಲಾಗಿತ್ತು. ಇದನ್ನು ಬಿಜೆಪಿ ನಾಯಕರು ಅರಿಯಬೇಕು. ಬಿಜೆಪಿ ಮುಖಂಡರು ರವಿ ಅವರ ಸಿಬಿಐ ವರದಿಯನ್ನು ಓದಿದಂತಿಲ್ಲ ಎಂದು ಲೇವಡಿ ಮಾಡಿದರು.

ಯಾವುದೇ ವ್ಯಕ್ತಿಯ ಮೇಲೆ ಆರೋಪ ಮಾಡುವ ವೇಳೆ ಅವರಿಗೂ ಕುಟುಂಬ- ಹೆಂಡತಿ, ಮಕ್ಕಳು ಇರುತ್ತಾರೆಂಬ ಅರಿವಿರಬೇಕು. ವಿನಾಕಾರಣ ನನ್ನ ಮೇಲೆ ಆರೋಪ ಹೊರಿಸಿ ತೇಜೋವಧೆ ಮಾಡುವುದು ಒಳ್ಳೆಯ ಲಕ್ಷಣವಲ್ಲ ಎಂದ ಅವರು, ನ್ಯಾಯಾಂಗ ಹಾಗೂ ಸಿಬಿಐ ಮೇಲೆ ನನಗೆ ವಿಶ್ವಾಸವಿದೆ. ತನಿಖೆ ನಡೆಯಲಿ ಸತ್ಯಾಂಶ ಹೊರ ಬರುತ್ತದೆ ಎಂದು ಭರವಸೆ ವ್ಯಕ್ತಪಡಿಸಿದರು.

‘ಬೆಂಗಳೂರು ನಗರದಲ್ಲಿ ಬಿಜೆಪಿ ಬುಡವನ್ನೆ ಅಲುಗಾಡಿಸುವ ರೀತಿಯಲ್ಲಿ ಕಾಂಗ್ರೆಸ್ ಪಕ್ಷ ಸಂಘಟನೆ ಬಲಪಡಿಸುತ್ತಿರುವ ಹಿನ್ನೆಲೆಯಲ್ಲಿ ಅದನ್ನು ಸಹಿಸದ ಬಿಜೆಪಿ ಮುಖಂಡರು ತನ್ನ ವಿರುದ್ಧ ಸಲ್ಲದ ಆರೋಪ ಮಾಡುತ್ತಿದ್ದಾರೆ. ನಿದ್ದೆಯಲ್ಲಿದ್ದ ಬಿಜೆಪಿ ಮುಖಂಡರು ಅಮಿತ್ ಶಾ ರಾಜ್ಯಕ್ಕೆ ಬಂದು ಹೋದ ಬಳಿಕ ಎಚ್ಚೆತ್ತು ಕಾಂಗ್ರೆಸ್ ಮುಖಂಡರ ತೇಜೋವಧೆಗೆ ಮುಂದಾಗಿದ್ದಾರೆ’

-ಕೆ.ಜೆ.ಜಾರ್ಜ್ ಬೆಂಗಳೂರು ನಗರಾಭಿವೃದ್ಧಿ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News