ಮೋದಿ ಎಂಬ ವ್ಯಕ್ತಿ ಭಾರತದ ಹೆಸರನ್ನು ಹಾಳು ಮಾಡುತ್ತಿದ್ದಾರೆ: ಪ್ರತಿರೋಧ ಸಮಾವೇಶದಲ್ಲಿ ಜಿಗ್ನೇಶ್ ಮೆವಾನಿ
ಬೆಂಗಳೂರು, ಸೆ.12: "ಸಂಗಾತಿಗಳೇ ನಾವೆಲ್ಲರೂ ಹೊಸದಿಲ್ಲಿಗೆ ಹೋಗಿ, ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಹಾಗೂ ಪ್ರಧಾನಿ ನರೇಂದ್ರಮೋದಿಯ ಎದೆಯ ಮೇಲೆ ಕುಳಿತು, ನ್ಯಾಯ ಸಿಗುವವರೆಗೂ ಹೋರಾಟ ನಡೆಸೋಣ" ಎಂದು ಗುಜರಾತ್‌ನ ದಲಿತ ಹೋರಾಟಗಾರ ಜಿಗ್ನೇಶ್ ಮೆವಾನಿ ಕರೆ ನೀಡಿದ್ದಾರೆ.
ಮಂಗಳವಾರ ನಗರದ ಸೆಂಟ್ರಲ್ ಕಾಲೇಜು ಮೈದಾನದಲ್ಲಿ ಗೌರಿ ಲಂಕೇಶ್ ಹತ್ಯೆ ವಿರೋಧಿ ಹೋರಾಟ ವೇದಿಕೆಯಡಿಯಲ್ಲಿ ವಿವಿಧ ಸಂಘ ಸಂಸ್ಥೆಗಳು ಆಯೋಜಿಸಿದ್ದ ಪ್ರತಿರೋಧ ಸಮಾವೇಶದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
"ಜೊತೆಗೆ, ಗುಜರಾತ್‌ನ ಗಾಂಧಿ ನಗರಕ್ಕೂ ಹೋಗಿ ನರೇಂದ್ರಮೋದಿಯ ತಾಯಿಯನ್ನು ಭೇಟಿಯಾಗಿ ಇಂತಹ ನಾಲಾಯಕ್ ಮಗನಿಗೆ ಏಕೆ ಜನ್ಮ ಕೊಟ್ಟಿದ್ದೀರಾ ಎಂದು ಪ್ರಶ್ನೆ ಮಾಡಬೇಕಿದೆ" ಎಂದು ಜಿಗ್ನೇಶ್ ಮೆವಾನಿ ಆಕ್ರೋಶ ವ್ಯಕ್ತಪಡಿಸಿದರು. "ಮೋದಿ ಎಂಬ ವ್ಯಕ್ತಿ ಭಾರತದ ಹೆಸರು ಹಾಳು ಮಾಡುತ್ತಿದ್ದಾರೆ. ಅವರು ಒಬ್ಬ ನೀಚ ಮನಸ್ಸಿನ ವ್ಯಕ್ತಿ. ಗೌರಿ ಕೇಳಿದ್ದು ಕಲಬುರ್ಗಿಯನ್ನು ಕೊಂದವರು ಎಲ್ಲಿ ಎಂದು, ಇದಕ್ಕೆ ಉತ್ತರಿಸದೆ ಕೇಂದ್ರ ಸರಕಾರ ಗೌರಿಯನ್ನೇ ಕೊಂದಿದೆ ಎಂದು ಅವರು ಆರೋಪಿಸಿದರು.
ಗೌರಿಯ ಪುತ್ರನಾಗಿ ನಿಮ್ಮೆಲ್ಲರ ಸಮಕ್ಷಮದಲ್ಲಿ ಹೇಳುತ್ತಿದ್ದೇನೆ, ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿಸಲು ನನ್ನ ಕೊನೆಯ ಉಸಿರು ಇರುವವರೆಗೂ ಬಿಡುವುದಿಲ್ಲ. ಪ್ರಗತಿಪರ, ಜಾತ್ಯತೀತ ಭಾರತ ನಿರ್ಮಾಣ ಮಾಡುತ್ತೇನೆ ಎಂದು ಜಿಗ್ನೇಶ್ ಮೆವಾನಿ ಈ ಸಂದರ್ಭ ಶಪಥ ಮಾಡಿದರು.