ರಸ್ತೆ ಡಾಂಬರೀಕರಣದಲ್ಲಿ ಸಾವಿರಾರು ಕೋಟಿ ರೂ.ಗಳ ಅಕ್ರಮ: ಸಿಬಿಐ ತನಿಖೆಗೆ ವಹಿಸಲು ರಮೇಶ್ ಆಗ್ರಹ

Update: 2017-09-13 13:44 GMT

ಬೆಂಗಳೂರು, ಸೆ. 13: ನಗರದಲ್ಲಿ ಕಳೆದ 17 ತಿಂಗಳಲ್ಲಿ ನಡೆದ ರಸ್ತೆಗಳ ಡಾಂಬರೀಕರಣದಲ್ಲಿ ಸಾವಿರಾರು ಕೋಟಿ ಅವ್ಯವಹಾರ ನಡೆದಿದೆ. ಹೀಗಾಗಿ, ಇದನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಬಿಬಿಎಂಪಿ ಆಡಳಿತ ಪಕ್ಷದ ಮಾಜಿ ನಾಯಕ ಎನ್.ಆರ್.ರಮೇಶ್ ಆಗ್ರಹಿಸಿದ್ದಾರೆ.

ನಗರದಲ್ಲಿಂದು ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದಲ್ಲಿ 1500 ಕೋಟಿ ರೂ.ಗಳನ್ನು ಡಾಂಬರೀಕರಣಕ್ಕೆ ಖರ್ಚು ಮಾಡಲಾಗಿದೆ. ಆದರೆ, ಕಳೆಪೆ ಕಾಮಗಾರಿಯಿಂದ ಬಿಬಿಎಂಪಿ ಅಕ್ರಮ ಬಯಲಾಗಿದ್ದು, ಕೇವಲ 4 ತಿಂಗಳ ಅವಧಿಯಲ್ಲಿ ಇಪ್ಪತ್ತು ಸಾವಿರಕ್ಕೂ ಅಧಿಕ ರಸ್ತೆ ಗುಂಡಿಗಳು ಸೃಷ್ಟಿಯಾಗಿವೆ. ಕಳಪೆ ಗುಣಮಟ್ಟದ ಕಾಮಗಾರಿಯಿಂದ ಹೊಸದಾಗಿ ನಿರ್ಮಿಸಿದ 707 ಕಿ.ಮೀ. ಉದ್ದದ ರಸ್ತೆಗಳು ಸಂಪೂರ್ಣವಾಗಿ ಹಾಳಾಗಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪೈತಾನ್ ಯಂತ್ರಗಳ ಮೂಲಕ ರಸ್ತೆ ಗುಂಡಿಗಳನ್ನು ಮುಚ್ಚಲು 15.20 ಕೋಟಿ ರೂ.ಗಳಷ್ಟು ಅಕ್ರಮ ನಡೆದಿದೆ ಎಂದು ಟಿ.ವಿ.ಸಿ.ಸಿ. ವರದಿ ಹೇಳಿದೆ. ನಗರದ ಮುಖ್ಯ ರಸ್ತೆಗಳ ಗುಂಡಿಗಳನ್ನು ಮುಚ್ಚಲು 16.88 ಕೋಟಿ ರೂ.ಗಳಿಗೂ ಅಧಿಕ ವೆಚ್ಚ ಮಾಡಲಾಗಿದೆ. ಅಲ್ಲದೇ, ಲೋಕೋಪಯೋಗಿ ಇಲಾಖೆಯಿಂದ ಪಾಲಿಕೆಯ ವ್ಯಾಪ್ತಿಯ 217.43 ಕಿ.ಮೀ. ಉದ್ದದ ಮುಖ್ಯ ರಸ್ತೆಗಳ ಅಭಿವೃದ್ಧಿಗೆ 227.74 ಕೋಟಿ ಹಾಗೂ 490 ಕಿ.ಮೀ. ಉದ್ದದ ರಸ್ತೆಗಳ ಅಭಿವೃದ್ಧಿಗೆ 756.11 ಕೋಟಿ ರೂ.ಗಳಿಗೂ ಅಧಿಕ ಖರ್ಚು ಮಾಡಲಾಗಿದೆ ಎಂದು ಬಿಬಿಎಂಪಿ ಹೇಳಿವೆ ಎಂದು ತಿಳಿಸಿದರು. ನಗರದಲ್ಲಿ 20 ಸಾವಿರಕ್ಕೂ ಅಧಿಕ ಗುಂಡಿಗಳು ಕಾಣಿಸಿ ಕೊಂಡಿವೆ. ಆದರೆ, ಬಿಬಿಎಂಪಿ ಆಯುಕ್ತರು ಕೇವಲ 5 ಸಾವಿರ ಗುಂಡಿಗಳಿವೆ ಎಂದು ತಪ್ಪುಮಾಹಿತಿ ನೀಡಿದ್ದಾರೆ ಎಂದು ದೂರಿದರು.

 6.70 ಕೋಟಿ ರೂ.ಗಳ ವೆಚ್ಚದಲ್ಲಿ ಹೊಸದಾಗಿ ಡಾಂಬರೀಕರಣ ಮಾಡಿದ್ದ ಬಾಲಗಂಗಾಧರನಾಥಸ್ವಾಮಿ ಮೇಲು ಸೇತುವೆಯೂ ಕೇವಲ 2 ತಿಂಗಳೊಳಗೆ ಹಾಳಾಗಿದೆ. ರಸ್ತೆಗಳ ಅಭಿವೃದ್ಧಿ ಹೆಸರಿನಲ್ಲಿ ಕಮೀಷನ್ ಪಡೆಯಲು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ತಮ್ಮದೇ ಆದ ಅಧಿಕಾರಯುಕ್ತ ಸಮಿತಿಯನ್ನು ರಚಿಸಿಕೊಂಡಿದ್ದಾರೆ. ಈ ಸಮಿತಿಯು ಕಾಮಗಾರಿಗಳ ಅಂದಾಜು ಮೊತ್ತಕ್ಕಿಂತ ಶೇ.30 ರಿಂದ ಶೇ. 62 ರಷ್ಟಕ್ಕೂ ಹೆಚ್ಚಿನ ಮೊತ್ತವನ್ನು ನಮೂದಿಸುವ ಮೂಲಕ ಭಾರಿ ಭ್ರಷ್ಟಾಚಾರ ನಡೆಸಲಾಗಿದೆ ಎಂದು ಹೇಳಿದರು.

ರಸ್ತೆಗಳ ಅಭಿವೃದ್ಧಿ ಹೆಸರಿನಲ್ಲಿ ಗುತ್ತಿಗೆದಾರರಿಂದ ಕಮೀಷನ್ ಕಬಳಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವರಾದ ಕೆ.ಜೆ.ಜಾರ್ಜ್, ಎಚ್.ಸಿ.ಮಹದೇವಪ್ಪ, ನಗರಾಭಿವೃದ್ಧಿ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಮಹೇಂದ್ರ ಜೈನ್ ಮತ್ತು ಪಾಲಿಕೆ, ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳ ವಿರುದ್ಧ ಲೋಕಾಯುಕ್ತ, ಭ್ರಷ್ಟಾಚಾರ ನಿಗ್ರಹ ದಳಕ್ಕೆ ದೂರು ನೀಡಲಾಗಿದೆ ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News