ಮೀನುಗಾರಿಕೆ, ಕ್ರೀಡೆಯತ್ತ ಕೇಂದ್ರ ಸರಕಾರ ನಿರ್ಲಕ್ಷ: ಪ್ರಮೋದ್ ಮಧ್ವರಾಜ್

Update: 2017-09-13 13:55 GMT

ಬೆಂಗಳೂರು, ಸೆ.13: ರಾಜ್ಯದ ಮೀನುಗಾರಿಕೆ ಹಾಗೂ ಕ್ರೀಡಾ ಕ್ಷೇತ್ರಕ್ಕೆ ಕೇಂದ್ರ ಸರಕಾರದಿಂದ ಬರಬೇಕಾದ ಅನುದಾನದ ಕಡಿತ ಮಾಡುವ ಮೂಲಕ ಹಲವು ಯೋಜನೆಗಳ ಕುಂಠಿತಕ್ಕೆ ಕಾರಣವಾಗಿದೆ ಎಂದು ಮೀನುಗಾರಿಕೆ ಹಾಗೂ ಕ್ರೀಡಾ ಸಚಿವ ಪ್ರಮೋದ್ ಮಧ್ವರಾಜ್ ಆರೋಪಿಸಿದ್ದಾರೆ.

ಬುಧವಾರ ನಗರದ ಕೆಪಿಸಿಸಿ ಕಚೇರಿಯಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇದ್ರ ಮೋದಿ ಯುವಜನತೆಯ ಕುರಿತು ಪುಂಖಾನುಪುಂಖವಾಗಿ ಮಾತನಾಡುತ್ತಾರೆ. ಆದರೆ, ಕಾರ್ಯರೂಪಕ್ಕೆ ತರುವಲ್ಲಿ ಮಾತ್ರ ಸಂಪೂರ್ಣವಾಗಿ ನಿರ್ಲಕ್ಷಿಸುತ್ತಾರೆ ಎಂದು ಕಿಡಿಕಾರಿದರು.

ಮೀನುಗಾರಿಕೆ ಕ್ಷೇತ್ರಕ್ಕೆ ಸಂಬಂಧಿಸಿದ ಸುಮಾರು 5 ಕಾಮಗಾರಿಗಳಲ್ಲಿ ಕೇಂದ್ರ ಸರಕಾರ ಶೇ.75ರಷ್ಟು ಅನುದಾನ ನೀಡಬೇಕಾಗಿತ್ತು. ಆದರೆ, ನರೇಂದ್ರ ಮೋದಿ ಪ್ರಧಾನಿ ಹುದ್ದೆಗೆ ಏರುತ್ತಿದ್ದಂತೆ ಅನುದಾನವನ್ನು ಶೇ.60ಕ್ಕೆ ಇಳಿಸಿದರು. ಈಗ ಶೇ.50ಕ್ಕೆ ಬಂದಿದ್ದಾರೆ. ಆ ಮೂಲಕ ಕೇಂದ್ರ ಸರಕಾರ ಕೇವಲ ಬಾಯಿ ಮಾತಿನಲ್ಲಿ ದೇಶದ ಅಭಿವೃದ್ಧಿಯ ಕನಸು ಕಾಣುತ್ತಿದ್ದಾರೆ ಎಂದು ಅವರು ಲೇವಡಿ ಮಾಡಿದರು.

ಮೀನುಗಾರಿಕಾ ಬಂದರುಗಳನ್ನು ನಿರ್ಮಿಸಲು ದೊಡ್ಡ ಮೊತ್ತದ ಹಣ ಅವಶ್ಯವಿರುತ್ತದೆ. ಈ ಯೋಜನೆಗಳಿಗೆ ಕೇಂದ್ರ ಸರಕಾರ ಅನುದಾನ ಇಲ್ಲದಿದ್ದರೆ ಕಾಮಗಾರಿಗಳು ಕುಠಿತಗೊಳ್ಳುವುದರಲ್ಲಿ ಅನುಮಾನವೇ ಇಲ್ಲ. ಸುಮಾರು 275ಕೋಟಿ ರೂ.ಯೋಜನೆಯಲ್ಲಿ 202ಕೋಟಿ ರೂ.ನಷ್ಟು ಅನುದಾನವನ್ನು ಕೇಂದ್ರ ಸರಕಾರ ನೀಡಬೇಕಾಗಿತ್ತು. ಆದರೆ, ಕೇಂದ್ರ ಸರಕಾರ 2013-14ರಲ್ಲಿ 30ಕೋಟಿ ರೂ.ಸೇರಿದಂತೆ ಇಲ್ಲಿಯವರೆಗೂ ಕೇವಲ 43ಕೋಟಿ ರೂ.ಮಾತ್ರ ನೀಡಿದೆ ಎಂದು ಅವರು ಆರೋಪಿಸಿದರು.

ಕೇಂದ್ರ ಸರಕಾರ ಮೀನುಗಾರಿಕಾ ಬಂದರುಗಳಲ್ಲಿ ಹೂಳೆತ್ತುವ ಯೋಜನೆಗೆ 4.68ಕೋಟಿ ರೂ.ಹಣವನ್ನು ಬಿಡುಗಡೆ ಮಾಡಬೇಕಾಗಿತ್ತು. ಆದರೆ, ಇಲ್ಲಿಯವರೆಗೂ ಕೇವಲ 1ಕೋಟಿ ರೂ.ಮಾತ್ರ ಬಿಡುಗಡೆಗೊಳಿಸಿದೆ. ಹಾಗೂ ಉಳಿತಾಯ ಮತ್ತು ಪರಿಹಾರ ಕಲ್ಯಾಣ ಯೋಜನೆಗೆ ಹಣ ಬಿಡುಗಡೆ ಮಾಡಿಲ್ಲ ಎಂದು ಸಚಿವ ಪ್ರಮೋದ್ ಮಧ್ವರಾಜ್ ಆಕ್ರೋಶ ವ್ಯಕ್ತಪಡಿಸಿದರು.

 ಕ್ರೀಡಾ ಇಲಾಖೆಗೆ 52ಕೋಟಿ ರೂ.ಬರಬೇಕಾಗಿತ್ತು. ಆದರೆ, ಕಳೆದ ಮೂರು ವರ್ಷದಲ್ಲಿ ಕೇವಲ 10ಕೋಟಿ ರೂ.ಮಾತ್ರ ಬಂದಿದೆ. ರಾಜೀವ್‌ಗಾಂಧಿ ಖೇಲ್ ರತ್ನ ಸೇರಿದಂತೆ ಯಾವುದೇ ಕ್ರೀಡಾ ಅಭಿಯಾನಗಳನ್ನು ಕೇಂದ್ರ ಸರಕಾರ ಸಂಪೂರ್ಣ ನಿರ್ಲಕ್ಷವಹಿಸಿರುವುದು ಯುವ ಜನತೆಯನ್ನು ಆತಂಕಕ್ಕೆ ದೂಡಿದೆ ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News